ಕಾರ್ಮಿಕರಿಗೆ ಕಾಯ್ದೆ, ಕಾನೂನುಗಳು ಜ್ಞಾನವಿರಲಿ: ಸುಧಾ ಗರಗ

ಕಾರ್ಮಿಕ ಕಾಯ್ದೆಗಳ ಸಮಗ್ರ ಚರ್ಚೆ ಜಿಲ್ಲಾಮಟ್ಟದ ವಿಶೇಷ ಕಾರ್ಯಾಗಾರ  

ಕೊಪ್ಪಳ 21 : ಮಾನ್ಯ ಕಾರ್ಮಿಕ ಸಚಿವರ ನಿರ್ದೇಶನದಂತೆ ಕೊಪ್ಪಳ ಜಿಲ್ಲೆಯ ಉದ್ಯೋಗದಾತರಿಗೆ, ಹೊರಗುತ್ತಿಗೆ ಗುತ್ತಿಗೆದಾರರಿಗೆ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ ಹಾಗೂ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ಕಾನೂನುಗಳು ಮತ್ತು ಯೋಜನೆಗಳ ಕುರಿತು ಜಿಲಾಮಟ್ಟದ ಕಾರ್ಯಾಗಾರವು ಸೆ.20ರಂದು ನಡೆಯಿತು. 

ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ ಅವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆ 1961, ಕನಿಷ್ಠ ವೇತನ ಕಾಯ್ದೆ 1948, ವೇತನ ಪಾವತಿ ಕಾಯ್ದೆ 1936, ಸಮಾನ ವೇತನ ಪಾವತಿ ಕಾಯ್ದೆ 1976, ಉಪಧನ ಪಾವತಿ ಕಾಯ್ದೆ 1972, ಹೆರಿಗೆ ಭತ್ಯೆ ಕಾಯ್ದೆ 1961 ಹಾಗೂ ಬಾಲಕಾರ್ಮಿಕ ಕಾಯ್ದೆ ಮತ್ತು ಬೋನಸ್ ಪಾವತಿ ಕಾಯ್ದೆ 1965 ಬಗ್ಗೆ ಪ್ರತಿಯೊಬ್ಬರು ಅರಿಯಬೇಕು. ಈ ಕಾರ್ಮಿಕ ಕಾಯ್ದೆಗಳ ಬಗ್ಗೆ ನಮಗೆ ಜ್ಞಾನವಿದ್ದಲ್ಲಿ ಆಪತ್ಕಾಲದಲ್ಲಿ ಸಾಕಷ್ಟು ಸಹಾಯಕ್ಕೆ ಬರಲಿವೆ ಎಂದು ಸಲಹೆ ಮಾಡಿದರು. 

ಅಂಬೇಡ್ಕರ ಸಹಾಯಹಸ್ತ ಯೋಜನೆಯಡಿ 6,594 ಜನ ಫಲಾನುಭವಿಗಳು, ಇ-ಶ್ರಮ್ ಯೋಜನೆಯಡಿ 2,49,607 ಫಲಾನುಭವಿಗಳು ನೋಂದಣಿ ಮಾಡಿದ್ದಾರೆ. ಇದರಲ್ಲಿ ಒಬ್ಬ ಫಲಾನುಭವಿಯು ಒಟ್ಟು 2 ಲಕ್ಷ ರೂ.ಗಳನ್ನು ಅಪಘಾತ ಪರಿಹಾರ ಸೌಲಭ್ಯ ಪಡೆಯುತ್ತಾರೆ. ಖಾಸಗಿ ವಾಣಿಜ್ಯ ವಾಹನ ಚಾಲಕರು, ನಿರ್ವಾಹಕರು, ಕ್ಲೀನರ್‌ಗಳ ಸೇರಿ 33 ಜನ ಫಲಾನುಭವಿಗಳು ನೋಂದಣಿ ಮಾಡಿರುತ್ತಾರೆ. ಅಪಘಾತ ಪರಿಹಾರವಾಗಿ 5 ಜನ ಫಲಾನುಭವಿಗಳು 5 ಲಕ್ಷ ರೂ.ಸೌಲಭ್ಯ ಪಡೆದಿರುತ್ತಾರೆ. ಗಿಗ್ ಕಾರ್ಮಿಕರು 101 ಜನ ನೋಂದಣಿಯಾಗಿರುತ್ತಾರೆ ಎಂದು ತಿಳಿಸಿದರು.  

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯಲ್ಲಿ 2,02,513 ಜನ ಫಲಾನುಭವಿಗಳು ನೋಂದಣಿಯಾಗಿರುತ್ತಾರೆ. ಮದುವೆ ಧನಸಹಾಯಕ್ಕೆ 6226 ಜನ ಫಲಾನುಭವಿಗಳು, ಸಾಮಾನ್ಯ ವೈದ್ಯಕೀಯ ಸೌಲಭ್ಯಕ್ಕೆ 13 ಜನ ಫಲಾನುಭವಿಗಳು, ಪ್ರಮುಖ ವೈದ್ಯಕೀಯ ಧನಸಹಾಯಕ್ಕೆ 285 ಜನ ಫಲಾನುಭವಿಗಳು, ಹೆರಿಗೆ ಧನಸಹಾಯಕ್ಕೆ 1203 ಜನ ಫಲಾನುಭವಿಗಳು, ತಾಯಿ ಮಗು ಸಹಾಯ ಹಸ್ತ ಸೌಲಭ್ಯಕ್ಕೆ 158 ಜನ ಫಲಾನುಭವಿಗಳು ಹೆಸರು ನೋಂದಾಯಿಸಿ ಸೌಲಭ್ಯಗಳನ್ನು ಪಡೆದಿರುತ್ತಾರೆ ಎಂದು ತಿಳಿಸಿದರು. 

ಕೊಪ್ಪಳ ಕಾರ್ಮಿಕ ಅಧಿಕಾರಿಗಳ ಕಚೇರಿಯಿಂದ ಈ ವರ್ಷದಲ್ಲಿ ವಿವಿಧ ಕಾರ್ಮಿಕ ಕಾಯ್ದೆ ಅಡಿ 14 ಪ್ರಕರಣ, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಅಡಿ, ಗುತ್ತಿಗೆ ಕಾರ್ಮಿಕ ಕಾಯ್ದೆಯಡಿ 07 ಪ್ರಕರಣ, ಬಾಲ ಕಾರ್ಮಿಕ ಕಾಯ್ದೆಯಡಿ 8 ಪ್ರಕರಣಗಳನ್ನು ಜೆ.ಎಂ.ಎಫ್‌.ಸಿ.ನ್ಯಾಯಾಲಯದಲ್ಲಿ ಹೂಡಲಾಗಿದೆ ಎಂದು ತಿಳಿಸಿದರು.  

ವಿಜಯನಗರ ಜಿಲ್ಲೆಯ ಕಾರ್ಮಿಕ ಅಧಿಕಾರಿ ಸೂರ​‍್ಪ ಅವರು ಮಾತನಾಡಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿಯ ನೋಂದಣಿ, ನವೀಕರಣ ಪ್ರಕ್ರಿಯೆ, ಸೌಲಭ್ಯಗಳ ಬಗ್ಗೆ ಹಾಗೂ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಯೋಜನೆಗಳ ಕುರಿತು ತಿಳಿಸಿದರು. 

ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಜಯಕುಮಾರ ಮಾತನಾಡಿ, ಕಾರ್ಖಾನೆಗಳ ಕಾಯ್ದೆ 1948 (ಕಾರ್ಮಿಕರ ಸುರಕ್ಷತೆ), ಆಡಳಿತ ವರ್ಗ ಮತ್ತು ಕಾರ್ಮಿಕರ ನಡುವೆ ಸಮನ್ವಯತೆ ಮತ್ತು ಕಾರ್ಖಾನೆಗಳು ಮತ್ತು ಬಾಯ್ಲರ್ ಇಲಾಖೆಯಿಂದ ಕಾರ್ಮಿಕರ ಸುರಕ್ಷತೆ ಕುರಿತು ಹಾಗೂ ವಿಕಲಚೇತನರಿಗೆ ಕಾರ್ಖಾನೆಗಳಲ್ಲಿ ಉದ್ಯೋಗದ ಅವಕಾಶ ಹಾಗೂ ಆಶಾದೀಪ ಯೋಜನೆಗಳ ಕುರಿತು ವಿವರಿಸಿದರು. 

ರಾಜ್ಯ ವಿಮಾ ಯೋಜನೆಯ ವಿಮಾ ವೈದ್ಯಾಧಿಕಾರಿ ಡಾ.ಶ್ರೀನಿವಾಸ ಅವರು ಮಾತನಾಡಿ ಕಾರ್ಮಿಕರ ರಾಜ್ಯ ವಿಮಾ ಯೋಜನೆಯಲ್ಲಿರುವ ಸೌಲಭ್ಯಗಳ ಬಗ್ಗೆ ತಿಳಿಸಿದರು. 

ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರಾದ ಬಸವರಾಜ ಹಿರೇಗೌಡ್ರ ಅವರು ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986, ತಿದ್ದುಪಡಿ ಕಾಯ್ದೆ 2016 ಬಗ್ಗೆ ಮಾಹಿತಿ ನೀಡಿದರು.  

ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ಮತ್ತು ದುಡಿಮೆ ಅವಧಿಯನ್ನು 14 ಗಂಟೆಗಳಿಗೆ ಹೆಚ್ಚಿಸುವ ಬಗ್ಗೆ ಅಭಿಪ್ರಾಯ ಸಂಗ್ರಹಣೆ ಮಾಡಲಾಯಿತು. ಕಾರ್ಯಾಗಾರದ ಕೊನೆಗೆ ಪ್ರಶ್ನೋತ್ತರ ನಡೆಯಿತು. 

ಸಮಾರಂಭದಲ್ಲಿ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಸಹಾಯಕ ನಿರ್ದೇಶಕರು, ರಾಜ್ಯ ವಿಮಾ ಯೋಜನೆಯ ಜಿಲ್ಲಾ ವಿಮಾ ವೈದ್ಯಾಧಿಕಾರಿಗಳು, ಕುಷ್ಟಗಿ ಮತ್ತು ಗಂಗಾವತಿ ತಾಲೂಕಿನ ಕಾರ್ಮಿಕ ನೀರೀಕ್ಷಕರಾದ ನಿವೇದಿತಾ, ಅಶೋಕ ಉಪಸ್ಥಿತರಿದ್ದರು. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಎಕ್ಸಿಕ್ಯೂಟಿವ್ ಹೇಮಂತ್ ಅವರು ವಂದಿಸಿದರು.