ಲೋಕದರ್ಶನ ವರದಿ
‘ದೇಶದಲ್ಲಿ ಪ್ರತಿ ಪ್ರಜೆಗೂ ಉಚಿತವಾಗಿ ಆರೋಗ್ಯ ಶಿಕ್ಷಣ ದೊರಕುವಂತಾಗಲಿ’
ರಾಯಬಾಗ 14: ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸದೇ, ಅವರ ಜಯಂತಿಯನ್ನು ಎಲ್ಲರೂ ಕೂಡಿಕೊಂಡು ಆಚರಿಸೋಣವೆಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.
ಸೋಮವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯಡಿ ಹಮ್ಮಿಕೊಂಡಿದ್ದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ 134ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಜೀವನ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ನಡೆಯಬೇಕು. ನಮ್ಮ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಉಚಿತವಾಗಿ ಆರೋಗ್ಯ ಮತ್ತು ಶಿಕ್ಷಣ ದೊರಕುವಂತೆ ಮಾಡಬೇಕೆಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಡಿ.ಎಮ್.ಐಹೊಳೆ ಅವರು ಮಾತನಾಡಿ, ನಮ್ಮ ದೇಶಕ್ಕೆ ಶ್ರೇಷ್ಠವಾದ ಸಂವಿಧಾನ ಮತ್ತು ಪ್ರತಿಯೊಬ್ಬರ ವಯಸ್ಕರಿಗೆ ಮತದಾನ ಹಕ್ಕು ನೀಡಿರುವ ಬಾಬಾಸಾಹೇಬ ಅಂಬೇಡ್ಕರ್ ಅವರು ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಅಂಬೇಡ್ಕರ್ ರವರು 1925ರಲ್ಲಿ ನಿಪ್ಪಾಣಿ ಪಟ್ಟಣಕ್ಕೆ ಭೇಟಿ ನೀಡಿದ ಸವಿನೆನಪಿಗಾಗಿ ಏ.15ರಂದು ನಿಪ್ಪಾಣಿಯಲ್ಲಿ ಶತಮಾನೋತ್ಸವ ಸಂಭ್ರಮ ಆಚರಿಸಲಾಗುತ್ತಿದ್ದು, ಎಲ್ಲ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಅವರು ಮಾತನಾಡಿ, ಅಂಬೇಡ್ಕರ್ ಅವರ ಕನಸು ನನಸು ಆಗಬೇಕಾದರೆ, ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು. ಅನ್ಯಾಯ, ಭ್ರಷ್ಟಾಚಾರ ಕಂಡು ಬಂದರೆ ಅದರ ವಿರುದ್ಧ ಸಂಘಟಿತರಾಗಿ ಹೋರಾಟ ಮಾಡಬೇಕೆಂದರು.
ಕಾಡೇಶ ಐಹೊಳೆ ಮತ್ತು ಮಹಾವೀರ ಸಾನೆ ಅವರು ಅಂಬೇಡ್ಕರ ಅವರ ಜೀವನ ಮತ್ತು ಹೋರಾಟದ ಬಗ್ಗೆ ಉಪನ್ಯಾಸ ನೀಡಿದರು.
ತಹಶೀಲ್ದಾರ ಎಸ್.ಆರ್.ಮುಂಜೆ, ಸಿಪಿಐ ಬಿ.ಎಸ್.ಮಂಟೂರ, ತಾ.ಪಂ.ಇಒ ಎಸ್.ಕೆ.ಕದ್ದು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ.ಎಸ್.ಚಂದರಗಿ, ತಾಲೂಕಾ ಅನುಷ್ಠಾನಾಧಿಕಾರಿಗಳಾದ ಶಿವಕುಮಾರ ಡಿ., ವಿನೋದ ಮಾವರಕರ, ಬಸವರಾಜಪ್ಪ ಆರ್., ಪರಮಾನಂದ ಮಂಗಸೂಳಿ, ಸುಭಾಷ ಭಜಂತ್ರಿ, ಎಸ್.ವಾಯ್.ಸನಮನಿ, ಎಮ್.ಬಿ.ಪಾಟೀಲ, ಕಲ್ಪನಾ ಕಾಂಬಳೆ, ವಿಶ್ವನಾಥ ಹಾರೂಗೇರಿ, ಗಣೇಶ ಕಾಂಬಳೆ, ಕಿರಣ ಕಾಂಬಳೆ, ಪೃಥ್ವಿರಾಜ ಜಾಧವ, ಸದಾನಂದ ಹಳಿಂಗಳಿ, ಅಪ್ಪಾಸಾಹೇಬ ಖೆಮಲಾಪೂರೆ, ರವಿ ತಳವಾರ, ಅಮರೀಶ ಕಾಂಬಳೆ, ನಾರಾಯಣ ಟೊಂಬರೆ, ಕಲ್ಲಪ್ಪ ಜಂಬಗಿ ಸೇರಿ ಅನೇಕರು ಇದ್ದರು.
ವಿ.ಎಸ್.ಚಂದರಗಿ ಸ್ವಾಗತಿಸಿದರು, ಎಮ್.ಪಿ.ಜಿರಗ್ಯಾಳ ನಿರೂಪಿಸಿದರು.