ಸನ್‌ಸೈನ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ
ನೇಸರಗಿ 24: ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ನಂಬಿಕೆ ಇಟ್ಟುಕೊಂಡು ಓದಿದಾಗ ಯಶಸ್ಸು ಸಾಧ್ಯ ಎಂದು ಬೈಲಹೊಂಗಲ ತಾಲೂಕ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ವೈ.ಮೆಣಶಿನಕಾಯಿ ಹೇಳಿದರು.
ಇಲ್ಲಿಯ ಚನ್ನವೃಷಬೇಂದ್ರ ದೇವರಕೊಂಡ ಲೀಲಾಮಠದಲ್ಲಿ ಗುರುವಾರ ನಡೆದ ಜಾಲಿಕಟ್ಟಿ ಬಸವೇಶ್ವರ ಏಜುಕೇಶನ್ ಸೊಸೈಟಿಯ ಸನ್‌ಸೈನ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಮಕ್ಕಳು ಭಾವಿ ಪ್ರಜೆಗಳಾಗಿದ್ದು ಅವರು ಪ್ರತಿನಿತ್ಯ ಪಠ್ಯದ ವಿಷಯ ಮತ್ತು ಪ್ರಚಲಿತ ವಿಷಯಗಳ ಬಗ್ಗೆ ಗಮನ ಹರಿಸಿ, ಮಹಾತ್ಮರ ಪ್ರೇರಣಾತ್ಮಕ ಕಥೆಗಳನ್ನು ಓದುವ ಮೂಲಕ ಯಶಸ್ಸು ಗಳಿಸಿದವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಸಾಧಿಸಲು ಸಾಧ್ಯವೆಂದರು.
ನೇಸರಗಿ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಈರಣ್ಣ ಸೋಮಣ್ಣವರ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಮೊಬೈಲ್ ಕಡೆ ಗಮನ ಹರಿಸದೆ ಓದಿನ ಕಡೆ ಹೆಚ್ಚು ಕಾಳಜಿ ವಹಿಸಿ ಓದಿದರೆ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವೆಂದರು.
ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್.ಬಿ.ಅಣ್ಣಿಗೇರಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳು ಓದುವದು ಅತೀ ಮುಖ್ಯವಾಗಿದೆ. ಪ್ರತಿಯೊಂದು ವಿಷಯಗಳಲ್ಲಿ ಉತ್ತಮ ಕೌಶಲ್ಯ ಪಡೆಯಲು ಶಿಕ್ಷಣ ತರಬೇತಿ ಪಡೆದುಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ವೀರಭದ್ರ ಚೋಬಾರಿ, ಸಂಸ್ಥೆಯ ಅಧ್ಯಕ್ಷ ಬಿ.ವಿ.ಅಣ್ಣಿಗೇರಿ, ಎಸ್‌ಸಿಕೆಸಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎನ್.ದೇಸಾಯಿ, ಯರಜರ್ವಿ ಎಚ್‌ಪಿಎಸ್ ಮಾದರಿ ಶಾಲೆಯ ಶಿಕ್ಷಕ ಎಸ್.ಕೆ.ನಾಗನೂರ, ನಿರ್ದೇಶಕರಾದ ಜಿ.ಎಸ್.ನಾಗನೂರ, ಕುಮಾರ ತುಳಜನ್ನವರ, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ವಿವಿಧ ಗಣ್ಯರನ್ನು ಸತ್ಕರಿಸಲಾಯಿತು.
ಮುಖ್ಯೋಪಾಧ್ಯಾಯ ಅಡಿವೆಪ್ಪ ಶಿಂತ್ರಿ ಸ್ವಾಗತಿಸಿದರು. ಉಪಮುಖ್ಯೋಪಾಧ್ಯಾಯ ತೇಜಸ್ವಿನಿ ಪತಂಗೆ, ಶಿಕ್ಷಕಿ ಕಾವೇರಿ ಬಡಿಗೇರ ನಿರೂಪಿಸಿದರು. ಶಿಕ್ಷಕಿ ಅಕ್ಷತಾ ವಂದಿಸಿದರು.