ಬಳ್ಳಾರಿಯಲ್ಲಿ ಸಂಭ್ರಮದ ಸಂತ ಸೇವಾಲಾಲ್ ಜಯಂತಿ ಆಚರಣೆ
ಬಳ್ಳಾರಿ 16: ಮಾನವ ಕುಲವು ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದ ಮಹಾನ್ ಸಂತ ಸೇವಾಲಾಲರು ಎಂದು ಶಿವಮೊಗ್ಗ ಜಿಲ್ಲೆಯ ಮಲವಗೊಪ್ಪದ ಸಹ ಪ್ರಾಧ್ಯಾಪಕರಾದ ನಾಗೇಂದ್ರ ನಾಯ್ಕ್.ಕೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಸೇವಾಲಾಲರು ತಮ್ಮ ತತ್ವಗಳ ಮೂಲಕ ಲೋಕಕ್ಕೆ ಜ್ಞಾನದ ಮೂಲಕ ಮುಕ್ತಿ ಮಾರ್ಗ ತೋರಿಸಿದವರು. 1739ರಲ್ಲಿ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಭೀಮಾನಾಯ್ಕ ಮತ್ತು ಧರ್ಮಿಣಿ ಮಾತೆ ದಂಪತಿಯ ಮಗನಾಗಿ ಜನ್ಮತಾಳಿದ ಸಂತ ಸೇವಾಲಾಲ್ ಸೂರಗೊಂಡನಕೊಪ್ಪದಲ್ಲಿ ಅನೇಕ ಪವಾಡಗಳನ್ನು ನಡೆಸಿದ್ದಾರೆ ಎಂದು ತಿಳಿಸಿದರು.
ಬಂಜಾರರು ಈ ದೈವ ಪುರುಷನನ್ನು ‘ಮೋತಿವಾಳೋ’, ‘ಲಾಲ್ ಮೋತಿ' ಎಂದು ಕರೆಯುತ್ತಾರೆ. ಕಾರಣ ಮುಂಬಯಿಯ ‘ಸ್ಮಿತ್ ಭಾವುಚಾ’ ಎಂಬ ಸ್ಥಳದಲ್ಲಿ ಹಿಂದೆ ಪೋರ್ಚುಗೀಸರ ಹಡಗು ಸಿಕ್ಕಿ ಹಾಕಿ ಕೊಂಡಿತ್ತು. ಇದನ್ನು ಸೇವಾಲಾಲ್ ತಮ್ಮ ಜಾಣತನದಿಂದ ದಡ ಸೇರಿಸಿ ವೀರರಾಗಿದ್ದರು ಎಂದು ವಿವರಿಸಿದರು.
ದೇವಿ ಮರಿಯಮ್ಮ ಅವರಿಂದ ದೊರೆತ ದಿವ್ಯಶಕ್ತಿಯನ್ನು ಬಂಜಾರರು ಸೇರಿ ಅಲೆಮಾರಿ ಜೀವನ ನಡೆಸುವ ಸಮುದಾಯಗಳನ್ನು ಉದ್ಧರಿಸಲು ಬಳಸಿದ ಸಂತ ಇವರು ಎಂಬ ಕಥೆಗಳು ಇಂದಿಗೂ ಚಾಲ್ತಿಯಲ್ಲಿವೆ. ಸೇವಾಲಾಲರು ಅನೇಕ ಪವಾಡಗಳನ್ನು ಮಾಡಿದ್ದಾರೆ. ಬಂಡಿಯನ್ನು ನಗಾರಿಯನ್ನಾಗಿ ಬಾರಿಸುವುದು, ಮಣ್ಣನ್ನು ಹುಗ್ಗಿ ಪಾಯಸವನ್ನಾಗಿಸುವುದು, ನೀರನ್ನು ತುಪ್ಪ ಮಾಡಿ ಯಜ್ಞ ಮಾಡುತ್ತಿದ್ದರು ಎನ್ನುವ ಪ್ರತೀತಿ ಇದೆ. ಮಹಾರಾಷ್ಟ್ರದ ಪೌರಾಗಢದಲ್ಲಿ (ಪೌರಾದೇವಿಯ ಸ್ಥಳ) ಸೇವಾಲಾಲರು ಐಕ್ಯರಾದರು ಎಂದು ಇತಿಹಾಸ ಹೇಳುತ್ತದೆ ಎಂದರು.
ಇದಕ್ಕೂ ಮುನ್ನ ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ವೀರೆಶ್ ದಳವಾಯಿ ತಂಡದವರು ಸಂತ ಸೇವಲಾಲ್‌ರ ಕುರಿತ ಭಕ್ತಿ ಗಾಯನ ಪ್ರಸ್ತುತ ಪಡಿಸಿದರು. ಕಾರ್ಯಕ್ರಮದಲ್ಲಿ ಬಂಜಾರ ಸಮುದಾಯದ ಮಕ್ಕಳು ನೃತ್ಯ ಪ್ರದರ್ಶಿಸಿದರು.
*ಸಂಭ್ರಮದ ಮೆರವಣಿಗೆ:*
ಸಂತ ಸೇವಾಲಾಲ್ ಜಯಂತಿಯ ಅಂಗವಾಗಿ ಏರಿ್ಡಸಿದ್ದ ಮೆರವಣಿಗೆಯು ಸಂಭ್ರಮದಿಂದ ನಡೆಯಿತು. ಮೆರವಣಿಗೆಗೆ ನಗರದ ಡಾ.ರಾಜ್‌ಕುಮಾರ್ ರಸ್ತೆಯ ಮುನ್ಸಿಪಾಲ್ ಕಾಲೇಜು ಮೈದಾನದ ಆವರಣದಲ್ಲಿ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಬಿ.ಶ್ವೇತ ಅವರು ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.
ಡೊಳ್ಳು ಕುಣಿತ, ತಾಷೆ ರಾಂಡೋಲ್ ಸೇರಿದಂತೆ ಲಂಬಾಣಿ ಕಸೂತಿಯ ವೇಷ ಧರಿಸಿದ ಮಹಿಳೆಯರು ಭಾಗವಹಿಸಿ ಮೆರವಣಿಗೆಗೆ ಮೆರಗು ತಂದರು.
ಮೆರವಣಿಗೆಯು ಮುನಿಸಿಪಲ್ ಮೈದಾನದಿಂದ ಆರಂಭವಾಗಿ ಗಡಿಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ತೇರು ಬೀದಿ, ಹೆಚ್.ಆರ್.ಗವಿಯಪ್ಪ ವೃತ್ತದ ಮಾರ್ಗವಾಗಿ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆ ಕಾರ್ಯಕ್ರಮದವರೆಗೆ ತಲುಪಿ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜಿಲ್ಲಾ ಸೇವಾಲಾಲ್ ಬಂಜಾರ ಸಂಘದ ಅಧ್ಯಕ್ಷ ರಾಮುನಾಯ್ಕ್ ಸೇರಿದಂತೆ ಸಮಾಜದ ಮುಖಂಡರು, ಜನ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.