ಬಳ್ಳಾರಿ; ರಾಷ್ಟ್ರೀಯ ಹೆದ್ದಾರಿ ಪ್ರಗತಿ ಪರಿಶೀಲನಾ ಸಭೆ

ಲೋಕದರ್ಶನ ವರದಿ

ಬಳ್ಳಾರಿ 14: ರಾಷ್ಟ್ರೀಯ ಹೆದ್ದಾರಿ 63ರ ನಿರ್ಮಾಣದ ಹೊಣೆ ಹೊತ್ತುಕೊಂಡಿರುವ ಗ್ಯಾಮನ್ ಕಂಪನಿಯು ತಮಗೆ ವಹಿಸಿದ ಕಾಮಗಾರಿ ಕೆಲಸವನ್ನು ಅತ್ಯಂತ ಸಮರ್ಪಕವಾಗಿ ಮಾಡುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ-63, 150 ಎ ಮತ್ತು 13(ರಾ.ಹೆ-50) ರಸ್ತೆ ಅಗಲೀಕರಣಕ್ಕಾಗಿ ಸ್ವಾಧೀನಪಡಿಸಿಕೊಂಡ ಜಮೀನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಶಕ್ಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ಯಾಮನ್ ಕಂಪನಿ ಈಗ ನಿರ್ವಹಿಸುತ್ತಿರುವ ಕಾಮಗಾರಿಯ ಬಗ್ಗೆ ನನಗೆ ತೃಪ್ತಿ ಇಲ್ಲ ಎಂಬುದನ್ನು ತಮ್ಮ ಮಾತುಗಳಲ್ಲಿ ಹೊರಹಾಕಿದ ಡಿಸಿ ನಕುಲ್ ಅವರು, ಕಂಪನಿ ಸಮರ್ಪಕ ಕೆಲಸ ಮಾಡುತ್ತದೆ ಎಂಬ ಭರವಸೆ ನನ್ನಲ್ಲಿದೆ. ಜನರಿಂದ ಕೂಡ ದೂರುಗಳು ಬರುತ್ತಿರುವ ಹಿನ್ನೆಲೆ ತಮಗೆ ಈ ಸೂಚನೆ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದ ಅವರು ಗುಣಮಟ್ಟದ ಹಾಗೂ ನಿಗದಿಪಡಿಸಿದ ನಿಯಮಾವಳಿಗಳ ಅನುಸಾರ ಕೆಲಸ ಮಾಡುವಂತೆ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ-63,150 ಎ ಮತ್ತು 13(ರಾ.ಹೆ-50) ರಸ್ತೆ ಅಗಲೀಕರಣಕ್ಕಾಗಿ ಸ್ವಾಧೀನಪಡಿಸಿಕೊಂಡ ಜಮೀನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಶಕ್ಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಹಾಗೂ ಇನ್ನೀತರ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಜಿಲ್ಲಾಡಳಿತದ ಗಮನಕ್ಕೆ ತಂದಲ್ಲಿ ಅವುಗಳನ್ನು ಸರಿಪಡಿಸಿ ಅನುಕೂಲ ಮಾಡಿಕೊಡಲಾಗುವುದು ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಜೆಎಂ ಸೂರ್ಯವಂಶ್ ಅವರು ಅನೇಕ ಸಲಹೆ-ಸೂಚನೆಗಳನ್ನು ಈ ಸಂದರ್ಭದಲ್ಲಿ ನೀಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸತೀಶಕುಮಾರ್, ಉಪವಿಭಾಗಾಧಿಕಾರಿಗಳಾದ ಲೋಕೇಶ, ರಮೇಶ ಕೋನರೆಡ್ಡಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದ ವಿಶೇಷ ಭೂಸ್ವಾಧೀನಾಧಿಕಾರಿಗಳು ಮತ್ತಿತರರು ಇದ್ದರು.