ಮೂರನೇ ದಿನವು ಸಂಪನ್ನಗೊಂಡ ಗ್ರಾಮದೇವಿ ಜಾತ್ರಾ ಮಹೋತ್ಸವ

ಕಿಲಬನೂರ-ರಾಮದುರ್ಗ ಗ್ರಾಮದೇವಿ ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತಾಧಿಗಳು ಬಂಢಾರಲ್ಲಿ ಮಿಂದೆದ್ದಿರುವುದು.


ಲೋಕದರ್ಶನ ವರದಿ

ರಾಮದುರ್ಗ: ದಶಕಗಳ ನಂತರ ನಡೆಯುತ್ತಿರುವ ಕಿಲಬನೂರ-ರಾಮದುರ್ಗ ಗ್ರಾಮದೇವಿ ಜಾತ್ರೆಯ ಮೂರನೇ ದಿನವಾದ ಗುರುವಾರ ಗ್ರಾಮದೇವಿಗೆ ಪಟ್ಟಣದ ಕಾರಸ್ಟ್ಯಾಂಟ್ ಬಳಿಯ ದ್ಯಾಮವ್ವನ ಕಟ್ಟೆಯಲ್ಲಿ ಮುಂಜಾನೆ ವಿಶೇಷ ಪೂಜೆ ಸಲ್ಲಿಸಲಾಯಿತು. 

ನಂತರ ಹೊನ್ನಾಟದೊಂದಿಗೆ ಪ್ರಾರಂಭವಾದ ದೇವಿಯ ಮೂತರ್ಿಯ ಮೆರವಣಿಗೆ ಪಟ್ಟಣದ ಜುನಿಪೇಠೆಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಂಚಾರದುದ್ದಕ್ಕೂ ಮಹಿಳೆಯರು ಮನೆಯ ಮುಂದೆ ಬಗೆಬಗೆಯ ಚಿತ್ತಾರಮಯ ರಂಗವಲ್ಲಿ ಬಿಡಿಸಿ ಭವ್ಯ ಸ್ವಾಗತ ಕೋರಿ, ಮನೆ ಬಾಗಿಲಿಗೆ ಆಗಮಿಸಿದ ದೇವಿಗೆ ಉಡಿ ತುಂಬುವ ಮೂಲಕ ಪಟ್ಟಣದ ಜನತೆ ಹರಕೆ ತೀರಿಸಿ, ಕುಟುಂಬ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ಗುರುವಾರ ರಾತ್ರಿ ಹೊನ್ನಾಟದೊಂದಿಗೆ ಪಟ್ಟಣದ ಕಾಸಿಪೇಠೆಯಲ್ಲಿ ದೇವಿ ವಾಸ್ತವ್ಯ ಹೂಡಲಿದ್ದಾಳೆ. ಜಾತ್ರೆಯ ಪ್ರಯುಕ್ತ ಸಾಂಸ್ಕೃತಿಕ ಸೌರಭ ವಿಶಿಷ್ಠ ಕಾರ್ಯಕ್ರಮಗಳು ರಾತ್ರಿ ನಡೆದವು.

ಪಟ್ಟಣವೆಲ್ಲ ಬಂಡಾರಮಯಃ

ಪಟ್ಟಣದಾಧ್ಯಂತ, ಮಹಿಳೆಯರು, ಮಕ್ಕಳು, ಯುವಕರು ಜಾತಿ, ಧರ್ಮ ಬೇಧ ಮರೆತು ಉದೋ, ಉದೋ ಎಂಬ ಭಕ್ತಿ ನಾಮಸ್ಮರಣೆಯಲ್ಲಿ ಪರಸ್ಪರ ಬಂಢಾರ ಎರಚುತ್ತಾ ಜಾತ್ರೆ ಆಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಯುವಕರು ವಿವಿಧ ಬೀದಿಗಳಲ್ಲಿ ಸಂಚರಿಸಿ ಬಂಢಾರ ಎರಚಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದು, ಇದರಿಂದ ರಾಮದುರ್ಗ ಪಟ್ಟಣವೆಲ್ಲ ಬಂಡಾರಮಯಗೊಂಡಂತಾಗಿದೆ.