ಭವ ಬಂಧನದ ಮುಕ್ತಿಗಾಗಿ ಗುರುವಿಗೆ ಶರಣಾಗಬೇಕು

ಲೋಕದರ್ಶನ ವರದಿ

ಗೋಕಾಕ 12: ಆಸೆ-ಅಮಿಷಗಳು ಮನುಷ್ಯನನ್ನು ಬಂಧಿಸುತ್ತವೆ, ಅವುಗಳಿಂದ ಕೇವಲ ಬಳಲಿಕೆ ಮತ್ತು ದುಃಖ ಸಿಗುತ್ತಿದ್ದು, ಭವ ಬಂಧನದ ಮುಕ್ತಿಗಾಗಿ ಗುರುವಿಗೆ ಶರಣಾಗಬೇಕೆಂದು ನದಿಇಂಗಳಗಾಂವನ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.

ಇಲ್ಲಿಯ ಶೂನ್ಯ ಸಂಪಾದನಾ ಮಠದಲ್ಲಿ ಜರುಗಿದ 141ನೇ ಮಾಸಿಕ ಶಿವಾನುಭಗೋಷ್ಠಿಯ ನೇತ್ರತ್ವ ವಹಿಸಿ 'ನರಜನ್ಮವ ತೊರೆದು ಹರಜನ್ಮವ ಮಾಡಿದ ಗುರು' ಎಂಬ ವಿಷಯದ ಕುರಿತು ಮಾನಾಡಿದ ಅವರು, ಭವ ಬಂಧನ ಮುಕ್ತಿಯೇ ಜೀವನದ ಗುರಿಯಾಗಿದ್ದು, ಅದಕ್ಕಾಗಿ ಗುರುವಿಗೆ ಶರಣಾಗಬೇಕೆಂದು ಹೇಳಿದರು.

ಚಿಂತಕರಾಗಿ ಆಗಮಿಸಿದ ಮುದ್ದೇಬಿಹಾಳಿನ ಮಾತ್ರೋಶ್ರೀ ಚೈತನ್ಯತಾಯಿ ಅವರು ಗುರುವಿನ ಮಹತ್ವ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ವೀರಶೈವ ಜಾಗೃತ ಮಹಿಳಾ ವೇದಿಕೆಗೆ ಲಿಂಗಾಯತ ಮಹಿಳಾ ವೇದಿಕೆ ಎಂದು ಮರುನಾಮಕರಣ ಮಾಡಿ ಅದರ ನೂತನ ಅಧ್ಯಕ್ಷರಾಗಿ ಶಕುಂತಲಾ ಕಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ಶ್ರೀಮಠದ ನೇತ್ರತ್ವದಲ್ಲಿ ಫೆಬ್ರವರಿ 1 ರಿಂದ 4ರ ವರಗೆ ನಡೆಯಲಿರುವ ಶರಣ ಸಂಸ್ಕೃತಿ ಉತ್ಸವವು ಸರ್ವಧರ್ಮ ಸಮಭಾವದ ನಾಡಿನ ಉತ್ಸವವಾಗಿದ್ದು ನಾಡಿನ ಸಮಸ್ತ ಮಹಾಜನತೆ ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ವೇದಿಕೆ ಮೇಲೆ ಬಸನಗೌಡ ಪಾಟೀಲ, ಈರಣ್ಣ ಕಡಾಡಿ, ಮೈಲಾರಲಿಂಗ ಉಪ್ಪಿನ ಡಿ.ಎನ್.ಬೆಟ್ಟದಗೌಡರ, ಡಿ.ಬಿ.ಪಾಟೀಲ, ಬಸವರಾಜ ಡಬ್ಬಳ, ಈಶ್ವರ ದಯಣ್ಣವರ ಇದ್ದರು. ಎಸ್.ಕೆ.ಮಠದ ನಿರೂಪಿಸಿ ವಂದಿಸಿದರು.