ಮುತಗಾ ಬಡಾವಣೆ: ನೀರಿಗೆ ಹಾಹಾಕಾರ ನೀರಿನ ಸಮಸ್ಯೆ ಬಗೆಹರಿಸುವಂತೆ ಗ್ರಾ.ಪಂ. ಸದಸ್ಯ ರವಿ ಕೊಟಬಾಗಿ ಆಗ್ರಹ

ಮುತಗಾ ಬಡಾವಣೆ: ನೀರಿಗೆ ಹಾಹಾಕಾರ ನೀರಿನ ಸಮಸ್ಯೆ ಬಗೆಹರಿಸುವಂತೆ ಗ್ರಾ.ಪಂ. ಸದಸ್ಯ ರವಿ ಕೊಟಬಾಗಿ ಆಗ್ರಹ  Muthaga Layout: Water crisis, Gram Panchayat member Ravi Kotabagi demands to solve water problem

ಲೋಕದರ್ಶನ ವರದಿ 

ಬೆಳಗಾವಿ 06: ಸಮೀಪದ ಮುತಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಮುತಗಾ ಗ್ರಾಮದ ಬಡಾವಣೆಗಳಾದ ಶ್ರೀರಾಮ ನಗರ ಕಾಲೋನಿ, ಸಾಯಿ ನಗರ, ಬಸವ ನಗರ, ಗೋಕುಲ ನಗರ, ವಿನಾಯಕ ನಗರಗಳಲ್ಲಿ ಸುಮಾರು 600 ಮನೆಗಳಿದ್ದು  2650 ಜನರು ವಾಸಿಸುತ್ತಿದ್ದಾರೆ.  ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ   ಕಳೆದ 20 ದಿನಗಳಿಂದ ನೀರು ಪೂರೈಕೆಯಾಗದೇ ಇದ್ದ ಹಿನ್ನಲೆಯಲ್ಲಿ ಈ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ.   

ಪರಿಸ್ಥಿತಿಯ ತೀವೃತೆ ಅರಿತ ಗ್ರಾಮ ಪಂಚಾಯತ್ ಸದಸ್ಯ ರವಿ ಕೊಟಬಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯನ್ನು ಸಂಪರ್ಕಿಸಿ ಸಮಸ್ಯೆಯ ಕುರಿತು ವಿವರಿಸಿದ ನಂತರ  ಸ್ಥಳ ಪರೀಶೀಲಿಸಿದ ಸಹಾಯಕ ಅಭಿಯಂತ ಎಫ್‌. ಎಸ್‌. ಶಿವಾಪೂರ ನೀರಿನ ಪೂರೈಕೆಯ ಪೈಪ ಲೈನಗಳಲ್ಲಿ ಸುಮಾರು 10 ಕಡೆ ಏರ್ ವಾಲ್ವಗಳು ಒಡೆದಿದ್ದು ನೀರು ಬಹಳಷ್ಟು ಪೋಲಾಗುತ್ತಿರುವ ಹಿನ್ನಲೆಯಲ್ಲಿ ನೀರಿನ ಅಭಾವ ಉಂಟಾಗಿದೆ ಎಂದರಲ್ಲದೇ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಪೈಪಲೈನ ಅಳವಡಿಸುವಾಗಿದ್ದ ಜನಸಂಖ್ಯೆ ಈಗ ದ್ವೀಗುಣವಾಗಿರುವುದು ನೀರಿನ ಅಬಾವಕ್ಕೆ ಕಾರಣವಾಗಿದ್ದು ಪರಿಹಾರಕ್ಕಾಗಿ ಉನ್ನತ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.   

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯ ರವಿ ಕೊಟಬಾಗಿ ಜಲ ಜೀವನ ಮಿಷನ್ ಯೋಜನೆ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಪ್ರತಿ ಗ್ರಾಮೀಣ ಕುಟುಂಬಕ್ಕೆ ನಲ್ಲಿ ಮೂಲಕ ಸುರಕ್ಷಿತ ಮತ್ತು ಸಮರ​‍್ಕ ಕುಡಿಯುವ ನೀರನ್ನು ಒದಗಿಸುವ ಗುರಿ ಹೊಂದಿದ್ದು ಅಧಿಕಾರಿಗಳ ನಿರ್ಲಕ್ಷತೆಯಿಂದಾಗಿ ಈ ಯೋಜನೆ ನಾಗರೀಕರಿಗೆ ತಲುಪದೇ ಸಾರ್ವಜನಿಕರು ನೀರಿಗಾಗಿ ಪರದಾಡುವಂತಾಗಿದೆ ಎಂದರಲ್ಲದೇ ಈ ಯೋಜನೆಗೆ ಸಂಬಂದಿಸಿದ ಇಲಾಖೆಯ ಅಧಿಕಾರಿಗಳು ಹಾರಿಕೆ ಉತ್ತರ ನೀಡಿ ತಮ್ಮ ಜವಾಬ್ದಾರಿಯಿಂದ ಕಳಚಿಕೊಳ್ಳುವ ಪ್ರಯತ್ನ ಮಾಡುತ್ತಿರುವುದನ್ನು ತೀವೃವಾಗಿ ಖಂಡಿಸಿದ ಅವರು ಬಿಸಿಲುಗಾಲ ಪ್ರಾರಂಬವಾಗಿದ್ದರಿಂದ ಈ ಪ್ರದೇಶಗಳಲ್ಲಿನ ಬೋರವೆಲ್ ಗಳು ಸಹ ಖಾಲಿಯಾಗಿದ್ದು ಕೂಡಲೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಮತ್ತು ಜನಸಂಖ್ಯೆ ಆಧಾರಿತವಾಗಿ ಮತ್ತೊಂದು ಹೊಸದಾದ 1 ಲಕ್ಷ ಲೀಟರ ನೀರಿನ ಸಂಗ್ರಹ ಸಾಮರ್ಥ್ಯದ ಮತ್ತೊಂದು ಒವರಹೆಡ್ ಟ್ಯಾಂಕ್ ನಿರ್ಮಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.