ಉಪ್ಪಾರ ಅಭಿವೃದ್ಧಿ ನಿಗಮಗೆ 50 ಕೋಟಿ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಎರಿ್ರಸ್ವಾಮಿ ಆಗ್ರಹ
ಕಂಪ್ಲಿ 29: ಕರ್ನಾಟಕ ರಾಜ್ಯ ಭಗೀರಥ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ರಾಜ್ಯ ಸರ್ಕಾರ ಕೂಡಲೇ ಸುಮಾರು 50 ಕೋಟಿ ಅನುದಾನ ನೀಡಬೇಕೆಂದು ಕರ್ನಾಟಕ ರಾಜ್ಯ ಭಗೀರಥ ಉಪ್ಪಾರ ಕೈಲಾಸ ಆಶ್ರಮ ಶೈಕ್ಷಣಿಕ ಸೇವಾ ಚಾರಿಟಬಲ್ ಟ್ರಸ್ಟಿನ ರಾಜ್ಯಾಧ್ಯಕ್ಷ ಎರಿ್ರಸ್ವಾಮಿ ಉಪ್ಪಾರ ಒತ್ತಾಯಿಸಿದರು. ತಾಲೂಕು ಸಮೀಪದ ಹೊಸ ದರೋಜಿ ಗ್ರಾಮದ ಕೆರೆ ಬಳಿಯಲ್ಲಿರುವ ಕೈಲಾಸ ಆಶ್ರಮದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಭಗೀರಥ(ಉಪ್ಪಾರ)ಕೈಲಾಸ ಆಶ್ರಮ ಶೈಕ್ಷಣಿಕ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಟ್ರಸ್ಟಿನ ವಿಶೇಷ ಸಭೆ ಹಾಗೂ ಡಾಕ್ಟರೆಟ್ ಸಮಾಜ ಸೇವಾ ರತ್ನ ಪಡೆದ ಮತ್ತು ಸಂಘ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಸನ್ಮಾನ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಉಪ್ಪಾರ ಸಮುದಾಯವು ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಈ ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ಹೆಚ್ಚಿನ ಅನುದಾನ ಮೀಸಲಿಡುವ ಜತೆಗೆ ಸೌಲಭ್ಯಗಳನ್ನು ಕಲ್ಪಿಸಬೇಕು. ಕುಲಶಾಸ್ತ್ರ ಅಧ್ಯಯನ ಸರ್ಕಾರದ ಮಟ್ಟದಲ್ಲಿದ್ದು, ಕೂಡಲೇ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಇಲ್ಲಿನ ಹೊಸ ದರೋಜಿಯ ಕೈಲಾಸ ಆಶ್ರಮ ಅಭಿವೃದ್ಧಿಗೆ ಸಚಿವ ಶಿವರಾಜ ತಂಗಡಿಗಿ ಅವರು 1 ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಮತ್ತು ಹಾಗೂ ಇಲ್ಲಿ ಕಲ್ಯಾಣ ಮಂಟಪ ನಿರ್ಮಾಣದ ಆಶ್ವಾಸನೆಯನ್ನು ಸಂಸದ ಮತ್ತು ಶಾಸಕರು ನೀಡಿದ್ದಾರೆ. ಒಗ್ಗಟ್ಟು, ಒಮ್ಮತದೊಂದಿಗೆ ಸಮಾಜದ ಅಭಿವೃದ್ಧಿ ಕೈಜೋಡಿಸಬೇಕು. ಮತ್ತು ಇಲ್ಲಿನ ಆಶ್ರಮದಲ್ಲಿ ಪ್ರತಿ ವರ್ಷ ಸರ್ವ ಧರ್ಮದ ಸಮನ್ವಯ ಸಮಾವೇಶ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು. ನಂತರ ಡಾಕ್ಟರೆಟ್ ಸಮಾಜ ಸೇವಾ ರತ್ನ ಪಡೆದ ಮತ್ತು ಸಂಘ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರುದ್ರ್ಪ, ಗೌರವಾಧ್ಯಕ್ಷ ಅಂಬಣ್ಣ, ಸಲಹೆಗಾರ ರಮೇಶ ಉಪ್ಪಾರ, ವಿಜಯನಗರ ಜಿಲ್ಲಾಧ್ಯಕ್ಷ ಸೋಮಪ್ಪ, ಹಾವೇರಿ ಜಿಲ್ಲಾಧ್ಯಕ್ಷ ಜಯಕುಮಾರ, ಮುಖಂಡರಾದ ನಾಗರಾಜ, ಆಂಜನೇಯಲು, ಅಶ್ವತಪ್ಪ, ವೆಂಕಟೇಶ, ರಮೇಶ, ಮಹೇಶ, ಹನುಮಂತಪ್ಪ ಸೇರಿದಂತೆ ಅನೇಕರಿದ್ದರು. ಡಿ.001: ಸಮೀಪದ ದರೋಜಿಯ ಕೈಲಾಸ ಆಶ್ರಮದಲ್ಲಿ ಡಾಕ್ಟರೆಟ್ ಸಮಾಜ ಸೇವಾ ರತ್ನ ಪಡೆದ ಮತ್ತು ಸಂಘ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನಿಸಲಾಯಿತು.