ಲೋಕದರ್ಶನ ವರದಿ
ಮುದ್ದೇಬಿಹಾಳ 13: ಹುಟ್ಟುಹಬ್ಬ ಎಂದಾಕ್ಷಣ ಕೇಕ್ ಕತ್ತರಿಸುವುದು, ರಾತ್ರಿಯ ಮಜಾ, ಪಾರ್ಟಿ ಸಾಮಾನ್ಯ. ಆದರೆ ಇದಕ್ಕಿಂತ ಭಿನ್ನವಾಗಿ ತಮ್ಮ ಹುಟ್ಟೂರಿನಲ್ಲಿ ಹದಿನೈದು ಗಿಡಗಳನ್ನು ನೆಡುವ ಮೂಲಕ ಯುವಕನೊಬ್ಬ ತನ್ನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡ. ತಾಲ್ಲೂಕಿನ ಕುಂಟೋಜಿ ಗ್ರಾಮದಲ್ಲಿರುವ ವಿದ್ಯಾವರೇಣ್ಯ ದೇವಸ್ಥಾನದ ಆವರಣದಲ್ಲಿ ಯುವಕ ಬಸವರಾಜ ಹುಲಗಣ್ಣಿ ಗಿಡಗಳನ್ನು ನೆಡುವ ಕೆಲಸ ಮಾಡಿದ್ದು, ಗ್ರಾಮಸ್ಥರ ಮೆಚ್ಚುಗೆಗೆ ಕಾರಣವಾಯಿತು.
ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಳ್ಳುವ ವಿಚಾರ ಇತ್ತು. ಅವರಿವರಲ್ಲಿ ವಿಚಾರಿಸಿದಾಗ ಗಿಡಗಳನ್ನು ನೆಡುವುದು ಸೂಕ್ತ ಎನಿಸಿತು. ದಿನದಿಂದ ದಿನಕ್ಕೆ ತಾಪಮಾನ ಏರುತ್ತ ನಡೆದಿದೆ. ನಾವು ನಮಗರಿವಿಲ್ಲದೇ ಪರಿಸರವನ್ನು ಬೇರೆ ಬೇರೆ ವಿಧದಲ್ಲಿ ನಾಶ ಮಾಡುತ್ತ ನಡೆದಿದ್ದೇವೆ. ಇದಕ್ಕೆ ಪರಿಹಾರವೆಂದರೆ ಗಿಡಗಳನ್ನು ನೆಟ್ಟು ಬೆಳೆಸುವುದೊಂದೇ ಎನಿಸಿತು. ಕಾರಣ ಇದನ್ನು ಆಯ್ದುಕೊಂಡೆ ಎಂದು ಬಸವರಾಜ ಉತ್ಸಾಹದಿಂದ ಹೇಳಿದರು.
ಕಾರ್ಯಕ್ರಮದಲ್ಲಿ ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ನಾಗಭೂಷಣ ನಾವದಗಿ, ಸದಸ್ಯರಾದ ಅಶೋಕ ರೇವಡಿ, ರಾಜಶೇಖರ ಕಲ್ಯಾಣಮಠ, ಕೆ.ಆರ್.ಕಾಮಟೆ, ಸಂಚಾಲಕ ಮಹಾಬಲೇಶ್ವರ ಗಡೇದ, ಗ್ರಾಮದ ಶ್ರೀಶೈಲ ಸಜ್ಜನ, ಬಸನಗೌಡ ಬಿರಾದಾರ, ದೇವಪ್ಪ ಹುಲಗಣ್ಣಿ, ಬಸು ಬಿರಾದಾರ, ಯಮನಪ್ಪ ಹುಲಗಣ್ಣಿ, ಶರಣು ಹೆಬ್ಬಾಳ, ಸಿದ್ದು ಯರಝರಿ, ಶಿವಾನಂದ ಆಂದೇಲಿ, ಮುತ್ತು ಕೊಳ್ಳದ, ಮುತ್ತು ಹುಲಗಣ್ಣಿ ಮತ್ತಿತರರು ಇದ್ದರು.