ಗೋಕಾಕ 20: ಬೇಂದ್ರೆ, ಮಾಸ್ತಿ, ಕುವೆಂಪು, ಕಾರಂತರಂಥ ಮೇಜರ್ ಸಾಹಿತಿಗಳ ಸಂದರ್ಭದಲ್ಲಿ ಆನಂದಕಂದರಂಥ ಸಾಹಿತಿಗಳನ್ನು ವಿಮರ್ಶಕರು ಉಪೇಕ್ಷಿಸಿದ್ದು ನಿಜ. ಆನಂದಕಂದರನ್ನು ಸಾಹಿತ್ಯ ಪ್ರಕಾರಗಳ ಹಿನ್ನೆಲೆಯಲ್ಲಿ ಬಿಡಿಬಿಡಿಯಾಗಿ ನೋಡುವುದಕ್ಕಿಂತ, ಇಡಿಯಾಗಿ ಅಧ್ಯಯನಿಸುವ ಅಗತ್ಯವಿದೆಯೆಂದು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರು ಹಾಗು ಜಾನಪದ ತಜ್ಞರಾದ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಿಸಿದರು.
ಅವರು, ಬೆಳಗಾವಿಯ, ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಹಾಗು ನವದೆಹಲಿಯ ಕನರ್ಾಟಕ ಸಂಘ ಇವರ ಸಂಯುಕ್ತಾಶ್ರಯದಲ್ಲಿ, ದೆಹಲಿ ಕನರ್ಾಟಕ ಸಂಘದ ಸಭಾಗೃಹದಲ್ಲಿ ಈಚೆಗೆ ಹಮ್ಮಿಕೊಂಡ, ಆನಂದಕಂದರ ಸಾಹಿತ್ಯಕ ವ್ಯಕ್ತಿತ್ವದ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಆನಂದಕಂದರ ಗೀತೆಗಳ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆನಂದಕಂದರು ಆಂಗ್ಲಭಾಷೆಯನ್ನು ಓದದಿದ್ದರೂ ತಮ್ಮ ಕಾವ್ಯ, ಕಥೆ, ಕಾದಂಬರಿ ಮತ್ತು ಪತ್ರಿಕೆ ವ್ಯವಸಾಯದ ಮೂಲಕ ನವೋದಯದ ಸಾಧ್ಯತೆಗಳನ್ನು ಸೂರೆಗೊಂಡ ನಿಜವಾದ ಕನ್ನಡ ಸಾಹಿತಿಯೆಂದು ವಿಚಾರ ಸಂಕಿರಣದ ಅಧ್ಯಕ್ಷ ಸ್ಥಾನದಿಂದ ತೀಕ್ಷ್ಣವಾಗಿ ಮಾತನಾಡಿದವರು ಟ್ರಸ್ಟಿನ ಅಧ್ಯಕ್ಷ ಪ್ರೊ. ರಾಘವೇಂದ್ರ ಪಾಟೀಲ. ಬಡತನದ ಬವಣೆಯಲ್ಲಿಯೂ ಸಾಹಿತ್ಯದ ನಾನಾಪ್ರಕಾರಗಳಲ್ಲಿ ಕೃಷಿಗೈದ ಗಟ್ಟಿ ಸಾಹಿತಿ ಆನಂದಕಂದರೆಂದು ಟ್ರಸ್ಟಿನ ಸದಸ್ಯ, ಕವಿ ಡಾ. ಸರಜೂ ಕಾಟ್ಕರ ಮಾತನಾಡಿದರು.
ಆನಂದಕಂದರು ತಮ್ಮ ಕಥೆಗಳಲ್ಲಿ ಪ್ರಾದೇಶಿಕ ಭಾಷೆಯನ್ನೇ ಬಳಸಿ, ದೇಸೀ ಭಾಷೆಯ ಸಮೃದ್ಧಿಯನ್ನು ತೆರೆದು ತೋರಿದ ಭಾಷಾ ವಿಜ್ಞಾನಿಯಾಗಿ ಗೋಚರಿಸುತ್ತಾರೆಂದು ಟ್ರಸ್ಟಿನ ಸದಸ್ಯ, ಚಿಂತಕ ಪ್ರೊ. ಚಂದ್ರಶೇಖರ ವಸ್ತ್ರದ 'ಆನಂದಕಂದರ ಕಥನ' ವಿಷಯದ ಮೇಲೆ ಮಾತನಾಡುತ್ತ ತಿಳಿಸಿದರು. ಹಲಸಂಗಿ ಗೆಳೆಯರಿಗಿಂತಲು ಮೊದಲು ಕನರ್ಾಟಕ ಜಾನಪದ ಮತ್ತು ಸಂಸ್ಕೃತಿ ಅಧ್ಯಯನ ಕೈಕೊಂಡ ಆನಂದಕಂದರು 'ಕೆರೆಗೆ ಹಾರ', 'ಬೀಸುಕಲ್ಲಿನ ಹಾಡುಗಳು', 'ನಮ್ಮ ಸಂಸ್ಕೃತಿ ಪರಂಪರೆ' ಯಂಥ ಕೃತಿಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಕನರ್ಾಟಕ ಜಾನಪದ ಅಧ್ಯಯನದ ಆದ್ಯರೆನಿಸಿಕೊಂಡಿದ್ದಾರೆಂದು ಶೋಧನಾತ್ಮಕ ನೆಲೆಯಲ್ಲಿ, 'ಆನಂದಕಂದರ ಜಾನಪದ ಮತ್ತು ಸಂಸ್ಕೃತಿ ಅಧ್ಯಯನ ಕೊಡುಗೆಗಳು' ವಿಷಯ ಕುರಿತು ಮಾತನಾಡಿದವರು ಇನ್ನೋರ್ವ ಟ್ರಸ್ಟಿನ ಸದಸ್ಯ, ಜಾನಪದ ತಜ್ಞ ಡಾ. ಸಿ.ಕೆ.ನಾವಲಗಿ. ವಿಚಾರ ಸಂಕಿರಣದಲ್ಲಿ ಆರೋಗ್ಯಕರ ಚಚರ್ೆ ಕೂಡ ನಡೆಯಿತು.
ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಚಿಂತಕ ಡಾ. ಟಿ.ಎಸ್.ಸತ್ಯನಾಥ ಸಮಾರೋಪ ನುಡಿಗಳನ್ನಾಡಿದರು. ಕನರ್ಾಟಕ ಸಂಘದ ಅಧ್ಯಕ್ಷ, ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವೆಂಕಟಾಚಲ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಕಾರ್ಯದಶರ್ಿ ಶ್ರೀಶೈಲ ಕರಿಶಂಕರಿ ಸ್ವಾಗತಿಸಿದರು. ಟ್ರಸ್ಟಿನ ಸದಸ್ಯೆ ಆಶಾ ಕಡಪಟ್ಟಿ ನಿರೂಪಿಸಿದರು. ಸಂಘದ ಕಾರ್ಯದಶರ್ಿ ಸಿ.ಎಮ್. ನಾಗರಾಜ ವಂದಿಸಿದರು. ಕೊನೆಯಲ್ಲಿ ಬೆಂಗಳೂರಿನ ಪ್ರಸಿದ್ಧ ಗಾಯಕರಾದ ಉಪಾಸನಾ ಮೋಹನ, ಪಂಚಮ್ ಹಳಬಂಡಿಯವರು ಆನಂದಕಂದರ ಗೀತಗಾಯನ ಕಚೇರಿ ನಡೆಸಿಕೊಟ್ಟರು. ಪ್ರಸ್ತುತ ಕಾರ್ಯಕ್ರಮಕ್ಕೆ ದೆಹಲಿ ಕನರ್ಾಟಕ ಸಂಘದ ಸದಸ್ಯರು, ಸಾಹಿತಿಗಳು ಕಿಕ್ಕಿರಿದು ಸೇರಿದ್ದರು.