ಬೈಲಹೊಂಗಲ 22: ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದರೆ ಉತ್ತಮ ಫಲಿತಾಂಶ ಬಂದೇ ಬರುತ್ತದೆ ಎಂದು ಹಿಂದಿ ಸಂಪನ್ಮೂಲ ವ್ಯಕ್ತಿಗಳಾದ ಎನ್.ಎಫ್. ಕಿತ್ತೂರ ಹೇಳಿದರು.
ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಪ್ರೇರಣಾ ಕಾರ್ಯಾಗಾರದಲ್ಲಿ ತಾವು ರಚಿಸಿದ ‘ಪರೀಕ್ಷಾ ತೋಶಾ’ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿ ಅವರು ಮಾತನಾಡಿದರು. ಮಕ್ಕಳು ಆರೋಗ್ಯದ ಕಡೆ ವಿಶೇಷ ಗಮನ ಹರಿಸುವುದರ ಮೂಲಕ ಶಿಸ್ತುಬದ್ಧವಾಗಿ ಅಧ್ಯಯನ ಮಾಡಿ ಉತ್ತಮ ಅಂಕಗಳನ್ನು ಪಡೆದರೆ ಶಾಲೆಯ ಕೀರ್ತಿ ಇನ್ನಷ್ಟು ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು. ಸತತ ಪ್ರಯತ್ನದಿಂದ ಸಾಧನೆ ಖಂಡಿತ ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಮ್ಸ್ ನಸಿಂರ್ಗ್ ಕಾಲೇಜಿನ ಪ್ರಾಧ್ಯಾಪಕರಾದ ಶಶಿಪಾಲ ಶಿಂಗೆ ಮಾತನಾಡಿ ವಿದ್ಯಾರ್ಥಿಗಳ ಸಾಧನೆಯ ಹಿಂದೆ ಗುರುಗಳ ಪರಿಶ್ರಮ ಹೆಚ್ಚಾಗಿದ್ದು ಗುರುಗಳಿಗೆ ವಿದ್ಯಾರ್ಥಿಗಳು ಸದಾ ಋಣಿಯಾಗಿರಬೇಕು ಎಂದರು. ಎಸ್.ಎಸ್.ಎಲ್.ಸಿ ಬದುಕಿನ ಪ್ರಮುಖ ಘಟ್ಟವಾಗಿದ್ದು ಆಸಕ್ತಿಯಿಂದ ಓದಿ ಪರೀಕ್ಷೆಯನ್ನು ಒಂದು ಹಬ್ಬದಂತೆ ಸಂಭ್ರಮಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ ಕಿತ್ತೂರ ಅವರ ಸಮಾಜಮುಖಿ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಮಕ್ಕಳು ಪುಸ್ತಕದ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಕಿತ್ತೂರ ಅವರು ರಚಿಸಿದ ಪರೀಕ್ಷಾ ತೋಶಾ ಪುಸ್ತಕದಲ್ಲಿ ಹತ್ತನೇ ತರಗತಿಯ ತೃತೀಯ ಭಾಷೆ ಹಿಂದಿ ವಿಷಯದಲ್ಲಿ ಹೆಚ್ಚು ಅಂಕ ಗಳಿಸಲು ಬೇಕಾದ ಸಮಗ್ರ ಮಾಹಿತಿಯಿದ್ದು ಉತ್ತಮ ಮಾರ್ಗದರ್ಶಿ ಹೊತ್ತಿಗೆಯಾಗಿದೆ ಎಂದು ಹೇಳಿದರು. ಪಠ್ಯಾಧಾರಿತ ಅಂಶಗಳನ್ನು ಎಲ್ಲ ವಿದ್ಯಾರ್ಥಿಗಳಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದು ಈ ಕೃತಿಯ ವಿಶೇಷತೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಿಕ್ಷರಾದ ಪಿ.ಎಸ್.ಗುರುನಗೌಡರ, ಎಚ್.ವಿ.ಪುರಾಣಿಕ, ಎಸ್.ವಿ.ಬಳಿಗಾರ, ಎಂ.ಎನ್.ಕಾಳಿ, ಎಸ್.ಬಿ.ಸಾಳೂಂಕೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪೃಥ್ವಿ ಗರಗದ ನಿರೂಪಿಸಿದರು. ಶಿಕ್ಷಕರಾದ ಕೆ.ಐ.ಯರಗಂಬಳಿಮಠ ವಂದಿಸಿದರು.