ವಿಶ್ವ ಕುಸ್ತಿ ಚಾಂಪಿಯನ್ಶಿಪ್: ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆಗೆ ಸೋಲುಣಿಸಿದ ವಿನೇಶ್ ಫೊಗಾಟ್

ನೂರ್-ಸುಲ್ತಾನ್ (ಕಜಕೀಸ್ತಾನ್), ಸೆ 17   ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಭಾರತದ ವಿನೇಶ್ ಫೊಗಾಟ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನ ಮೊದಲ ಸುತ್ತಿನ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿದ್ದಾರೆ. 

ಮಂಗಳವಾರ ನಡೆದ ವಿಶ್ವ ಕುಸ್ತಿ ಚಾಂಪಿಯನ್ಶಿಪ್ ಮಹಿಳೆಯರ 53 ಕೆ.ಜಿ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದ ಭಾರತದ ಮುಂಚೂಣಿ ಕುಸ್ತಿಪಟು ವಿನೇಶ್ ಫೊಗಾಟ್ ಅವರು ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಸೋಫಿಯಾ ಮ್ಯಾಟ್ಸನ್ ವಿರುದ್ಧ 12-0 ಅಂತರದಲ್ಲಿ ಗೆದ್ದು ಎರಡನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ.  

ಪಂದ್ಯದ ಮೊದಲ ಸುತ್ತಿನಲ್ಲೇ ಫೊಗಾಟ್ 8-0 ಭರ್ಜರಿ ಆರಂಭ ಕಂಡರು. ಎರಡನೇ ಸುತ್ತಿನಲ್ಲಿ ಭಾರತದ ಕುಸ್ತಿಪಟುವನ್ನು ನಿಯಂತ್ರಿಸಲು ಸೋಫಿಯಾ ಭಾರಿ ಪ್ರಯತ್ನ ನಡೆಸಿದರು. ಆದರೆ, 25ರ ಪ್ರಾಯದ ವಿನೇಶ್ ಫೊಗಾಟ್, ಯುರೋಪಿಯನ್ ಚಾಂಪಿಯನ್ ಅನ್ನು ನೆಲಕ್ಕೆ ಕೆಡವಿ ನಾಲ್ಕು ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಳ್ಳುವ ಮೂಲಕ 12-0 ಅಂತರದಲ್ಲಿ ಪಂದ್ಯವನ್ನು ತನ್ನದಾಗಿಸಿಕೊಂಡರು. 

ಮುಂದಿನ ಸುತ್ತಿನಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಜಪಾನ್ನ ಮಯು ಮುಕೈದಾ ವಿರುದ್ಧ ವಿನೇಶ್ ಫೊಗಾಟ್ ಕಾದಾಟ ನಡೆಸಲಿದ್ದಾರೆ.