ಗೋವಾ ಮಾಜಿ ಶಾಸಕ ಹತ್ಯೆ ಮಾಡಿದ ಆಟೋ ಚಾಲಕ

Former Goa MLA killed by auto driver

ಬೆಳಗಾವಿ 15: ಬೆಳಗಾವಿಯಲ್ಲಿ ಆಟೋ ಚಾಲಕರೊಬ್ಬರು ಕ್ಷುಲ್ಲಕ ಕಾರಣಕ್ಕೆ ಗೋವಾ ಮಾಜಿ ಶಾಸಕರನ್ನು ಹತ್ಯೆ ಮಾಡಿದ ಘಟನೆ ಬೆಳಗಾವಿಯ ಖಡೇಬಜಾರ್ ನಲ್ಲಿ ಶ್ರೀನಿವಾಸ ಲಾಡ್ಜ್ ಮುಂದೆ ಶನಿವಾರ ನಡೆದಿದೆ.

ಗೋವಾದ ಪೋಂಡಾ ಕ್ಷೇತ್ರದ ಶಾಸಕರಾಗಿದ್ದ ಲಾವೂ ಮಾಮಲೇದಾರ್ ಅವರು ಪ್ರಯಾಣಿಸುತ್ತಿದ್ದ ಕಾರು, ಆಟೋಗೆ ಟಚ್ ಆಗಿದೆ. ನಂತರ ರಸ್ತೆಯಲ್ಲಿ ಎಷ್ಟೇ ಕೂಗಿದರೂ ಕೇರ್ ಮಾಡದೇ ಹೊರಟ ಮಾಜಿ ಶಾಸಕ ಲಾವೋ ಮಾಮಲೇದಾರ್ ಕಾರನ್ನು ಆಟೋ ಚಾಲಕ ಹಿಂಬಾಲಿಕೊಂಡು ಹೋಗಿದ್ದಾನೆ. ಬಳಿಕ ಲಾವೋ ಮಾಮಲೇದಾರ್ ಅವರು ಶ್ರೀನಿವಾಸ ಲಾಡ್ಜ್ ಬಳಿ ಬಂದು ನಿಂತಿದ್ದಾಗ ಆಟೋ ಚಾಲಕ ಜಗಳ ಆರಂಭಿಸಿದ್ದಾರೆ. ಮಾತಿಗೆ ಮಾತು ಬೆಳೆದು ಆಟೋ ಚಾಲಕ, ಲಾವೋ ಮಾಮಲೇದಾರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಆಗ ಸ್ಥಳೀಯರು ಹಾಗೂ ಲಾಡ್ಜ್‌ನ ಸಿಬ್ಬಂದಿ ಬಂದು ಇಬ್ಬರ ಜಗಳವನ್ನು ಬಿಡಿಸಿದ್ದಾರೆ.

ಹಲ್ಲೆ ಬಳಿಕ ಮಾಜಿ ಶಾಸಕ ತಾವು ತಂಗಿದ್ದ ಲಾಡ್ಜ್‌ಗೆ ಹೋಗುವಾಗ ಮೆಟ್ಟಿಲು ಏರಲು ಆಗದೇ ಕುಸಿದು ಬಿದ್ದು ಮೃತಟ್ಟಿದ್ದಾರೆ.

ಇನ್ನು ಘಟನೆಯ ಸಂಪೂರ್ಣ ದೃಶ್ಯ ಲಾಡ್ಜ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾರ್ಕೆಟ್ ಠಾಣೆ ಪೊಲೀಸರು ತಕ್ಷಣವೇ ಆಟೋ ಚಾಲಕ ಆರೋಪಿ ಮುಜಾಹಿದ್ ಶಕೀಲ್ ಸನದಿ ಎನ್ನುವಾತನನ್ನು ಬಂಧಿಸಿದ್ದಾರೆ.

ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಹಾಗೂ ಕಮಿಷನರ್​ ಭೇಟಿ, ಪರಿಶೀಲನೆ ನಡೆಸಿದ್ದು, ಮಾಜಿ ಶಾಸಕ ಲಾವೂ ಮಾಮಲೇದಾರ್ ಮೃತದೇಹವನ್ನು ಬೆಳಗಾವಿ ಬಿಮ್ಸ್‌ಗೆ ರವಾನೆ ಮಾಡಲಾಗಿದೆ.