ಹೂವಿನಂತ ಮನಸ್ಸಿಗೆ ಕ್ರೌರ್ಯ ಹುಟ್ಟಿದ್ದು ಏಕೆ

ಹೇಗೆ ಬದುಕ್ತಿಯಾ ನಾನು ನೋಡೇ ಬಿಡ್ತಿನಿ, ನಿನ್ನನ್ನ ಸುಮ್ಮನೆ ಬಿಡೋದಿಲ್ಲ. ನಿನಗೊಂದು ಗತಿ ಕಾಣಿಸಿಯೇ ಬಿಡ್ತಿನಿ ಎನ್ನುವವನ ಎದುರು ನಿಂತಾಗ ನಮ್ಮ ಸೋಲು ಆ ಕ್ಷಣದಿಂದಲೇ ಶುರುವಾಯಿತು, ಅವನು ಬಲಿಷ್ಠ, ನಾನು ಸೋತ ನಂತರ ಹೇಗೆ ಬದುಕುವುದು. ಅವನು ನನ್ನ ಅಸ್ತಿತ್ವವನ್ನು ಇನ್ನಿಲ್ಲ ಅನ್ನಿಸಿಬಿಡುವ ಸಾಧ್ಯತೆ ಇದೆ. ತಾನೇಕೆ ಇವನೆದುರು ನಿಂತೆ ಎನ್ನುವ ಭಾವಗಳು ಮುತ್ತಿಕೋಳ್ಳುತ್ತವೆ. ಈ ಮಾತು ಬಂದಾಗ ಎದ್ದು ನಿಲ್ಲುವುದು ಕಲಿತಿಲ್ಲವಾದರೆ ಖಂಡಿತ ನಮ್ಮನ್ನು ನಾವೇ ನಾಶ ಮಾಡಿಕೊಳ್ಳಲು ಸಿದ್ಧರಾಂತೆಯೇ ಸರಿ. ಯಾಕೆಂದರೆ ನಮ್ಮ ಬದುಕಲ್ಲಿ  ಯಾವತ್ತು ಸುಖ ಸಂತೋಷ ಸಡಗರ ಮಾತ್ರ ಇರಲು ಸಾಧ್ಯವೇ ಇಲ್ಲ. ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಎದುರಾಗುವ ಕಷ್ಟ, ನೋವುಗಳು ಬೆನ್ನಿಗೆ ಇರುತ್ತವೆ. ಅದನ್ನು ಹ್ಯಾಂಡಲ್ ಮಾಡಲು ಕಲಿತರೆ ಮಾತ್ರ ಇಲ್ಲಿ ಬದುಕು. ಇಲ್ಲವಾದರೆ ನಾಶ. ಇದು ಕೇವಲ ದೊಡ್ಡವರಿಗೆ ಮಾತ್ರವಲ್ಲ ಚಿಕ್ಕ ಮಕ್ಕಳಿಗೂ ಈಗೀಗ ಸವಾಲಾಗಿದೆ. 

ನಾಲ್ಕು ದಿನದ ಹಿಂದೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು. ಮೂರು ವರ್ಷದ ಮಗುವು ಒಂದು ಕಡೆ ನಿಂತಿರುತ್ತದೆ. ಅಲ್ಲಿ ನೋಡಿಕೊಳ್ಳುವ ಆಯಾ ಕೆಲವು ನಿಮಿಷಗಳ ಮಟ್ಟಿಗೆ ಬೇರೆ ಹುಡುಗರನ್ನು ಕರೆದುಕೊಂಡು ಹೊರಗೆ ಹೋಗಿದ್ದಾಳೆ. ಐದು ವರ್ಷದ ಮಗುವೊಂದು ಅದೇಕೋ ಆ ಮೂರು ವರ್ಷದ ಮಗುವನ್ನು ಹೊಡೆದು ನೆಲಕ್ಕುರುಳಿಸಿ ಥಳಿಸಿ, ಕಚ್ಚುತ್ತದೆ. ನೆಲಕ್ಕೆ ಬಿದ್ದ ಮಗು ಕೂಗಿಕೊಳ್ಳುತ್ತಿದ್ದರು ದೊಡ್ಡ ಮಗು ತನ್ನ  ಹೊಡೆಯುವ ಕೆಲಸ ನಿಲ್ಲಿಸುವುದಿಲ್ಲ. ಈ ವಿಡಿಯೋ ನೋಡಿದಾಗ ಆ ಎಳೆಯ ಎರಡು ಮಕ್ಕಳ ಮನಸ್ಸಿನ ಸ್ಥಿತಿ ಅವಲೋಕನ ಮಾಡುವುದೇ ಕಷ್ಟವಾಗುತ್ತದೆ. ಹೊಡೆತ ತಿಂದ ಮಗುವು ಸಾಧು ಸ್ವಭಾವದವನಾಗಿದ್ದು ಎಳೆವೆಯ ಪೆಟ್ಟು ದೊಡ್ಡವನಾದ ಮೇಲೂ ಆ ಮನಸ್ಸಿಗೆ ಹಾಗೆ ಉಳಿದು ಬಿಟ್ಟರೆ ಎಂಥಹ ಅನಾಹುತ ಆಗಬಹುದು. ತಂದೆತಾಯಿ ಎಷ್ಟೇ ಮನೋಸ್ಥೈರ್ಯ ತುಂಬಲಿ, ಕೌನ್ಸಲಿಂಗ್ ಮಾಡಿಸಲಿ ಮನಸ್ಸಿನಿಂದ ಅಳಿಸಿ ಹಾಕುವುದು ಸುಲಭವಂತು ಅಲ್ಲ. ಇತ್ತ ಹೊಡೆದ ಮಗುವಿನ ಮನಸ್ಥತಿ ಇದಕ್ಕಿಂತ ಗಂಭೀರ. ಇಷ್ಟು ಚಿಕ್ಕ ವಯಸ್ಸಿಗೆ ರಾಕ್ಷಸ ಪ್ರವೃತ್ತಿ ತೋರುತ್ತದೆ ಎಂದರೆ ಆ ಮಗುವಿನ ಮಾನಸಿಕವಾಗಿ ಅನಾರೋಗ್ಯದಿಂದ ಬಳಲುತ್ತಿರಬೇಕು ಇಲ್ಲವೇ, ಮನೆಯ ಸುತ್ತಲ ವಾತಾವರಣ ಅಷ್ಟು ಹದಗೆಟ್ಟಿರಬೇಕು. ಮಾನಸಿಕವಾಗಿ ಅಸ್ವಸ್ಥನಾಗಿದ್ದರೆ ಚಿಕಿತ್ಸೆಯ ಮೂಲಕ ತಹಬಂದಿಗೆ ತರಬಹುದು. ಆದರೆ ಬೆಳೆಯುತ್ತಿರುವ ವಾತಾವರಣವೇ ಹಾಗಿದ್ದರೆ ಮಾತ್ರ ಮುಂದೊಂದು ದಿನ ಕೇವಲ ತಂದೆ ತಾಯಿ ಮಾತ್ರವಲ್ಲ ಸಮಾಜ ಕೂಡ ಅವನ ವಿಕೃತತನಕ್ಕೆ ಸೋಲಬೇಕಾಗುತ್ತದೆ. ಎದುರು ಇರುವ ಸಂದರ್ಭ, ವ್ಯಕ್ತಿ, ಸ್ಥಳ ಇದ್ಯಾವುದರ ಪರಿವೆ ಇಂಥಹ ಜನರಿಗೆ ಇರುವುದಿಲ್ಲ ತೋಳೆರಿಸಿ ಜಗಳಕ್ಕೆ ನಿಲ್ಲುತ್ತಾರೆ. ಹೇಗೆ ಬದುಕ್ತಿಯಾ, ಹೇಗೆ ನಿನ್ನ ಅಡ್ಡ ಮಲಗಿಸ್ಬೇಕು ಅಂತ ಗೊತ್ತು ಎನ್ನುವ ಪಟ್ಟಿನ ಮಾತಿನ ಜೊತೆಗೆ ಹೊಡೆದಾಟಕ್ಕೆ ಮುಂದಾಗುತ್ತಾರೆ. 

ಮಗುವಿಗೆ ಬದುಕುವ ಕಲೆ ಹುಟ್ಟಿನಿಂದಲೇ ಕಲಿಸಬೇಕು. ಇಲ್ಲವಾದರೆ ಆ ಮಗು ತನ್ನಿಷ್ಟದಂತೆ ಬೆಳೆಯುತ್ತದೆ. ಕೆಲವೊಂದು ಮನೆಗಳಲ್ಲಿ ಕಣ್ಣಾರೆ ಕಂಡ ಅನುಭವವಿದು. ಚಿಕ್ಕ ಮಗು ತನ್ನ ಅಣ್ಣನಿಗೋ ಅಕ್ಕನಿಗೋ ಹೊಡೆಯಲಾರಂಭಿಸುತ್ತದೆ. ಅದನ್ನು ನೋಡಿ ದೊಡ್ಡ ಮಗು ಒಂದೆರಡು ಬಾರಿ ತನ್ನ ತಮ್ಮ ಅಥವಾ ತಂಗಿ ಎಂದು ನಗುತ್ತದೆ. ನಂತರ ಆ ಮಗು ಮತ್ತೆಷ್ಟು ಹೊಡೆಯಲಾರಂಭಿಸುತ್ತದೆ. ಅದನ್ನು ಕಂಡ ದೊಡ್ಡವರು ಇನ್ನು ನಾಲ್ಕು ಬಿಡು, ಅಪ್ಪನ ಪಾಲಿನದ್ದು ಹೊಡಿ, ಅಮ್ಮನದ್ದು ನಾಲ್ಕೇಟು ಹಾಕು ಎಂದು ಪ್ರೋತ್ಸಾಹಿಸಿ ನಗುತ್ತ ವಿಡಿಯೋ ಮಾಡುತ್ತಾರೆ. ಮಗು ಚಿಕ್ಕದಾದರೂ ಅದರ ಹೊಡೆತ ಚಿಕ್ಕದೇನಲ್ಲವಲ್ಲ. ಹಾಗಾಗಿ ದೊಡ್ಡ ಮಗು ಅಳಲು ಆರಂಭಿಸುತ್ತದೆ. ಕೊನೆಗೆ ಹೊಡೆಯುವ ಮಗುವನ್ನು ತಾವು ಕರೆದುಕೊಂಡು ‘ಅಯ್ಯೋ ಅಪ್ಪಿ ಎಷ್ಟು ಮುದ್ದಾಗಿದ್ದಿಯೇ’ ಎನ್ನುವ ಪ್ರೀತಿ. ಅತ್ತ ದೊಡ್ಡ ಮಗು ಅಳುತ್ತಿದರೆ ‘ಚಿಕ್ಕ ಮಗು ನಿನ್ನ ತಂಗಿ ಹೊಡೆದರೆ ಅಳ್ತಿಯಲ್ಲೇ ಎಂಥ ಅಕ್ಕನೇ ನೀನು’ ಎಂದು ಆಕೆಯನ್ನು ದೂರ ಇಡುತ್ತಾರೆ. ಇದರ ಪರಿಣಾಮ ಏನು? ಮಕ್ಕಳ ಮನಸ್ಸಲ್ಲಿ ಬೇಧ ಹುಟ್ಟು ಹಾಕುವುದೇ ದೊಡ್ಡವರು. ದೊಡ್ಡ ಮಗುವಿಗೆ ಈ ಅಪ್ಪ ಅಮ್ಮ ತಂಗಿಯನ್ನೇ ಪ್ರೀತಿಸುತ್ತಾರೆ ಎನ್ನುವ ಭಾವ ಮೊಳೆದು ಹೆಮ್ಮರವಾಗಿ ಮನೆಯವರನ್ನು ತಂಗಿಯನ್ನು ತಿರಸ್ಕಾರ ಮಾಡಲಾರಂಭಿಸಿಬಿಡುತ್ತಾಳೆ. ತಾನು ಒಂಟಿಯಾಗುವ ಯೋಚನೆಗೆ ಸರಿಯುತ್ತಾಳೆ. ಇನ್ನು ಚಿಕ್ಕವಳು ತಾನೇ ಈ ಮನೆಯ ರಾಜಕುಮಾರಿ ಎನ್ನುವ ಭರಮೆಯಲ್ಲಿ ಏನು ಮಾಡಿದರೂ ನಡೆಯುತ್ತೆ ಎನ್ನುವ ಸೊಕ್ಕಿಗೆ ಬಿದ್ದು ಎಲ್ಲರೆದುರು ಹಠ, ಜಗಳ ಇತ್ಯಾದಿ ಆರಂಭಿಸಿಬಿಡುವುದು.  

ಆಗ ನಾನು ಬಹುಶಹ ಒಂದೋ ಎರಡೆನೇಯದೋ ತರಗತಿ. ಅಜ್ಜ ಕಥೆ ಹೇಳು ಅಂತ ದುಂಬಾಲು ಬಿದ್ದಾಗ ಸುಮ್ಮನೆ ಒಂದು ದಿನ ಅಮೇರಿಕಾದ ಕಥೆ ಹೇಳುತ್ತೇನೆ ಎಂದು ಕೂತರು. ‘ಅಮೇರಿಕಾ ಎನ್ನುವ ಬುದ್ಧಿವಂತರ ದೇಶವೊಂದಿದೆ. ಅಲ್ಲಿ ಬಂದೂಕಿನಂಥ ಚಿಕ್ಕ ಪಿಸ್ತೂಲು ಅಂತೊಂದು ಇರುತ್ತೆ. ಅದನ್ನು ಅಲ್ಲಿ ಮಕ್ಕಳು ಸಹ ತಗೋತಾರಂತೆ. ನಿಮಗೆಲ್ಲ ಹೊಸ ಬಟ್ಟೆ ಕೊಳ್ಳಲು ಅಂಗಡಿಗೆ ಹೋಗ್ತಿವಲ್ಲ ಹಾಗೆ ಪಿಸ್ತೂಲು ತಗೋಳೊಕೆ ಅಲ್ಲಿ ಜನ ಹೋಗ್ತಾರಂತೆ’ ಅಂತ ಹೇಳಿದ್ದರು.  ಈ ಕಥೆ ಒಮ್ಮೆ ಮಾತ್ರ ಹೇಳಿದ್ದು. ಆದರೆ ಮನಸ್ಸಿಗೆ ಎಷ್ಟು ನಾಟಿತ್ತು ಎಂದರೆ ಈ ರೀತಿ ಪಿಸ್ತೂಲು ನಮ್ಮ ಕೈಗೂ ಸಿಕ್ಕಿದ್ರೆ ಮೇಸ್ಟ್ರು ಬೈವಾಗ ಢುಶುಂ ಎನ್ನಿಸಿಬಿಡಬಹುದಲ್ಲವಾ ಅಂತ. ಕೇವಲ ಒಂದು ಕುತೂಹಲಕಾರಿ ಕಥೆಯೊಂದು ಮನಸ್ಸನ್ನು ಇಷ್ಟು ಛಿತ್ರಗೊಳಿಸುತ್ತದೆ ಎಂದರೆ ದಿನವೂ ಅಂಥಹದ್ದೊಂದು ವಾತಾವರಣದಲ್ಲಿ ಬೆಳೆವ ಮಗುವಿನ ಭವಿಷ್ಯ ಹೇಗಿರಬಹುದು ಎಂದು ಯೋಚಿಸಿ. 

ಮಕ್ಕಳ ಮನಸ್ಸನ್ನು ತಿದ್ದುವುದು ದೊಡ್ಡ ಶಿಕ್ಷಣ. ಸಂಸ್ಕಾರ ಎನ್ನುವ ಒಂದು ಶಿಕ್ಷಣ ಇಲ್ಲದೇ ಹೋದಲ್ಲಿ ಆ ಮಗು ಅಥವಾ ವ್ಯಕ್ತಿ ಸಮಾಜ ಘಾತಿಕರಾಗಿಯೇ ಬೆಳೆಯುವುದು. ಆಪತ್ತು ಬಂದಾಗ ಎದುರಿಸಲು ಕೈ ಎತ್ತುವುದು  ಬೇರೆ, ಕಾಲು ಕೆರೆದು ಜಗಳಕ್ಕೆ ನಿಂತು ಕೈ ಮಿಲಾಯಿಸುವದು ಬೇರೆ.  ಅದೆಷ್ಟೋ ದಂಪತಿಗಳು ಅವಶ್ಯಕತೆ ಇದ್ದರೂ ತಮ್ಮ ಮಕ್ಕಳ ಲಾಲನೆ ಪಾಲನೆಗಾಗಿ ಕೆಲಸ ಬಿಟ್ಟು ಮನೆಯಲ್ಲಿದಾರೆ. ಅದರಲ್ಲೂ ಮನೆಯಲ್ಲಿ ಹಿರಿಯರು ಇರಬೇಕು. ಮಕ್ಕಳ ಬೆಳವಣಿಗೆಯಲ್ಲಿ ಅಜ್ಜ ಅಜ್ಜಿಯರ ಪಾತ್ರ ಬಹಳವೇ ಹಿರಿಯದು. ಒಂದು ಮಗುವನ್ನು ಸುಸಂಸ್ಕೃತನನ್ನಾಗಿ ಬೆಳೆಸುವುದು ಸಣ್ಣ ಜವಬ್ದಾರಿಯಲ್ಲ. ಹೆತ್ತ ನಂತರ ಸುಮಾರು ಹದಿನೆಂಟು ವರ್ಷದವರೆಗೆ ಅವರನ್ನು ಜೋಪಾನ ಮಾಡುವ ಆ ಕೆಲಸವೂ ಉಳಿದ ಎಲ್ಲ ಕೆಲಸಕ್ಕಿಂತ ಬಹಳವೇ ದೊಡ್ಡ ಜವಬ್ದಾರಿ. ಹೆತ್ತ ತಂದೆ ತಾಯಿ ಮನೆಯಲ್ಲಿ ಮಕ್ಕಳ ಮುಂದೆ ಹೇಗೆ ನಡೆದುಕೊಳ್ಳುತ್ತಾರೆ ಎನ್ನುವದು ಎಷ್ಟು ಮುಖ್ಯವೋ, ಹಾಗೆ ಮಗುವೊಂದು ತಮ್ಮಿಬ್ಬರನ್ನು ಹೊರತು ಪಡಿಸಿದ ಜಗತ್ತಲ್ಲಿ ಹೇಗೆ ತನ್ನ ನಡುವಳಿಕೆ ತೋರಿಸುತ್ತದೆ ಎಂದು ದೊಡ್ಡವರು ಗಮನದಲ್ಲಿ ಇಡುವುದು ಕೂಡ ಮುಖ್ಯ. ಮಗು ತಪ್ಪು ಮಾಡಿದಾಗ ಸಮಾಧಾನದಲ್ಲಿ ಅದು ತಪ್ಪು ಎಂದರೆ ಎಳೆವೆಯಲ್ಲಿ ತಿದ್ದಿಕೊಳ್ಳುತ್ತದೆ. ಕೇಳಲಿಲ್ಲವೆಂದರೆ ಒಂದೆರಡು ಹೊಡೆತ ಕೊಟ್ಟರು ಪರವಾಗಿಲ್ಲ. ಹೊಡೆತ ಎಂದ ತಕ್ಷಣ ನಮ್ಮಲ್ಲಿ ಕೆನ್ನೆಗೆ ಭಾರಿಸುತ್ತಾರೆ. ಅದು ಖಂಡಿತ ತಪ್ಪು. ಕೆನ್ನೆಗೆ ಬೀಳುವ ಹೊಡೆತ ಆಯಕ್ಕೆ ಬಿದ್ದರೆ ಮಗು ನಮ್ಮಿಂದ ದೂರವೇ ಆಗಿಬಿಡಬಹುದು. ಕಾಲಿಗೋ ಕೈಗೋ ಎರಡು ಏಟು ಹೊಡೆದು ಇದು ತಪ್ಪು ಎಂದರೆ ಮಕ್ಕಳಲ್ಲಿ ಭಯ ಹುಟ್ಟುತ್ತದೆ. ಆ ಭಯ ಅಪ್ಪ ಅಮ್ಮನ ಮೇಲೆ ಆಗಬಾರದು. ನೀನು ಮಾಡಿದ ತಪ್ಪಿಗೆ ಈ ಶಿಕ್ಷೆ. ನಿನಗಲ್ಲ ಎನ್ನುವುದನ್ನು ಸಹ ತಿಳಿಸಿ ಹೇಳಬೇಕು. ಆಗ ಮಗು ನಾಜೂಕುತನದ ಜೊತೆ ವಿನಯವನ್ನು ರೂಢಿಸಿಕೊಳ್ಳುತ್ತದೆ. ತಾನು ಮಾಡ ಹೊರಟಿರುವ ಕೆಲಸ ತಪ್ಪೋ ಸರಿಯೋ ಎಂದು ಯೋಚಿಸುತ್ತದೆ ಬದುಕುವ ಶಿಕ್ಷಣವನ್ನು ಯಾವ ಶಾಲೆ, ಕಾಲೇಜು ಯೂನಿವರ್ಸಿಟಿಯೂ ಕಲಿಸುವುದಿಲ್ಲ. ಆ ಪಾಠ ಮನೆಯಲ್ಲಿಯೇ ಆಗಬೇಕು. ಇಲ್ಲವಾದರೆ ಇನ್ನೊಬ್ಬರೆದುರು ಸುಖಾಸುಮ್ಮನೆ ತೋಳೇರಿಸಿ ನಿಂತು ಜಗಳವಾಡುತ್ತವೆ. ಗಿಡವಾಗಿದ್ದಾಗಲೇ ದಬ್ಬೆ ಕಟ್ಟಿ ಗಿಡವನು ನಮಗೆ ಬೇಕಾದಂತೆ ಬಾಗಿಸಿಕೊಳ್ಳಬೇಕು. ಮರವಾದ ಮೇಲೆ ಮರ ಬಲಿತು ಎತ್ತಲೂ ಬಗ್ಗಿಸಲು ಸಾಧ್ಯವಿಲ್ಲ. ಅದಕ್ಕೆ ಅಲ್ಲವೆ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ! ಎನ್ನುವುದು. ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡುವುದೋ ಹೂವು ಮುಡಿಸುವುದೋ ದೊಡ್ಡವರ ಪಾಲನೆಯಲ್ಲಿದೆ ಅಷ್ಟೆ,. 

- ಶುಭಾ ಗಿರಣಿಮನೆ 

- * * * -