ಮುದ್ದೇಬಿಹಾಳ; ಗ್ರಾಹಕರ ಹಣ ಲಪಟಾಯಿಸಿದ ಸಿಬ್ಬಂದಿ

ಲೋಕದರ್ಶನ ವರದಿ

ಮುದ್ದೇಬಿಹಾಳ 18: ಹಳೇ ಮುದ್ದೇಬಿಹಾಳ ಎಂದೇ ಕರೆಸಿಕೊಳ್ಳುವ ಪಟ್ಟಣದ ಕಿಲ್ಲಾದಲ್ಲಿನ ಉಪ ಅಂಚೇ ಕಚೇರಿಯಲ್ಲಿ ಗುತ್ತಿಗೆ ಆಧಾರದ ಸಿಬ್ಬಂದಿಯೊಬ್ಬ ಗ್ರಾಹಕರ ಹಣವನ್ನು ಅವರ ಖಾತೆಗೆ ಜಮಾ ಮಾಡದೆ ಲಪಟಾಯಿಸಿ ಮೋಸ ಮಾಡಿದ್ದನ್ನು ಖಂಡಿಸಿ ವಂಚನೆಗೊಳಗಾದ ಗ್ರಾಹಕರು ಬುಧವಾರ ಆ ಪೋಸ್ಟ್ ಎದುರು ಪ್ರತಿಭಟನೆ ನಡೆಸಿದರು.

ಕಳೆದ ಕೆಲ ತಿಂಗಳಿಂದ ಅಲ್ಲಿದ್ದ ಉಪ ಅಂಚೆ ಕಚೇರಿಯನ್ನು ರದ್ದುಪಡಿಸಿ ಎಲ್ಲ ವ್ಯವಹಾರಗಳನ್ನು ಎಪಿಎಂಸಿ ಆವರಣದಲ್ಲಿನ ಮುಖ್ಯ ಅಂಚೆ ಕಚೇರಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಗ್ರಾಹಕರ ಬೇಡಿಕೆ ಪರಿಗಣಿಸಿ ಹಳ್ಳಿ ಪೋಸ್ಟ್ ಹೆಸರಿನಲ್ಲಿ ಇದನ್ನು ಮುಂದುವರೆಸಲಾಗಿತ್ತು. ಕಿಲ್ಲಾ ವ್ಯಾಪ್ತಿಯ ಗ್ರಾಹಕರು ತಮ್ಮ ಖಾತೆಗೆ ಹಣ ಜಮಾ ಮಾಡಬೇಕಿದ್ದರೆ ಈ ಪೋಸ್ಟ್ನಲ್ಲಿರುವ ಸಿಬ್ಬಂದಿಗೆ ಕೈಗೆ ಹಣ, ಪಾಸಬುಕ್ ಕೊಡುತ್ತಿದ್ದರು. ಆ ಸಿಬ್ಬಂದಿ ಮುಖ್ಯ ಅಂಚೆ ಕಚೇರಿಗೆ ಹೋಗಿ ಅವರವರ ಖಾತೆಗೆ ಹಣ ತುಂಬಿ ಪಾಸ್ಬುಕ್ನಲ್ಲಿ ದಾಖಲಿಸಿ ಗ್ರಾಹಕರಿಗೆ ಆ ಪಾಸ್ಬುಕ್ ಮರಳಿಸಬೇಕಿತ್ತು. ಆದರೆ ಅಲ್ಲಿದ್ದ ಗುತ್ತಿಗೆ ಆಧಾರಿತ ಸಿಬ್ಬಂದಿ ಸಾಬು ಎಂಬಾತ ಮುಗ್ಧ ಗ್ರಾಹಕರ ಹಣವನ್ನು ಆಯಾ ಗ್ರಾಹಕರ ಖಾತೆಗೆ ತುಂಬದೆ ಸ್ವಂತಕ್ಕೆ ಬಳಸಿಕೊಂಡು ವಂಚಿಸಿದ್ದು ಬೆಳಕಿಗೆ ಬಂದು ಗ್ರಾಹಕರ ಆಕ್ರೋಶಕ್ಕೆ ಇಮ್ಮಡಿಗೊಳಿಸಿತ್ತು.

ಪರಿಸ್ಥಿತಿ ಕೈಮೀರುವುದನ್ನು ಅರಿತ ಸ್ಥಳದಲ್ಲಿದ್ದ ಪೊಲೀಸರು ಸಾಬುನನ್ನು ಹೆಚ್ಚಿನ ವಿಚಾರಣೆಗೆ ಠಾಣೆಗೆ ಕರೆದುಕೊಂಡು ಹೋದರು. ಕೆಲ ಗ್ರಾಹಕರು ಸ್ಥಳೀಯ ಪೊಲೀಸ್ ಠಾಣೆ ಪಿಎಸೈಗೆ ಲಿಖಿತ ಮನವಿ ಸಲ್ಲಿಸಿ ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಗ್ರಾಹಕರಿಗೆ ನ್ಯಾಯ ಕೊಡಿಸಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.