ಸಾವಿತ್ರಿಬಾಯಿ ಫುಲೆ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಕುಲಪತಿ ವಿಜಯಾ ಕೋರಿಶೆಟ್ಟಿ

ಸಾವಿತ್ರಿಬಾಯಿ ಫುಲೆ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಕುಲಪತಿ ವಿಜಯಾ  ಕೋರಿಶೆಟ್ಟಿ Implement the ideals of Savitribai Phule in your life: Vice Chancellor Vijaya Korishetty

ವಿಜಯಪುರ 12 :  ಮಹಿಳಾ ಶಿಕ್ಷಣದ ಮಹತ್ವವನ್ನು ಅರಿತು ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು ಎಂದು ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು. 

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗ ಹಾಗೂ ಶಿಕ್ಷಣ ಅಧ್ಯಯನ ವಿಭಾಗಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ “ವಿಶೇಷ ಉಪನ್ಯಾಸ ಕಾರ್ಯಕ್ರಮ” ಉದ್ಘಾಟಿಸಿ ಮಾತನಾಡಿದರು. 

ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಣಕ್ಕಾಗಿ ಹೋರಾಡಿದ ಮಹಾನ್ ಮಹಿಳೆ. ಮಹಿಳೆಯರು ಶಿಕ್ಷಣ ಪಡೆಯಬಾರದೆಂಬ ಮನೋಭಾವ ಹೊಂದಿದ್ದ ಸಮಾಜದಲ್ಲಿಯೂ ಅವರು ದಿಟ್ಟವಾಗಿ ಹೋರಾಡಿ ಸಮಾಜದ ಏಳಿಗೆಗಾಗಿ ಶ್ರಮಿಸಿದರು. ವಿದ್ಯಾರ್ಥಿನಿಯರು ಇಂತಹ ಉಪನ್ಯಾಸಗಳ ಸದುಪಯೋಗ ಪಡೆದುಕೊಳ್ಳಬೇಕು ಅಷ್ಟೇ ಅಲ್ಲದೇ ಆರೋಗ್ಯವಂತ ಮಹಿಳೆ ಕುಟುಂಬದ ಸಂಪತ್ತು. ಆದ್ದರಿಂದ ಜಂಕ್ ಫುಡ್‌ನಿಂದ ಮಹಿಳೆಯರು ಎಚ್ಚರಿಕೆಯಿಂದ ಇರಬೇಕು. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಯೋಗಾಭ್ಯಾಸ ಮಾಡಬೇಕು ಹಾಗೂ ತಮ್ಮ ಸಮಸ್ಯೆಗಳ ನಿವಾರಣೆಗೆ ಆಪ್ತ ಸಮಾಲೋಚಕರನ್ನು ಸಂಪರ್ಕಿಸಬೇಕು ಎಂದರು. 

ಇದೇ ಸಂದರ್ಭದಲ್ಲಿ ಕುಲಸಚಿವ ಶಂಕರಗೌಡ ಎಸ್‌. ಸೋಮನಾಳ ಮಾತನಾಡಿ, ವಿದ್ಯಾರ್ಥಿನಿಯರು ವಿಶೇಷ ಉಪನ್ಯಾಸದ ಸದುಪಯೋಗ ಪಡೆದುಕೊಂಡು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದರು.  

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ  ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ  ಪ್ರಾಧ್ಯಾಪಕಿ ಡಾ. ಸುಷ್ಮಾ ಆರ್‌. ಪಾಟೀಲ್ ಮಾತನಾಡಿ, ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಣದ ಅಕ್ಷರದವ್ವ ಆಗಿದ್ದು, ಮಹಿಳೆಯರಿಗೆ ಶಿಕ್ಷಣದ ಹಕ್ಕು ದೊರಕಲು ಅಪಾರ ಹೋರಾಟ ನಡೆಸಿದರು. ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ತಾವೇ ಧ್ವನಿ ಎತ್ತಬೇಕು ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು. 

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಗಜಾನನ ಪ್ರಭು ಮಾತನಾಡಿ, ಇಂದಿನ ಸಮಾಜದಲ್ಲಿ ಒಬ್ಬ ಹೆಣ್ಣುಮಗಳು ಶಿಕ್ಷಣ ಪಡೆದರೆ, ಅವಳ ಇಡೀ ಕುಟುಂಬವೇ ಸ್ವಾಸ್ಥತೆಯನ್ನು ಪಡೆದುಕೊಳ್ಳುತ್ತದೆ. ಜನರ ಅನಾರೋಗ್ಯಕರ ಆಹಾರ ಪದ್ಧತಿಯಿಂದ ಅವರು ದೈಹಿಕವಾಗಿಯೂ ಹಾಗೂ ಮಾನಸಿಕವಾಗಿಯೂ ಬಲಹೀನರಾಗುತ್ತಿದ್ದಾರೆ. ಆದ್ದರಿಂದ ಉತ್ತಮ ಆಹಾರ ಪದ್ಧತಿ ಮತ್ತು ಯೋಗಾಭ್ಯಾಸವನ್ನು ರೂಢಿಸಿಕೊಂಡು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಕಾರಣರಾಗಬೇಕು ಎಂದರು 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ನಿಕಾಯದ ಡೀನರಾದ ಪ್ರೊ. ಸಕ್ಪಾಲ ಹೂವಣ್ಣ ಮಾತನಾಡಿ, ಪುಲೆ ಅವರ ಪ್ರಯತ್ನದಿಂದ ಇಂದು ದೇಶದಲ್ಲಿ ಮಹಿಳಾ ವಿಶ್ವವಿದ್ಯಾನಿಲಯಗಳು ಜನ್ಮ ತಾಳಿವೆ. ಸಮಾಜದ ಅಭಿವೃದ್ಧಿಗಾಗಿ ಅವರು ಬಹಳ ಶ್ರಮಿಸಿದ ಕಾರಣದಿಂದ ಇಂದಿನ ಮಹಿಳೆಯರಿಗೆ ಶಿಕ್ಷಣ ಪಡೆಯುವ ಅವಕಾಶ ದೊರಕಿದೆ ಎಂದರು. 

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗ ಹಾಗೂ ಶಿಕ್ಷಣ ಅದ್ಯಯನ ಮತ್ತು ಸಂಶೋಧನಾ ವಿಭಾಗಗಳ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ವಿವಿಧ ವಿಭಾಗಗಳ ವಿದ್ಯಾರ್ಥಿನಿಯರು ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. 

ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಹನುಮಂತಯ್ಯ ಪೂಜಾರಿ ಸ್ವಾಗತಿಸಿದರು, ಡಾ ಜ್ಯೋತಿ ಉಪಾಧ್ಯೆ ನಿರೂಪಿಸಿದರು. ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪ್ರಕಾಶ ವೈ ಸಣ್ಣಕ್ಕನವರ್ ಅತಿಥಿಗಳನ್ನು ಪರಿಚಯಿಸಿದರು, ಸ್ನಾತಕೋತ್ತರ ಶಿಕ್ಷಣ  ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ವೆಂಕೋಬಾ ನಾರಾಯಣಪ್ಪ ವಂದಿಸಿದರು.