ಅತಿಯಾದ ಸ್ವಾರ್ಥದಿಂದ ಸಾಮಾಜಿಕ ಸಂಘರ್ಷ'

ಲೋಕದರ್ಶನ ವರದಿ

ಧಾರವಾಡ 03: ಸಮಷ್ಟಿ ನೆಲೆಯ ಜನಸ್ನೇಹಿ ಸಿದ್ಧಾಂತಗಳ ಯತಾರ್ಥ ಭಾವ ಅರಿಯದೇ ಕವಲು ದಾರಿಯಲ್ಲಿ ಹೆಜ್ಜೆ ಹಾಕುವ ಮನುಷ್ಯನಲ್ಲಿನ ಅತಿಯಾದ ಸ್ವಾರ್ಥಭಾವವೇ ಸಾಮಾಜಿಕ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ  ಶಿವಾಚಾರ್ಯ ಭಗವತ್ಪಾದರು ಹೇಳಿದರು. 

ಅವರು ತಾಲೂಕಿನ ಅಮ್ಮಿನಬಾವಿ ಗ್ರಾಮದೇವತಾ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಸದ್ಭಾವನಾ ಧರ್ಮ ಸಮಾವೇಶದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು. ವಿವಿಧೆತೆಯಲ್ಲಿ ಏಕತೆಯನ್ನು ಪ್ರತಿಪಾದಿಸಿದ ಭಾರತೀಯರ ಜಾಯಮಾನದಲ್ಲಿ ಭಾವೈಕ್ಯ ಪರಂಪರೆ ಸುದೀರ್ಘವಾಗಿ ಎದ್ದು ಕಾಣುತ್ತದೆ. ಮನುಕುಲದ ಬದುಕನ್ನು ಸಾತ್ವಿಕ ಜಿಜ್ಞಾಸೆಯೊಂದಿಗೆ ಹದುಳ ಹೃದ್ಯ ಭಾವತನ್ಮಯತೆಯಲ್ಲಿ ಮುನ್ನಡೆಸಿ ಸಕಲ ಜೀವಾತ್ಮರಲ್ಲಿ ಭಗವಂತನನ್ನು ಕಾಣುವ ಹಂಬಲವನ್ನು ಸಂವಧರ್ಿಸುವ ಸದಾಶಯವೇ ಎಲ್ಲ ಜಾತ್ರೆ-ಉತ್ಸವಗಳ ಬಹುಮುಖ್ಯ ಉದ್ದೇಶವಾಗಿದೆ ಎಂದರು. 

ನಾಡಿನ ಧರ್ಮ ಪೀಠಗಳು, ಸಾಧು-ಸಂತರು ಹಾಗೂ ಧಾಮರ್ಿಕ ನೇತಾರರು ಜನಪರವಾಗಿ ಅಭಿವೃದ್ಧಿಪರ ನೀಡುವ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಮುನ್ನಡೆಯಲು ರಾಜಕಾರಣಿಗಳು ವಿಶಾಲ ಮುಕ್ತ ಮನೋಸ್ಥಿತಿಯನ್ನು ಹೊಂದಬೇಕಾಗುತ್ತದೆ. ಎಲ್ಲರೂ ಭಾರತಾಂಬೆಯ ಮಕ್ಕಳು ಎಂಬುದನ್ನು ಮರೆತು ಯಾವುದೋ ಕುಬ್ಜ ನೆಲೆಯಲ್ಲಿ ಧರ್ಮ, ಜಾತಿ, ಪಂಗಡಗಳನ್ನು ವಿಂಗಡಿಸುವ ಜನ ವಿರೋಧಿ ಚಟುವಟಿಕೆಗಳು ಒಳ್ಳೆಯ ಬೆಳವಣಿಗೆಯಲ್ಲ. ಅದು ಮುಂದೊಂದು ದಿನ ಮಾರಕವಾಗಿ ಕಾಡುತ್ತದೆ ಎಂದವರು ಎಚ್ಚರಿಸಿದರು. 

ಸಮಾರಂಭ ಉದ್ಘಾಟಿಸಿದ ಸ್ಥಳೀಯ ಸಂಸದ ಪ್ರಲ್ಹಾದ ಜೋಶಿ ಮಾತನಾಡಿ, ಧರ್ಮದ ವ್ಯಾಖ್ಯಾನವನ್ನು ಅಥರ್ೈಸುವಲ್ಲಿ ನಮ್ಮೊಳಗೆ ಜಾತಿಯ ಸಂಕುಚಿತ ಬಾವಗಳು ತೂರಿಕೊಂಡಿವೆ. ಧರ್ಮವೆಂದರೆ ಕೇವಲ ಪೂಜಾ ಪದ್ಧತಿಯಲ್ಲ; ಅದು ಮನುಕುಲದ ಜೀವನ ವಿಧಾನವೇ ಆಗಿದೆ. ಸದಾಕಾಲ ಧರ್ಮ ಜಾಗೃತಿಗಾಗಿ ಹಗಲು-ಇರಳು ಎನ್ನದೇ ರಾಜ್ಯದ ಉದ್ದಗಲಕ್ಕೂ ಸಂಚರಿಸುತ್ತಿರುವ ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರುಗಳವರ ಕೈಂಕರ್ಯ ಶ್ಲ್ಯಾಘನೀಯವಾದದ್ದು ಎಂದರು.

 ಉಪದೇಶಾಮೃತ ನೀಡಿದ ನವಲಗುಂದ ತಾಲೂಕು ಶಿರಕೋಳ ಹಿರೇಮಠದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಭಾರತದ ಉನ್ನತವಾದ ಆಧ್ಯಾತ್ಮ ಪರಂಪರೆಯನ್ನು ಹಾಗೂ ಧರ್ಮ ಪರಂಪರೆಯನ್ನು ಮೊಟಕುಗೊಳಿಸುವ ಪ್ರಯತ್ನಗಳು ಎಲ್ಲಿಯೂ ಫಲ ನೀಡುವದಿಲ್ಲ. ಆಧ್ಯಾತ್ಮದ ಅನುಸಂಧಾನವನ್ನು ಬಯಸಿ ಇಂದು ವಿದೇಶೀಯರು ಭಾರತದತ್ತ ಮುಖ ಮಾಡಿರುವದನ್ನು ಗಮನಿಸಬೇಕು ಎಂದರು. 

ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಅಮ್ಮಿನಬಾವಿ ಗ್ರಾ.ಪಂ. ಅಧ್ಯಕ್ಷೆ ನೀಲಮ್ಮ ಗಾಡದ, ಉಪಾಧ್ಯಕ್ಷ ಜಗನ್ನಾಥ ಕುಸೂಗಲ್ಲ, ಚುನಾಯಿತ ಗ್ರಾ.ಪಂ. ಸದಸ್ಯರನ್ನು ಹಾಗೂ ಇತರೇ ಸೇವಾಕರ್ತರನ್ನು ಗೌವಿಸಲಾಯಿತು. ವಿಜಯಪೂರ ಶಿವಯೋಗೀಶ್ವರಮಠದ ವಿರೂಪಾಕ್ಷ ದೇವರು, ಮಾಜಿ ಶಾಸಕಿ ಸೀಮಾ ಮಸೂತಿ, ಬಿಜೆಪಿ ಮುಖಂಡರಾದ ತವನಪ್ಪ ಅಷ್ಟಗಿ, ಸವಿತಾ ಅಮರಶೆಟ್ಟಿ, ಪ್ರಿಯಾ ಅಮೃತ ದೇಸಾಯಿ, ಎಂ.ಸಿ. ಹುಲ್ಲೂರ, ಬಸಯ್ಯ ಗುಡಿ, ಬಸವರಾಜ ಕೊಳ್ಳಿ, ಅಪ್ಪಣ್ಣ ದೇಶಪಾಂಡೆ, ಚಂಬಣ್ಣ ಉಂಡೋಡಿ, ಸುನೀಲ ಗುಡಿ, ವಿಷ್ಣು ಚಿತ್ರಗಾರ, ಗಣೇಶ ರಾವುತನಕಟ್ಟೆ, ತಾ.ಪಂ. ಸದಸ್ಯ ಸುರೇಂದ್ರ ದೇಸಾಯಿ, ಟಿ.ಎಂ.ದೇಸಾಯಿ, ಮುಸ್ಲೀಂ ಸಮಾಜದ ಅಧ್ಯಕ್ಷ ಗೌಸಖಾನ್ ಹುಬ್ಬಳ್ಳಿ ಸೇರಿದಂತೆ ವಿವಿಧ ಸಮಾಜಗಳ ಹಿರಿಯರು ಇದ್ದರು. ಖ್ಯಾತ ಹಾಸ್ಯಕಲಾವಿದ ಮಹಾದೇವ ಸತ್ತಿಗೇರಿ ಹಾಸ್ಯ ಕಾರ್ಯಕ್ರಮ, ಗವಿಸಿದ್ಧಯ್ಯ ಹಳ್ಳಿಕೇರಿಮಠ ಜಾನಪದ ಸಂಗೀತ ಹಾಗೂ ಸುಜಾತಾ ಆರಾಧ್ಯಮಠ ಅವರು ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಮುಸ್ಲೀಂ ಸಮಾಜದ ವತಿಯಿಂದ ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರುಗಳನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವ ಸಮರ್ಪಣೆ ಮಾಡಿದರು. ಗುರುಮೂತರ್ಿ ಯರಗಂಬಳಿಮಠ ವಂದಿಸಿದರು.