ನರೇಗಾದಡಿ ಸಮುದಾಯ ಒಕ್ಕಲು ಕಣ ನಿರ್ಮಾಣ

Construction of Naregadadi community threshing floor

ನರೇಗಾದಡಿ ಸಮುದಾಯ ಒಕ್ಕಲು ಕಣ ನಿರ್ಮಾಣ

ಕಾರವಾರ 22 :- ರೈತರ ಭತ್ತದ ಬೆಳೆ ಕಟಾವು ಬಂತೆಂದರೆ ಸಾಕು ಅವರಿಗೆ ಕಣ ಮಾಡುವುದು ಬಹುದೊಡ್ಡ ಸಮಸ್ಯೆ. ಮಳೆಗಾಲದಲ್ಲಿ ಕೊಚ್ಚಿ ಹೋಗುವುದು, ಗಿಡಗಂಟಿ ಬೆಳೆಯುವುದು, ಹುಲ್ಲು ಬೆಳೆಯುವುದೆಲ್ಲ ಸರ್ವೇ ಸಾಮಾನ್ಯ. ಹೀಗಾಗಿ ಪ್ರತಿ ವರ್ಷವೂ ಬೆಳೆ ಕಟಾವು ವೇಳೆಯಲ್ಲಿ ಕಣ ತಯಾರಿ ಮಾಡುವುದೇ ಒಂದು ಕೆಲಸವಾಗಿ ಬಿಡುತ್ತಿತ್ತು. ಆದ್ರೆ ಇದೀಗ ಈ ಸಮಸ್ಯೆಗೆ ಉದ್ಯೋಗ ಖಾತ್ರಿ ಯೋಜನೆ ಅಂತ್ಯ ಹಾಡಿದೆ.      ಉತ್ತರ ಕನ್ನಡ ಜಿಲ್ಲೆ ಬಹು ಬೆಳೆಗಳನ್ನು ಬೆಳೆಯುವಂತಹ ನಾಡಗಿದ್ದರೂ ಭತ್ತದ ಬೆಳೆಯಂತೂ ಸರ್ವೇ ಸಾಮಾನ್ಯವಾಗಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಒಕ್ಕಲುತನಕ್ಕೆ ಜಾಗದ ಸಮಸ್ಯೆಯಿಂದಾಗಿ ರೈತರು ಪರದಾಡುವಂತಾಗಿದೆ. ಹೀಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಂದಾಜು 2,40,000 ರೂ ಸಹಾಯಧನ ನೀಡಲಾಗುತ್ತಿದ್ದು, ಸಮುದಾಯ ಒಕ್ಕಲು ಕಣ ನಿರ್ಮಾಣಕ್ಕೆ ಅನುಕೂಲವಾಗಿದೆ. 

ಈಗಾಗಲೇ ಶಿರಸಿ ತಾಲೂಕಿನ ಮೇಲಿನ ಓಣಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿಗೇಹಳ್ಳಿ ಹಾಗೂ ಮೇಲಿನ ಓಣಿಕೇರಿ ಗ್ರಾಮದಲ್ಲಿ 2023-24ನೇ ಸಾಲಿನಲ್ಲಿ ತಲಾ 2 ಲಕ್ಷ 40 ಸಾವಿರ ರೂ ವೆಚ್ಚದಲ್ಲಿ ಒಕ್ಕಲು ಕಣ ನಿರ್ಮಿಸಲಾಗಿದ್ದು ರೈತರ ಪ್ರಶಂಸೆಗೆ ಪಾತ್ರವಾಗಿದೆ.ಇನ್ನೂ ಈ ಒಕ್ಕಲು ಕಣ ಸಂಪೂರ್ಣ ಕಾಂಕ್ರಿಟ್ ಮಯವಾಗಿದ್ದು ನೀರು ಬೇಗ ಆವಿಯಾಗುವುದುದರ ಜೊತೆಗೆ ಸುತ್ತಲೂ ಕಟ್ಟೆ ಕಟ್ಟಿರುವುದರಿಂದ ಭತ್ತವು ಸುರಕ್ಷಿತವಾಗಿರುತ್ತದೆ. ಅಲ್ಲದೇ ಭತ್ತದ ಕೊಯ್ಲಿನ ನಂತರ ಅಡಿಕೆ ಕೊಯ್ಲು ಆರಂಭವಾಗುತ್ತಿದ್ದೂ ಅಡಿಕೆ ಒಣಗಿಸಲು ಹಾಗೂ ಬೇಳೆಕಾಳುಗಳನ್ನು ಒಣಗಿಸಲು ಸಹ ಇಲ್ಲಿನ ಗ್ರಾಮಸ್ಥರಿಗೆ ಅನುಕೂಲವಾಗಿದೆ.ಮಳೆಗಾಲ ಮುಗಿಯುವ ವೇಳೆಗೆ ಒಕ್ಕಲು ಕಣ ಮಾಡಲು ಭೂಮಿ ತಂಪಾಗಿರುತ್ತಿತ್ತು ಅಲ್ಲದೇ ಪ್ರತಿ ವರ್ಷವೂ ನೆಲ ಸಮಗೊಳಿಸಿ ಒಕ್ಕಲು ತನ ಮಾಡಲು ವಿಳಂಬವಾಗುತ್ತಿತ್ತು ಇದೀಗ ಉದ್ಯೋಗ ಖಾತ್ರಿಯಡಿ ನಿರ್ಮಿಸಿರುವ ಈ ಒಕ್ಕಲು ಕಣ ನಮಗೆ ಅನುಕೂಲ ಕಲ್ಪಿಸಿದೆ ಎಂದು ಫಲಾನುಭವಿಗಳಾದ ಮಾದೇವ, ಶ್ರೀಧರ್, ಗಣಪತಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.