ಲೋಕದರ್ಶನ ವರದಿ
ಕಂಪ್ಲಿ 20: ಡ್ರೈವಿಂಗ್ ಲೈಸೆನ್ಸ್ ಇಲ್ಲದವರು ವಾಹನ ಚಲಾಯಿಸಬಾರದು. ದಾಖಲೆಗಳನ್ನು ಒದಗಿಸಿದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಡಲಾಗುವುದು ಎಂದು ಸಿಪಿಐ ಡಿ.ನಾಗರಾಜು ಹೇಳಿದರು.
ಪೊಲೀಸ್ ಠಾಣೆ ಆವರಣದಲ್ಲಿ, ಪೊಲೀಸ್ ಇಲಾಖೆ ಆಯೋಜಿಸಿದ ಆಟೋ, ಗೂಡ್ಸ್, ಶಾಲಾ ಮಕ್ಕಳ ವಾಹನವುಳ್ಳ ಶಾಲಾಡಳಿತ ಮಂಡಳಿಯವರ ಜಾಗೃತ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಅಗತ್ಯ ದಾಖಲೆಗಳಿಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧವಾಗಿದೆ. ಪೊಲೀಸರು ಯಾವುದೇ ಮುಲಾಜಿಲ್ಲದೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಇದರಿಂದ ಜೀವನವೇ ಸಂಕಷ್ಟದಲ್ಲಿ ಸಿಲುಕುವ ಸಾಧ್ಯತೆಗಳುಂಟು. ಈ ದಿಸೆಯಲ್ಲಿ ಅಗತ್ಯ ದಾಖಲೆ, ತರಬೇತಿ ಪಡೆದು ವಾಹನ ಚಾಲನೆ ಮಾಡುವುದು ಅತ್ಯಗತ್ಯ. ವಾಹನ ಚಾಲನೆಯ ನಿಯಮಗಳನ್ನು ಚಾಚೂತಪ್ಪದೇ ಅನುಸರಿಸುವಲ್ಲಿ ಮುಂದಾಗಬೇಕೆಂದು ಹೇಳಿದರು.
ಸಿಪಿಐ ಕೆ.ಬಿ.ವಾಸುಕುಮಾರ್ ಮಾತನಾಡಿ, ಡ್ರೈವಿಂಗ್ ಲೈಸೆನ್ಸ್, ವಿಮೆ ಸೇರಿ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರತಕ್ಕದ್ದು, ಪ್ರಯಾಣಿಕರನ್ನು ಸಾಗಿಸುವ ಅನುಮತಿಯುಳ್ಳ ವಾಹನದಲ್ಲಿ ಮಾತ್ರ ನಿಗಧಿತ ಸಂಖ್ಯೆಯ ಪ್ರಯಾಣಿಕರನ್ನು ನಿಯಮಾನುಸಾರ ಸಾಗಿಸಬೇಕು. ಸರಕು ಸಾಗಣೆ ವಾಹನದಲ್ಲಿ ಜನರನ್ನು, ಜನರ ವಾಹನದಲ್ಲಿ ಸರಕು ಸಾಗಣೆ ಮಾಡುವುದು ಅಪರಾಧ. ಆಟೋ, ಟಂಟಂಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯನ್ನು ಪ್ರಯಾಣಿಕರನ್ನು ತುಂಬಿಕೊಂಡು ಪ್ರಯಾಣಿಸುವುದು, ಬಾಗಿಲು ಹಾಕದೆ ವಾಹನ ಚಲಾಯಿಸುವುದು, ವಾಹನಗಳ ಮೇಲ್ಭಾಗದಲ್ಲಿ ಜನರನ್ನು ಕೂಡಿಸಿ ಪ್ರಯಾಣಿಸುವುದು ಕಾನೂನು ಬಾಹಿರವಾಗಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಜೋರಾಗಿ ಟೇಪ್ರೆಕಾರ್ಡರ್ ಹಾಕಿಕೊಂಡು, ಮೊಬೈಲ್ನಲ್ಲಿ ಮಾತನಾಡುತ್ತ, ಇಯರ್ ಫೋನ್ ಬಳಸುತ್ತ ವಾಹನ ಚಲಾಯಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ವಾಹನಗಳನ್ನು ಸುರಕ್ಷಿತ ಸ್ಥಳದಲ್ಲಿ ನಿಲುಗಡೆ ಮಾಡಬೇಕು. ನಿಮ್ಮ ಕುಟುಂಬದವರ ಹೊಣೆ ಹೊತ್ತಿರುವ ಜಾಗೃತಿ ಸದಾ ಇರಬೇಕು. ಒಂದು ಕ್ಷಣದ ಮೈಮರೆವು ಅಪಘಾತಕ್ಕೆ, ಜೀವ ಗಂಡಾಂತರಕ್ಕೆ ಕಾರಣವಾಗುತ್ತದೆ, ಅವಲಂಬಿತ ಸದಸ್ಯರ ಜೀವನಕ್ಕೆ ಭದ್ರತೆಯ ಕೊರತೆ ಕಾಡುತ್ತದೆ. ವಾಹನ ಚಾಲಕರು ಮತ್ತು ಮಾಲೀಕರು ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ಜಾಗೂರುಕತೆಯಿಂದ ವಾಹನ ಚಲಾಯಿಸಬೇಕು ಎಂದು ಸೂಕ್ತ ಸಲಹೆ, ಸೂಚನೆ ಮತ್ತು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಡ್ರೈವರ್ ದುರ್ಗಪ್ಪ ಮಾತನಾಡಿ, ಅಗತ್ಯ ದಾಖಲೆ ಒದಗಿಸುವವರಿಗೆ ಡ್ರೈವಿಂಗ್ ಲೈಸೆನ್ಸ್ ಮಾಡಿಕೊಡುವ ಶಿಬಿರ ಆಯೋಜಿಸುವಂತೆ ಕೋರಿಕೊಂಡರು.
ಸಭೆಯಲ್ಲಿ ಎಎಸ್ಐ ಹಗರಪ್ಪ ಮತ್ತು ಪೊಲೀಸ್ ಸಿಬ್ಬಂದಿ, ಆಟೋ ಚಾಲಕರ ಸಂಘದ ಎನ್.ರಾಮಾಂಜನೇಯ, ಲಾಲ್ಭಾಷ, ವಿ.ಶ್ರೀನಿವಾಸುಲು, ರಾಮು, ಗೂಡ್ಸ್ ಆಟೋ ಚಾಲಕರ ಸಂಘದ ಟಿ.ಶ್ರೀನಿವಾಸುಲು, ನಾಗೇಂದ್ರ, ನಾಭೂಷಣ, ಯಂಕಪ್ಪ ಸೇರಿ ಆಟೋ, ಗೂಡ್ಸ್ ವಾಹನಗಳ ಚಾಲಕರು, ಮಾಲೀಕರು ಪಾಲ್ಗೊಂಡಿದ್ದರು.