ಎಲ್ಲರೂ ನೈತಿಕ ಮೌಲ್ಯ ಬೆಳೆಸಿಕೊಳ್ಳಿ : ಡಿ.ಆರ್‌. ಪಾಟೀಲ್

Everyone should develop moral values: D.R. Patil

ಎಲ್ಲರೂ ನೈತಿಕ ಮೌಲ್ಯ ಬೆಳೆಸಿಕೊಳ್ಳಿ  : ಡಿ.ಆರ್‌. ಪಾಟೀಲ್ 

ಹುಬ್ಬಳ್ಳಿ 11: ಪ್ರೌಢಶಾಲೆ, ಕಾಲೇಜುಗಳು ವ್ಯಕ್ತಿತ್ವ ರೂಪಿಸುವ ವೇದಿಕೆಗಳಾಗಿವೆ. ನಮಗೆ ದೊರೆತ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಣೆ ಮಾಡಬೇಕು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪ್ರತಿಯೊಬ್ಬರೂ ನೈತಿಕ ಮೌಲ್ಯ ಬೆಳೆಸಿಕೊಳ್ಳಬೇಕು ಎಂದು ಮಾಜಿ ವಿಧಾನಸಭಾ ಸದಸ್ಯರು ಮತ್ತು ಸಿದ್ಧಾರೂಢ ಸ್ವಾಮೀಜಿ ಟ್ರಸ್ಟ್‌ ಸಮಿತಿ (ಮೇಲ್ಮನೆ) ಅಧ್ಯಕ್ಷರಾದ ಡಿ.ಆರ್‌. ಪಾಟೀಲ್ ಹೇಳಿದರು.  ಇಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ರಾಜ್ಯ ಎನ್‌ಎಸ್‌ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಕೋಶ ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಜಂಟಿಯಾಗಿ ಹಮ್ಮಿಕೊಳ್ಳಲಾಗಿದ್ದ 5 ದಿನಗಳ ಎನ್‌ಎಸ್‌ಎಸ್ ಅಧಿಕಾರಿಗಳಿಗೆ ರಾಜ್ಯಮಟ್ಟದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ನಿಸ್ವಾರ್ಥ ಬದುಕು ರೂಢಿಸಿಕೊಳ್ಳಬೇಕಿದೆ. ಅವಿಭಕ್ತ ಕುಟುಂಬಗಳು ಇಂದು ಹಳ್ಳಿಗಳ್ಳಲ್ಲೂ ಸಹ ಕಡಿಮೆಯಾಗಿವೆ. ಮೌಲ್ಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಅವಕಾಶಗಳು ದೊರೆತಾಗ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ನಿರಂತರವಾಗಿ ಮೌಲ್ಯಯುತ ಶಿಕ್ಷಣ ನೀಡುವುದು ಅವಶ್ಯವಾಗಿದೆ. ವ್ಯಕ್ತಿತ್ವ ರೂಪಿಸಲು ವಿಶೇಷ ಗಮನ ಹರಿಸಬೇಕಾಗಿದೆ. ಎನ್‌ಎಸ್‌ಎಸ್ ಗೀತೆಯು ಬದುಕಿನಲ್ಲಿ ಬದಲಾವಣೆಗಳನ್ನು ತರುತ್ತದೆ. ಗಾಂಧೀಜಿ, ಸ್ವಾಮೀ ವಿವೇಕಾನಂದರ ಹಲವಾರು ವಿಚಾರಗಳು ನಮಗೆ ದಾರೀದೀಪವಾಗಿವೆ. ಸ್ವಯಂ ಸೇವಕರು ಆಯ್ಕೆ ಮಾಡಿಕೊಂಡ ಗ್ರಾಮಗಳನ್ನು ಯಾವ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂಬುದನ್ನು ಅವರ ವಿಚಾರಕ್ಕೆ ಬಿಟ್ಟು ಬಿಡಿ. ಪ್ರತಿಯೊಬ್ಬರ ಹೃದಯದೊಳಗೆ ದೇವರು ಇದ್ದಾನೆ. ಮಾನಸಿಕ ಬದಲಾವಣೆಗಳಲ್ಲಿ ನಾವು ಬದಲಾಗಿದ್ದೇವೆ. ಸರಿ, ತಪ್ಪು ಗೊತ್ತಿದ್ದರೂ ಸಹ ತಪ್ಪುಗಳನ್ನು ಮಾಡುತ್ತೇವೆ. ತಪ್ಪುಗಳು ಸಂಖ್ಯೆ ಕಡಿಮೆಯಾಗಬೇಕು. ಕಾರ್ಯಕ್ರಮಗಳನ್ನು ಅನುಷ್ಠಾನ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಶಿಕ್ಷಕರು ಜವಾಬ್ದಾರಿ ಸ್ಥಾನದಲ್ಲಿದ್ದು, ವಿದ್ಯಾರ್ಥಿಗಳಲ್ಲಿ ಬದಲಾವಣೆ ತರಬೇಕಾಗಿದೆ. ಸಮಾಜವನ್ನು ಸುಧಾರಿಸುವ ಕೆಲಸಗಳಾಗಬೇಕು. ಪಠ್ಯದ ಜೊತೆಗೆ ನಮ್ಮ ನಡೆ ನುಡಿ ಸುಧಾರಿಸುವ ಸಾಹಿತ್ಯ ಸೇರಿಸಬೇಕಾಗಿದೆ. ಆ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಸಂಬಂಧಗಳು ಬೆಳೆಯುವ ಹಾಗೆ ವಾತಾವರಣ ನಿರ್ಮಿಸಬೇಕಿದೆ. ಇಂದ್ರಿಯಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ಮಾಡುತ್ತವೆ. ಅದೇ ರೀತಿಯಲ್ಲಿ ನಮ್ಮ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ನಾವು ಎಡವಿದ ಸಂದರ್ಭಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ತಿಳಿ ಹೇಳಿದರು.  ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕರಾದ ಪ್ರೊ.ವೆಂಕಪ್ಪಯ್ಯ ಆರ್‌. ದೇಸಾಯಿ ಮಾತನಾಡಿ, ಸುಮಾರು 50 ವರ್ಷಗಳ ಕಾಲ ಎನ್‌ಎಸ್‌ಎಸ್ ಜೊತೆ ಒಡನಾಟ ಹೊಂದಿದ್ದೇನೆ. ಐಐಟಿ ಕರಗಪುರದಲ್ಲಿ ಸಹ ಎನ್‌ಎಸ್‌ಎಸ್ ನಲ್ಲಿ ಭಾಗಿಯಾಗಿದ್ದೆ. ಶಿಕ್ಷಕರು ಪ್ರೇರಣೆಯನ್ನು ನೀಡುವವರಾಗಬೇಕು. ಜೀವನವನ್ನು ಸಾರ್ಥಕ ಮಾಡಿಕೊಳ್ಳಲು ಪ್ರಯತ್ನಿಸಬೇಕಾಗಿದೆ. ಉತ್ತಮ ಜೀವನವನ್ನು ನಡೆಸಬೇಕು ಎಂದು ತಿಳಿಸಿದರು.  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಎನ್‌ಎಸ್‌ಎಸ್ ಕೋಶದ ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ ಮಾತನಾಡಿ, ಈಗಾಗಲೇ ಬೆಂಗಳೂರು, ಮೈಸೂರು ಜಿಲ್ಲೆಗಳಲ್ಲಿ ತರಬೇತಿ ಆಯೋಜನೆ ಮಾಡಲಾಗಿರುತ್ತದೆ. ಸುಮಾರು 350ಕ್ಕೂ ಅಧಿಕ ಎ???ಸಎಸ್ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಎನ್‌ಎಸ್‌ಎಸ್ ಸ್ಥಾಪನೆಯಾದಾಗ 40 ಸಾವಿರ ಸ್ವಯಂ ಸೇವಕರಿದ್ದರು. ಸುಮಾರು 6.5 ಲಕ್ಷ ಸ್ವಯಂ ಸೇವಕರು ಕರ್ನಾಟಕ ರಾಜ್ಯದಲ್ಲಿದ್ದಾರೆ. ಶೇ. 60 ರಷ್ಟು ಜನರು ಹೊಸ ಕಾರ್ಯಕ್ರಮ ಅಧಿಕಾರಿಗಳು ಇರುತ್ತಾರೆ. ಅವರಿಗೆ ತರಬೇತಿ ನೀಡುವುದು ತುಂಬಾ ಅವಶ್ಯಕವಾಗಿತ್ತು. ಆ ಹಿನ್ನೆಲೆಯಲ್ಲಿ ಇಂದಿನಿಂದ 5 ದಿನಗಳ ಕಾಲ ತರಬೇತಿ ಆಯೋಜಿಸಲಾಗಿದೆ. ತರಬೇತಿ ಪಡೆದವರನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಪರಿಗಣಿಸುವಂತೆ ಒತ್ತಡ ಹಾಕಲಾಗಿದೆ. ಮೌಲ್ಯಾಧಾರಿತ ಶಿಕ್ಷಣ ಒದಗಿಸಲು ಎನ್‌ಎಸ್‌ಎಸ್ ಸಹಕಾರಿಯಾಗಿದೆ. ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬಹುದು. ಅಲ್ಲದೇ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಎನ್‌ಎಸ್‌ಎಸ್ ನೆರವಾಗಲಿದೆ. ಪರೀಕ್ಷೆಗಳನ್ನು ಎದುರಿಸಲು ಸಹಾಯಕವಾಗಲಿದೆ. ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಸದೃಢ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸೋಣ. ಸ್ವಯಂ ಸೇವಕರನ್ನು ನೋಡಿ ಬೇರೆಯವರ ಮನಃ ಪರಿವರ್ತನೆ ಹೊಂದುತ್ತದೆ ಎಂದರು.  ಪ್ರೊ.ಜಿ.ಬಿ. ಶಿವರಾಜು ಮಾತನಾಡಿ, ಜೀವನದ ಮೌಲ್ಯ, ಪ್ರಾಮಾಣಿಕತೆ ಬೆಳೆಸಿಕೊಳ್ಳಲು ಎನ್‌ಎಸ್‌ಎಸ್ ನೆರವಾಗುತ್ತದೆ. ಪರೋಪಕಾರ ಜೀವನಕ್ಕೆ ನೀವು ಮುಂದಾಗಬೇಕು. ಮಾನವೀಯ ಮೌಲ್ಯಗಳನ್ನು ಹೊಂದಬೇಕು. ಸಮಾಜಕ್ಕೆ ತಮ್ಮದೇಯಾದ ಕೊಡುಗೆ ನೀಡಿ. ಒಳ್ಳೆಯ ನಾಗರೀಕರಾಗಿ ಬದುಕು ರೂಪಿಸಿಕೊಳ್ಳಿ ಎಂದು ವಿವರಿಸಿದರು.  ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.(ಡಾ) ಸಿ. ಬಸವರಾಜು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ನಡೆದು ಬಂದ ದಾರಿಯ ಬಗ್ಗೆ ಮೆಲುಕು ಹಾಕಬೇಕು. ಅದರಿಂದ ಎನ್‌ಎಸ್‌ಎಸ್ ಸುದೀರ್ಘ ಅವಧಿಯವರೆಗೆ ನಡೆದುಕೊಂಡು ಬಂದಿದೆ ಎಂಬುದು ತಿಳಿಯುತ್ತದೆ. ರಾಷ್ಟ್ರದ ಸುಮಾರು 420 ವಿಶ್ವವಿದ್ಯಾಲಯಗಳಲ್ಲಿ ಎನ್‌ಎಸ್‌ಎಸ್ ಸ್ಥಾಪನೆಯಾಗಿದೆ. ಸುಮಾರು 1 ಕೋಟಿ ಸ್ವಯಂ ಸೇವಕರಿದ್ದಾರೆ. ಮೌಲ್ಯಗಳು, ಉದ್ದೇಶಗಳಿಗೆ ನಾವು ಪ್ರಭಾವಕ್ಕೆ ಒಳಗಾಗಿದ್ದೇವೆ. ಸೇವಾ ಮನೋಭಾವವನ್ನು ನಾವು ಅರಿತುಕೊಳ್ಳಬೇಕು. ಸಮಾಜವನ್ನು ಪರಿವರ್ತಿಸಲು ಮುಂದಾಗಬೇಕಿದೆ. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಬದಲಾವಣೆಗಳಿಂದ ಮಾನವನ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತಿವೆ. ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ನಿಯಂತ್ರಿಸಬೇಕು. ಸಮಾಜದಲ್ಲಿ ಮೇಲು ಕೀಳು ಭಾವನೆಯಿಂದ ಹೊರಬರಬೇಕಿದೆ. ಸ್ವಾಭಿಮಾನ ಬದುಕು ನಿರ್ಮಾಣಕ್ಕೆ ಒತ್ತು ನೀಡಬೇಕು. ಬಾಲ್ಯ ವಿವಾಹ, ಸತಿ ಸಹಗಮನ, ಲೈಂಗಿಕ ಕಿರುಕುಳ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸಬೇಕಿದೆ. ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜವನ್ನು ಒಟ್ಟಾಗಿ ಸೇರಿಸಬೇಕು. ಅದರಿಂದ ಭೇದಭಾವ ತೊಡೆದುಹಾಕಿ ಎಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸುವುದು ಕಾರ್ಯಕ್ರಮಗಳ ಉದ್ದೇಶ. ಸಮುದಾಯದ ಸೇವೆ ಮಾಡಬೇಕಿದೆ. ಕೆಲವು ಸಮುದಾಯಗಳು ಸಮಾಜದ ಮುಖ್ಯ ವಾಹಿನಿಯಿಂದ ದೂರಯಿವೆ. ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು. ಇಂದು ಜಾತಿ ಸಂಘರ್ಷಗಳು ಹೆಚ್ಚಾಗುತ್ತಿವೆ. ಎನ್‌ಎಸ್‌ಎಸ್‌ನಿಂದ ಸಮಾಜವನ್ನು ಸುಧಾರಿಸುವ ಕೆಲಸವಾಗಲಿದೆ. ವಿಜ್ಞಾನ ತಂತ್ರಜ್ಞಾನ ಬೆಳೆದರೂ ಮೌಲ್ಯಗಳನ್ನು ನಾವು ಬೆಳೆಸಿಕೊಳ್ಳುತ್ತಿಲ್ಲ. ಮೌಲ್ಯವಿಲ್ಲದ ಸಮಾಜ ಚುಕ್ಕಾಣಿ ಇಲ್ಲದ ಹಡಗಿನಂತೆ. ನಿಸರ್ಗದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶವಿದೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಬೆಳೆಸಬೇಕಾಗಿದೆ. ವಿದೇಶಿಗರು ನಮ್ಮ ಸಂಸ್ಕೃತಿಗೆ ಮಾರು ಹೋಗಿದ್ದಾರೆ. ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಕೆಲಸ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕಿದೆ. ರಾಷ್ಟ್ರೀಯ ಸೇವಾ ಯೋಜನೆಯು ಎಲ್ಲಾ ಕ್ಷೇತ್ರಗಳಿಗೂ ಅವಶ್ಯಕವಾಗಿದೆ ಎಂದು ಬಣ್ಣಿಸಿದರು.ಕಾರ್ಯಕ್ರಮದಲ್ಲಿ ಗಾಂಧೀಜಿ ಕುರಿತಾದ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.  ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರಾದ ಎಸ್‌. ಎನ್‌.ಪರಾಂಡೆ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಸಚಿವೆ ಅನುರಾಧ ವಸ್ತ್ರದ, ಮೌಲ್ಯಮಾಪನ ಕುಲಸಚಿವೆ ಡಾ.ರತ್ನಾ ಭರಮಗೌಡರ, ಕೆಎಸ್‌ಎಲ್‌ಯು ಕಾನೂನು ಶಾಲೆಯ ಸಹಾಯಕ ಪ್ರಾಧ್ಯಾಪಕರಾದ ಐ.ಬಿ. ಬಿರಾದಾರ್, ಪ್ರಶಾಂತ್ ಎಡ್ರಾಮಿಮಠ್ ಸೇರಿದಂತೆ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು. ಐಶ್ವರ್ಯ ಭಟ ನಿರೂಪಿಸಿದರು. ಸಿಂಚನಾ ಅತಿಥಿಗಳನ್ನು ಪರಿಚಯಿಸಿದರು. ಆದ್ವಿ ವಂದಿಸಿದರು.