ದೇವರ ದಾಸಿಮಯ್ಯನ ವಚನಗಳು ವ್ಯಕ್ತಿಯ ಆತ್ಮ ಶುದ್ಧಿಗೊಳಿಸುತ್ತವೆ: ಪ್ರೊ, ಎಂ ನಾಗರಾಜ

Devara Dasimayya's verses purify a person's soul: Prof. M Nagaraja


ದೇವರ ದಾಸಿಮಯ್ಯನ ವಚನಗಳು ವ್ಯಕ್ತಿಯ ಆತ್ಮ ಶುದ್ಧಿಗೊಳಿಸುತ್ತವೆ: ಪ್ರೊ, ಎಂ ನಾಗರಾಜ 

ವಿಜಯಪುರ 04: ದೇವರ ದಾಸಿಮಯ್ಯನ ವಚನಗಳು ವ್ಯಕ್ತಿಯ ಆತ್ಮ ಶುದ್ಧಿಗೊಳಿಸುತ್ತವೆ ಎಂದು ಮಹಿಳಾ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ, ಎಂ ನಾಗರಾಜ ಹೇಳಿದರು.  

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸ್ನಾತಕ ವಿಭಾಗದಲ್ಲಿ (ಎನ್‌ಇಪಿ) ಬುಧವಾರ ಆಯೋಜಿಸಿದ್ದ ದೇವರ ದಾಸಿಮಯ್ಯ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ದೇವರ ದಾಸಿಮಯ್ಯ ಅವರ ವಚನಗಳು ಸಮಾಜದಲ್ಲಿ ಮಹತ್ವದ ಪರಿವರ್ತನೆಗಳನ್ನು ಉಂಟುಮಾಡುವ ಶಕ್ತಿ ಹೊಂದಿವೆ. ಅವರ ವಚನಗಳಲ್ಲಿ ಶ್ರಮಪೂಜೆ, ಭಕ್ತಿ, ಮಾನವೀಯತೆ ಮತ್ತು ಸಮಾನತೆಯ ಆದರ್ಶಗಳು ಸ್ಪಷ್ಟವಾಗಿ ಪ್ರತಿಫಲಿಸುತ್ತವೆ. ಅವರ ವಚನಗಳು ಕೇವಲ ಭಕ್ತಿಯ ಸಾರವಲ್ಲ, ಅದು ಬದುಕಿನ ನೈತಿಕ ಮೌಲ್ಯಗಳಿಗೂ ದಾರೀದೀಪವಾಗಿದೆ. ಹೊಸ ತಲೆಮಾರಿಗೆ ದಾಸಿಮಯ್ಯನ ವಚನಗಳು ಸೌಹಾರ್ದತೆ, ಸತ್ಕಾರ್ಯ ಮತ್ತು ಮಾನವೀಯತೆಯ ಆಧಾರಶಿಲೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದರು. 

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಯುಜಿ ಸ್ನಾತಕ ವಿಭಾಗದ ವಿಶೇಷಾಧಿಕಾರಿ ಪ್ರೊ. ಸಕ್ಪಾಲ ಹೂವಣ್ಣ ಮಾತನಾಡಿ, ದೇವರ ದಾಸಿಮಯ್ಯ ಅವರ ವಚನಗಳು ಇಂದಿಗೂ ಸಮಾಜದ ಸುಧಾರಣೆಗೆ ಪ್ರೇರಣೆಯಾಗಿದ್ದು, ಅವು ಬದುಕಿಗೆ ಮಾರ್ಗದರ್ಶಕ ಬೆಳಕಾಗಿ ಕೆಲಸ ಮಾಡುತ್ತವೆ. ವಿದ್ಯಾರ್ಥಿನಿಯರು ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಲಾಯಿತು. ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ಆಚರಿಸುವ ಮೂಲಕ ಅವರ ಆದರ್ಶಗಳನ್ನು ಜ್ಞಾಪಿಸಿಕೊಳ್ಳಬೇಕು ಎಂದರು.  

ಕಾರ್ಯಕ್ರಮದಲ್ಲಿ ವಿಭಾಗದ ಸಂಯೋಜಕರಾದ ಡಾ. ಜಿ. ಸೌಭಾಗ್ಯ, ಡಾ.ಚಲುವರಾಜು ಮತ್ತು ಸಾಂಸ್ಕೃತಿಕ ಸಂಯೋಜಕ ಡಾ.ಮೆಹರಾಜ್ ಹಾಗೂ ಬೋಧಕ ಮತ್ತು ಬೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಮ್ರತಾ ಕೋಳಿ ಪ್ರಾರ್ಥಿಸಿದರು. ಪ್ರತಿಮಾ ಬಸವರಾಜ ಜುಂಜಾ ಸ್ವಾಗತಿಸಿದರು. ಸುಕನ್ಯ ಕಲ್ಲೂರ್ಕರ್ ನಿರೂಪಿಸಿದರು. ಕೀರ್ತನಾ ಬಸವರಾಜ ಹೊನವಾಡ ವಂದಿಸಿದರು.