ಸಾಲ ಮಂಜೂರಾತಿ ಅರ್ಜಿಗಳನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸಿ ; ಈಶ್ವರ್ ಕಾಂದೂ

Dispose of loan sanction applications expeditiously; Ishwar Kandu


ಸಾಲ ಮಂಜೂರಾತಿ ಅರ್ಜಿಗಳನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸಿ ; ಈಶ್ವರ್ ಕಾಂದೂ 


ಕಾರವಾರ 23:   ಸರ್ಕಾರದ ವಿವಿಧ ಯೋಜನೆಗಳಾದ ಪಿಎಂ ಸ್ವನಿಧಿ, ಪಿಎಂ ಉದ್ಯೋಗ ಸೃಜನಾ ಯೋಜನೆ (ಪಿಎಂಇಜಿಪಿ), ಪಿಎಂಎಫ್‌ಎಂಇ, ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ಗಳಲ್ಲಿ ಸಾಲ ಮಂಜೂರಾತಿಗಾಗಿ ಬಾಕಿ ಉಳಿದಿರುವ ಎಲ್ಲಾ ಅರ್ಜಿಗಳನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ್ ಕಾಂದೂ ನಿರ್ದೇಶನ ನೀಡಿದರು 

ಅವರು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಅಗ್ರಣಿ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಬ್ಯಾಂಕ್‌ಗಳ ಜಿಲ್ಲಾ ಮಟ್ಟದ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಸರ್ಕಾರದ ಯೋಜನೆಗಳ ಸಾಲಸೌಲಭ್ಯ ಮುಂಜೂರಾತಿಗೆ ಬಾಕಿ ಉಳಿದಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ತಿಳಿಸಿದ ಅವರು, ಕರ್ನಾಟಕ ಬ್ಯಾಂಕ್ ವತಿಯಿಂದ ಪಿಎಂ ಸ್ವನಿಧಿ ಯೋಜನೆಯಲ್ಲಿ  36 ಫಲಾನುಭವಿಗಳಿಗೆ ಮಂಜೂರಾದ ಸಾಲವನ್ನು ವಿತರಣೆ ಮಾಡದೇ ವಿಳಂಬ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು ಒಂದು ವಾರದೊಳಗೆ ಮುಂಜೂರಾದ ಎಲ್ಲಾ ಫಲಾನುಭವಿಗಳಿಗೆ ಸಾಲದ ಮೊತ್ತವನ್ನು ಪಾವತಿಸುವಂತೆ ಸೂಚಿಸಿದರು. 

ಯೋಜನೆಗಳ ಸೌಲಭ್ಯ ಪಡೆಯಲು ಫಲಾನುಭವಿಗಳು ಬ್ಯಾಂಕ್‌ಗಳಿಗೆ ಬಂದಾಗ ಅವರ ಜೊತೆ ಬ್ಯಾಂಕ್ ಅಧಿಕಾರಿ/ ಸಿಬ್ಬಂದಿಗಳು ವರ್ತಿಸುವ ರೀತಿಯ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಬ್ಯಾಂಕ್ ಅಧಿಕಾರಿ ಮತ್ತು ಸಿಬ್ಬಂದಿಗಳು ಬ್ಯಾಂಕ್‌ಗಳಿಗೆ ಬರುವ ಗ್ರಾಹಕರ ಜೊತೆ ಸೌಜನ್ಯದಿಂದ ನಡೆದುಕೊಳ್ಳುವುದರ ಜೊತೆಗೆ ಸರ್ಕಾರದ ಯೋಜನೆಗಳ ಸೌಲಭ್ಯದ ಬಗ್ಗೆ ಮಾಹಿತಿ ನೀಡಬೇಕು ಎಂದರು. 

ಬ್ಯಾಂಕ್‌ಗಳಲ್ಲಿ ಯೋಜನೆಗಳ ಸೌಲಭ್ಯ ಪಡೆಯಲು ನೀಡುವ ಪರೀಶೀಲನಾ ಪಟ್ಟಿ ಬೇರೆ ಬೇರೆಯಾಗುದರಿಂದ ಫಲಾನುಭವಿಗಳಲ್ಲಿ ಗೊಂದಲ ಉಂಟಾಗುತ್ತಿದ್ದು ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯಲು ಒಂದೇ ರೀತಿಯ ಮಾನದಂಡ ಮತ್ತು ಪರೀಶೀಲನಾ ಪಟ್ಟಿಯನ್ನು  ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳಿಗೆ ಒದಗಿಸಬೇಕು ಇದರಿಂದ ಶೀಘ್ರದಲ್ಲಿ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ಪಡೆಯಲು ಸಹಾಯವಾಗಲಿದೆ ಎಂದರು. 

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಬಿಮಾ ಸುರಕ್ಷಾ ಯೋಜನೆಯ ಬಗ್ಗೆ ಗ್ರಾಹಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಕೆಲಸವನ್ನು ಬ್ಯಾಂಕ್‌ಗಳು ಮಾಡಬೇಕು ಎಂದ ಅವರು ಜಿಲ್ಲೆಯಲ್ಲಿ ಹಚ್ಚಿನ ಸಂಖ್ಯೆಯಲ್ಲಿ ಈ ಯೋಜನೆ ಸೌಲಭ್ಯ ಪಡೆಯಲು ಶ್ರಮಿಸಬೇಕು ಎಂದರು.   

ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಭಾರತಿ ವಸಂತ ಮಾತನಾಡಿ 2024ರ ನವೆಂಬರ್ ಅಂತ್ಯದವರೆಗೆ ಜಲ್ಲೆಯಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿ 2,43,026 ಮಂದಿಯನ್ನು ನೋಂದಣಿ ಮಾಡಲಾಗಿದೆ. ಪ್ರಧಾನ ಮಂತ್ರಿ ಬಿಮಾ ಸುರಕ್ಷಾ ಯೋಜನೆಯಡಿ 6,22,180 ಮಂದಿ ಹಾಗೂ ಅಟಲ್ ಪಿಂಚಣಿ ಯೋಜನೆಯಡಿ 98,414 ಮಂದಿಯನ್ನು ನೋಂದಣಿ ಮಾಡಲಾಗಿದೆ. ಸೆಪ್ಟೆಂಬರ್ 2024ರ ಅಂತ್ಯಕ್ಕೆ ಜಿಲ್ಲೆಯಲ್ಲಿ 22,974 ಕೋಟಿ ಠೇವಣಿ ಸಂಗ್ರಹಿಸಿ, 10,643 ಕೋಟಿ ಸಾಲ ವಿತರಿಸಲಾಗಿದ್ದು, ಸಾಲ ಮತ್ತು ಠೇವಣಿ ಅನುಪಾತ ಶೇ.46.33ರಷ್ಟಿದ್ದು ಕಳೆದ ಬಾರಿಗಿಂತ ಶೇ. 2.11 ರಷ್ಟು ಹೆಚ್ಚಾಗಿದೆ ಎಂದರು.  

ನಬಾರ್ಡ್‌ ಡಿಡಿಎಂ ಸುಶೀಲ್ ನಾಯ್ಕ ಮಾತನಾಡಿ ಬ್ಯಾಂಕ್‌ಗಳ ಕಳೆದ ಬಾರಿಯ ತ್ರೈಮಾಸಿಕ ಪ್ರಗತಿಗೆ ಹೊಲಿಸಿದರೆ. ಈ ಬಾರಿ ಬ್ಯಾಂಕ್‌ಗಳ ಸಿ ಡಿ ಅನುಪಾತ ಉತ್ತಮವಾಗಿದ್ದು, ಇದೇ ರೀತಿ  ಆರ್ಥಿಕ ಗುರಿ ಸಾಧಿಸುವಂತೆ ಬ್ಯಾಂಕ್‌ಗಳಿಗೆ ತಿಳಿಸದರು. 

ಇದೇ ಸಂದರ್ಭದಲ್ಲಿ ನಬಾರ್ಡ್‌ ವತಿಯಿಂದ ಪೋಟೆನ್ಸಿಯಲ್ ಕ್ರೆಡಿಟ್ ಲಿಂಕ್ಡ್‌ ಪ್ಲಾನ್ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. 

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸೋಮಶೇಖರ ಮೆಸ್ತಾ, ಯೋಜನಾ ನಿರ್ದೇಶಕ (ಡಿ.ಆರ್‌.ಡಿ.ಎ) ಕರೀಂ ಅಸದಿ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್, ಕೆನರಾ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕಿ ಬಿ.ಎಸ್ ಶುಭ, ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರು, ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಕೆ ಅಧಿಕಾರಿಗಳು ಇದ್ದರು.