ಹೆಣ್ಣು ಅಬಲೆಯಲ್ಲ ಸಬಲೆ: ಡಾ.ಮಾಲಿನಿ

Women are not weak, they are strong: Dr. Malini

ದೇವರಹಿಪ್ಪರಗಿ 12: ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಪುರುಷರಷ್ಟೇ ಸರಿಸಮಾನವಾಗಿ ಕಾರ್ಯ ನಿರ್ವಹಿಸುವ ಮೂಲಕ ಹೆಣ್ಣು ಅಬಲೆ ಅಲ್ಲ; ಸಬಲೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥೆ ಡಾ.ಮಾಲಿನಿ ಪ್ರಭುಗೌಡ ಲಿಂಗದಳ್ಳಿ ಹೇಳಿದರು. 

ತಾಲೂಕಿನ ಹಿಟ್ನಳ್ಳಿ ಗ್ರಾಮದ ನರಸಿಂಹ ದೇವಸ್ಥಾನದ ಆವರಣದಲ್ಲಿ ಮಹಿಳಾ ಸಂಘಗಳ ಒಕ್ಕೂಟ ಮಂಗಳವಾರದಂದು ಹಮ್ಮಿಕೊಂಡ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ಸಾಮಾಜಿಕ, ಆರ್ಥಿಕ ಹಾಗೂ ಕೌಟುಂಬಿಕ ಸ್ಥಿತಿಗತಿಗಳನ್ನು ಉತ್ತಮ ಪಡಿಸಲು ಸರ್ಕಾರ ಹಲವಾರು ಕಾನೂನುಗಳು ಜಾರಿಗೆ ತಂದಿದೆ. ಅವುಗಳನ್ನು ಸದುಪಯೋಗಪಡಿಸಿ ಕೊಳ್ಳುವ ಹೊಣೆಗಾರಿಕೆ ಮಹಿಳೆಯರ ಮೇಲಿದೆ. ಸಮಾಜದಲ್ಲಿ ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು, ಹಾಗೂ ಇಂದು ರಾಜಕೀಯ ಕ್ಷೇತ್ರದಲ್ಲಿ ಮಹಿಳೆಗೆ ಮೀಸಲಾತಿ ನೀಡಿದ್ದು,ಪುರುಷರಿಗಿಂತ ಮಹಿಳೆಯರೇ ಹೆಚ್ಚು ಸ್ಥಾನ ಪಡೆದು ಮುಂಚೂಣಿಯಲ್ಲಿದ್ದಾರೆ. ತಮಗೆ ದೊರೆತಿರುವ ಅಧಿಕಾರದ ಜೊತೆಗೆ ಒಮ್ಮತ ಅಭಿಪ್ರಾಯದೊಂದಿಗೆ ಅಭಿವೃದ್ಧಿ ಕಡೆ ಗಮನ ಹರಿಸಬೇಕಾದ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದು ಹೇಳಿದರು. 

ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ, ಸುಜಾತ ಕಳ್ಳಿಮನಿ ಹಾಗೂ ಗೌರಮ್ಮ ಮುತ್ತತ್ತಿ ಅವರು ಮಾತನಾಡಿ,  ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಸಹ ವಿದ್ಯಾವಂತರಾಗಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿರುವುದು ಉತ್ತಮ ಬೆಳವಣಿಗೆ, ಎಲ್ಲರೂ ಸಂಘಗಳ ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಕರೆ ನೀಡಿದರು. 

ದಿವ್ಯ ಸಾನಿಧ್ಯವನ್ನು ವಹಿಸಿದ್ದ ಬಾಲಗಾಂವ ಆಶ್ರಮದ ಡಾ. ಅಮೃತಾನಂದ ಶ್ರೀಗಳು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಉನ್ನತ ಸ್ಥಾನಮಾನ ಗೌರವವಿದೆ, ಮಹಿಳೆಯರು ಸಂಘಟನೆಗಳ ಮೂಲಕ ಉತ್ತಮ ಕಾರ್ಯ ಮಾಡುತ್ತ ಸಮಾಜದಲ್ಲಿ ಮುಂದೆ ಬರಬೇಕೆಂದರು.  

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸಾನಿಧ್ಯವನ್ನು ಲಿಂಗರಾಜ ಮಹಾರಾಜರು ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸರಿತಾ ನಾಯಕ್, ದ್ರಾಕ್ಷಾಯಿಣಿ ಕನ್ನೊಳ್ಳಿ, ಸುನಂದಾ ಯಂಪುರೆ, ಸಪ್ನಾ ಇಮ್ಮನ, ಚೆನ್ನಮ್ಮ ಮೈತ್ರಿ, ಸಾವಿತ್ರಿ ನಾಟಿಕಾರ, ನರಸಂಮ್ಮ ವಾಲಿಕಾರ, ಜಗದೇವಿ ಕುಂಬಾರ, ಸುನಂದಾ ಸೊನ್ನಳ್ಳಿ ಸೇರಿದಂತೆ ಮಹಿಳಾ ಒಕ್ಕೂಟದ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಸುತ್ತಮುತ್ತಲಿನ ಗ್ರಾಮದ ಮಹಿಳೆಯರು ಪಾಲ್ಗೊಂಡಿದ್ದರು.