ಪುಸ್ತಕಗಳಿಗೆ ಅಳಿವಿಲ್ಲ. ಲೇಖಕರ ಲೇಖನಿಗೆ ದಣಿವಾಗಲ್ಲ : ಸಾಹಿತಿ ಡಾ.ವಿ.ಎಸ್‌.ಮಾಳಿ

ಪುಸ್ತಕಗಳಿಗೆ ಅಳಿವಿಲ್ಲ. ಲೇಖಕರ ಲೇಖನಿಗೆ ದಣಿವಾಗಲ್ಲ : ಸಾಹಿತಿ ಡಾ.ವಿ.ಎಸ್‌.ಮಾಳಿ Books are timeless. The pen of an author never tires: Literary scholar Dr. V.S. Mali

ಲೋಕದರ್ಶನ ವರದಿ 

      ಹಾರೂಗೇರಿ 07 : ಟಿವಿ, ಮೊಬೈಲ್, ಆಧುನಿಕ ತಂತ್ರಜ್ಞಾನ ನಮ್ಮ ಹಸ್ತದಿಂದ ಪುಸ್ತಕಗಳನ್ನು ಕಸಿದುಕೊಳ್ಳಲು ಯತ್ನಿಸುತ್ತಿದ್ದರೂ ಓದುವ ಅಭಿರುಚಿ ಹೆಚ್ಚಿಸುವ, ಚಿಂತನಾಶೀಲ, ಮನತಟ್ಟುವ ಬರಹಗಳನ್ನು ಬರೆಯುವ ಲೇಖಕರಿರುವಾಗ ಸಾಹಿತ್ಯ ಸೋಲಲ್ಲ. ಪುಸ್ತಕಗಳಿಗೆ ಅಳಿವಿಲ್ಲ. ಲೇಖಕರ ಲೇಖನಿಗೆ ದಣಿವಾಗಲ್ಲ ಎಂದು ಬೆಳಗಾವಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಅಲಂಕರಿಸಿದ್ದ ಹಿರಿಯ ಸಾಹಿತಿ ಡಾ.ವಿ.ಎಸ್‌.ಮಾಳಿ ಅವರು ಹೇಳಿದರು. 

   ಪಟ್ಟಣದ ಶ್ರೀ ಸಿದ್ಧಿವಿನಾಯಕ ಗ್ರಾಮೀಣ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ರಾಯಬಾಘ ಆಶ್ರಯದಲ್ಲಿ ಲೇಖಕಿ ಡಾ.ರತ್ನಾ ಬಾಳಪ್ಪನವರ ಅವರ ಬಾಗಿನಾಡು ಗ್ರಂಥ ಲೋಕಾರೆ​‍್ಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. 

   ಸಮಾಜವನ್ನು ಚಿಂತನೆಗೀಡು ಮಾಡುವ ಸಾಹಿತ್ಯಕ್ಕಿಂತ ಅಂಧಶ್ರದ್ಧೆ, ಮೂಢನಂಬಿಕೆ, ಪ್ರಚೋದನೆಯಂತಹ ಸಾಹಿತ್ಯ ರಚನೆಯಾಗುತ್ತಿರುವುದು ಸರಿಯಲ್ಲ. ಆದ್ದರಿಂದ ಸಮಾಜವನ್ನು ಚಿಂತನೆಗೆ ಹಚ್ಚುವ, ಬದಲಾವಣೆ ಮಾಡುವ ಸಾಹಿತ್ಯ ಅತಿ ಅವಶ್ಯವಿದೆ. ಸಾಹಿತ್ಯವು ಕೇವಲ ಬುದ್ದಿಗೆ ಮಾತ್ರ ಸೀಮಿತವಾಗದೇ ಹೃದಯವನ್ನೂ ತಲುಪಿ, ಜೀವನದ ಪಾಠಗಳನ್ನು ಕಲಿಸುತ್ತದೆ ಮತ್ತು ಬದಲಾವಣೆಗೆ ಪ್ರೇರಣೆ ನೀಡುತ್ತದೆ ಎಂದರು. 

 “ ಡಾ.ರತ್ನಾ ಬಾಳಪ್ಪನವರ ಅವರು ಸಮರ್ಥ ಲೇಖಕಿ ಮಾತ್ರವಲ್ಲ ವಿದ್ವತ್‌ಪೂರ್ಣ ವ್ಯಕ್ತಿತ್ವದ ಸಾಹಿತ್ತಿಕ ಗುಣವುಳ್ಳವರು. ಅವರು ಬರೆದ ಬಾಗಿನಾಡು ಕೃತಿ ಚಿಕ್ಕದಾದರೂ ಬಾಗೇನಾಡಿನ ಸಮಗ್ರ ವಿಷಯ ಒಳಗೊಂಡಿದೆ”. ಡಾ.ವಿ.ಎಸ್‌.ಮಾಳಿ, ಹಿರಿಯ ಸಾಹಿತಿಗಳು. 

   ಬಾಗಿನಾಡು ಗ್ರಂಥವನ್ನು ಲೋಕಾರೆ​‍್ಣಗೊಳಿಸಿ ಮಾತನಾಡಿದ ಹಿರಿಯ ಚಿಂತಕ ಡಿ.ಎಸ್‌.ನಾಯಿಕ ಅವರು ಮನುಷ್ಯ ಬದುಕನ್ನು ಅರಿಯಲು ಪುಸ್ತಕಗಳ ಸಂಗ ಮಾಡಬೇಕು. ಇನ್ನೊಬ್ಬರ ಮನಸ್ಸನ್ನು ನೋಯಿಸದಂತೆ, ಕಣ್ಣೀರು ಒರೆಸುವ, ಜೀವನೋತ್ಸಾಹ ಮತ್ತು ಪ್ರೇರಣೆ ನೀಡುವ ಶಕ್ತಿ ಸಾಹಿತ್ಯಕ್ಕಿದೆ ಎಂದರು. 

   ಕಸಾಪ ಕಾರ್ಯದರ್ಶಿ ಶಂಕರ ಕ್ಯಾಸ್ತಿ ಗ್ರಂಥವನ್ನು ಪರಿಚಯಿಸುತ್ತ ಬಾಗಿನಾಡು ನಮ್ಮ ನೆಲದ ಕಲೆ, ಶಿಲ್ಪಕಲೆ, ಸಾಹಿತ್ಯ, ಭೌಗೋಳಿಕ, ಶೈಕ್ಷಣಿಕ, ಶಿಷ್ಟಪದ, ಕವಿ,ಕಲಾವಿದರ ಸೃಜನೇತರ ಸಾಹಿತ್ಯದ ಮೇಲೆ ಬೆಳಕು ಚೆಲ್ಲಿದೆ. ಇದೊಂದು ಸಂಶೋಧನಾತ್ಮಕ ಕೃತಿಯಾಗಿ, ವಾಸ್ತವ ಸತ್ಯಾಂಶಗಳ ಬಾಗೇನಾಡಿನ ತಲ್ಲಣಗಳನ್ನು ಸಮಗ್ರವಾಗಿ ಬಿಂಬಿಸಿದೆ ಎಂದರು. 

  ರಾಯಬಾಗ ತಾಲೂಕಾ ಕಸಾಪ ವತಿಯಿಂದ ಲೇಖಕಿ ಡಾ.ರತ್ನಾ ಬಾಳಪ್ಪನವರ ಅವರನ್ನು ತಾಲೂಕು ಘಟಕ ಅಧ್ಯಕ್ಷ ಈರಣ್ಣಗೌಡ ಪಾಟೀಲ ಸತ್ಕರಿಸಿ ಮಾತನಾಡುತ್ತ ಸಾಹಿತ್ಯ, ಪುಸ್ತಕಗಳು, ಕವನ, ಕವಿಗಳು ಮತ್ತು ಲೇಖಕರನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯ ರಾಯಬಾಗ ತಾಲೂಕು ಪರಿಷತ್ತು ಮಾಡುತ್ತಿದೆ ಎಂದರು. 

   ಸಾನಿಧ್ಯ ವಹಿಸಿದ್ದ ಶರಣ ವಿಚಾರ ವಾಹಿನಿ ಅಧ್ಯಕ್ಷ ಆಯ್‌.ಆರ್‌.ಮಠಪತಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಜ್ಞಾನೇಶ್ವರ ಧರ್ಮಟ್ಟಿ, ಪ್ರಾಚಾರ್ಯ ಎಸ್‌.ಡಿ.ಕಾಗವಾಡೆ, ಕದಳಿ ವೇದಿಕೆ ಅಧ್ಯಕ್ಷೆ ಅನುಸೂಯಾ ಮುಳವಾಡ, ಆಶಾಕುಮಾರಿ ನಾವಿ, ಗೀತಾ ಮಾಳಶೆಟ್ಟಿ, ಸಂಗಮೇಶ ನಾಯಕ, ಸಾಗರ ಝೆಂಡೆನ್ನವರ, ಡಾ.ಈಶ್ವರ ಕೊರಚಗಾಂವ, ಮಹಾದೇವ ನಾವಿ, ಸಂತೋಷ ತಮದಡ್ಡಿ ಹಾಗೂ ತಾಲೂಕು ಕಸಾಪ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು. ಪ್ರೊ.ಆರ್‌.ಸಿ.ಉಳ್ಳಾಗಡ್ಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.