ಹೂವಿನಹಡಗಲಿ: ಮೆಕ್ಕೆಜೋಳಕ್ಕೆ ಸೈನಿಕ ಹುಳು ಬಾಧೆ

ಲೋಕದರ್ಶನ ವರದಿ

ಹೂವಿನಹಡಗಲಿ 13: ತಾಲೂಕಿನ ನಂದಿಹಳ್ಳಿ ಗ್ರಾಮದ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಮೆಕ್ಕೆಜೋಳ ಬೆಳೆಯಲ್ಲಿ ಸೈನಿಕ ಹುಳು ಬಾಧೆ ಕಾಣಿಸಿಕೊಂಡಿದೆ.

ನಂದಿಹಳ್ಳಿ ಗ್ರಾಮದ 25ಎಕರೆಗೂ ಹೆಚ್ಚು ಪ್ರದೇಶದ ಬೆಳೆಯಲ್ಲಿ ಈ ಕೀಟ ಬಾಧೆ ಕಾಣಿಸಿದೆ. ಬೆಳೆ ಹೆಚ್ಚು ಹಸಿರಿನಿಂದ ಹಸಿರಿನಿಂದ ಕಂಗೊಳಿಸುತ್ತಿದ್ದರೂ ಕೀಟಗಳು ಸುಳಿ ಮತ್ತು ಎಲೆಯನ್ನು ತಿಂದು ನಾಶ ಪಡಿಸುತ್ತಿವೆ. ಎಳೆಯ ಪೈರಿಗೆ ಹುಳಗಳ ಕಾಟ ಹೆಚ್ಚಾಗಿರುವುದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಗ್ರಾಮದ ಅರುಣಿ ಬಸವರಾಜ, ವಿ.ಬಿ.ರಾಜಕುಮಾರ, ಅರುಣಿ ಮಹಾಬಲೇಶ್ವರಪ್ಪ, ಅರುಣಿ ಶೇಖರಪ್ಪ ಅವರ ಬೆಳೆಗಳು ಸೈನಿಕ ಹುಳು ಬಾಧೆಗೆ ತುತ್ತಾಗಿವೆ. ಕಳೆದ ವರ್ಷ ಮುಂಗಾರು ಮಳೆ ಕೊರತೆಯ ನಡುವೆಯೂ ಬೆಳೆದಿದ್ದ ಮೆಕ್ಕೆಜೋಳಕ್ಕೆ ಕಾಳು ಕಟ್ಟುವ ಹಂತದಲ್ಲಿ ಈ ರೋಗ ಕಾಣಿಸಿಕೊಂಡಿತ್ತಿ. ಈ ಬಾರಿ ಬಿತ್ತನೆ ಮಾಡಿ ಒಂದು ತಿಂಗಳಲ್ಲಿ ಪೈರಿಗೇ ರೋಗ ಬಿದ್ದಿರುವುದು ರೈತರಿಗೆ ಆತಂಕವಾಗಿದೆ.

ವಿಜ್ಞಾನಿಗಳು ಭೇಟಿ: 

ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ವಿಸ್ತರಣಾ ಶಿಕ್ಷಣ ಘಟಕದ ವಿಜ್ಞಾನಿಗಳು ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿ ರೈತರಿಗೆ ರೋಗ ಹತೋಟಿ ಕ್ರಮಗಳನ್ನು ತಿಳಿಸಿದರು. ಮೆಕ್ಕೆಜೋಳ ಜೂನ್ ಮೊದಲ ವಾರದಲ್ಲಿ ಬಿತ್ತನೆ ಮಾಡುವುದು ಸೂಕ್ತ ಆದರೆ ನಂದಿಹಳ್ಳಿಯಲ್ಲಿ ಇದಕ್ಕಿಂತ ಮುಂಚೆ ಬಿತ್ತನೆ ಮಾಡಿರುವ ಬೆಳೆಗಳು ರೋಗ ತುತ್ತಾಗಿವೆ ಕೂಡಲೇ ರೋಗ ಹತೋಟಿ ಕ್ರಮಗಳನ್ನು ಅನುಸರಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ  ನೀಲಾನಾಯ್ಕ ತಿಳಿಸಿದರು.