ಚಿಂಚಲಿಪಟ್ಟಣದ ಹೊರವಲಯದ ನದಿದಡದ ಹೊಲದಲ್ಲಿ ಬಂದಿದ್ದ ಮೊಸಳೆ ಸೆರೆ ಹಿಡಿದ ಅರಣ್ಯಾಧಿಕಾರಿಗಳು

ರಾಯಬಾಗ 24: ತಾಲೂಕಿನ ಚಿಂಚಲಿಪಟ್ಟಣದ ಹೊರವಲಯದ ನದಿದಡದ ರೈತರ ಹೊಲದಲ್ಲಿ ಮೊಸಳೆ ಬಂದಿದ್ದರಿಂದ ಸಾರ್ವಜನಿಕರು ಆತಂಕಗೊಂಡ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸಾರ್ವಜನಿಕರ ಸಹಾಯದಿಂದ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬುಧವಾರ ಕೃಷ್ಣನದಿ ದಡದ ಜಮೀನೊಂದರಲ್ಲಿ ಬೆಳ್ಳಂಬೆಳ್ಳಿಗ್ಗೆ ಮೊಸಳೆಯೊಂದು ಆಹಾರ ಅರಸಿ ಬಂದಿದ್ದರಿಂದ ಕೆಲಕಾಲ ಮೊಸಳೆ ಕಂಡ ಸ್ಥಳೀಯರು ಆತಂಕಗೊಂಡಿದ್ದರು. ಸುದ್ದಿ ತಿಳಿದ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ನಾಯಿಕವಾಡಿ, ವಲಯ ಅರಣ್ಯ ಅಧಿಕಾರಿ ಎ.ಬಿ. ಹಾಲವರ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಅಂದಾಜು 10 ಅಡಿ ಉದ್ದದ ಮೊಸಳೆ ಹಿಡಿದು ಯಶಸ್ವಿಯಾಗಿದ್ದಾರೆ. 

ಸಮೀಪ ಕೃಷ್ಣಾ ನದಿ ಬತ್ತಿದ್ದರಿಂದ ಹಾಗೂ ಸದಾ ನೀರಲ್ಲಿರುವ ಪ್ರಾಣಿಯಾಗಿದ್ದರಿಂದ ನೀರು ಮತ್ತು ಆಹಾರಕ್ಕಾಗಿ ಮೊಸಳೆಗಳು ರೈತರ ಹೊಲಗದ್ದೆಗಳನ್ನು ಪ್ರವೇಶಿಸಿ ನೀರು ಇರುವ ಕಡೆಗೆ ಹಾಗೂ ಆಹಾರಕ್ಕಾಗಿ ಮೇಕೆ ದನಕರುಗಳು ಸೇರಿದಂತೆ ಮನುಷ್ಯರನ್ನು ಗುರಿಯಾಗಿಸಿಕೊಂಡು ಬರುತ್ತವೆ. ಆದ್ದರಿಂದ ನದಿ ದಡದಲ್ಲಿರುವ ತೋಟಪಟ್ಟಿಯ ಜನರು ಜಾಗರೂಕತೆಯಿಂದಿರಬೇಕು, ಸಾರ್ವಜನಿಕರು ಆತಂಕಗೊಳ್ಳದೇ ಮೊಸಳೆ ಕಂಡುಬಂದಲ್ಲಿ ತಕ್ಷಣ ನಮ್ಮ ಗಮನಕ್ಕೆ ತರಬೇಕೆಂದು ಉಪ ವಲಯ ಅರಣ್ಯಾಧಿಕಾರಿ ಎ.ಎಂ. ಹಕಾರಿ ಹಾಗೂ ಉಮೇಶ ಹೊನ್ನಳ್ಳಿ ಸಾರ್ವಜನಿಕರಿಗೆ ಸೂಚಿಸಿದರು. ಚಿಂಚಲಿಯಲ್ಲಿ ಸೆರೆ ಹಿಡಿದ ಮೊಸಳೆಯನ್ನು ಬೆಳಗಾವಿ ಸಮೀಪದ ಭೂತರಾಮನಹಟ್ಟಿ ಕಿರು ಮೃಗಾಲಯದಲ್ಲಿ ಬಿಡಲಾಗುವುದೆಂದು ಸುದ್ದಿಗಾರರಿಗೆ ತಿಳಿಸಿದರು.