ಜಿಲ್ಲಾಮಟ್ಟದ ಮಹಿಳಾ ಸ್ವಹಾಯ ಸಂಘಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟನೆ
ಧಾರವಾಡ ಏ.05: ಧಾರವಾಡ ಜಿಲ್ಲಾ ಪಂಚಾಯತದಿಂದ 2024-25 ನೇ ಸಾಲಿಗಾಗಿ ಸಂಜೀವಿನಿ ಯೋಜನೆಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳು ಉತ್ಪಾದಿಸುವ ಗೃಹಪಯೋಗಿ ಮತ್ತು ಕರಕುಶಲ ವಸ್ತುಗಳ ಜಿಲ್ಲಾ ಮಟ್ಟದ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಇಂದು (ಏ.05) ಜಿಲ್ಲಾ ಪಂಚಾಯತ ಅತಿಥಿ ಗೃಹದ ಆವರಣದಲ್ಲಿ ಆರಂಭಿಸಲಾಗಿದೆ.
ನವಲಗುಂದ ವಿಧಾನಸಭಾ ಮತಕ್ಷೇತ್ರದ ಶಾಸಕ ಎನ್.ಎಚ್.ಕೋನರಡ್ಡಿ ಅವರು ಮೇಳವನ್ನು ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ಬಡಕುಟುಂಬದ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ಒದಗಿಸಿ, ಆರ್ಥಿಕವಾಗಿ ಸಬಲೀಕರಣಗೊಳಿಸಲು ಹಾಗೂ ಗ್ರಾಮೀಣ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶವಾಗಿದೆ ಎಂದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಮಹಿಳೆಯರಲ್ಲಿ ಉದ್ಯಮಶೀಲತೆ, ಕೌಶಲ್ಯ ಬೆಳೆಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಿಳೆಯರು ವಯಕ್ತಿಕ ಉದ್ಯಮ ಹಾಗೂ ಗುಂಪುಗಳಿಂದ ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಪೂರೈಸಲಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದ ವಸ್ತು ಪ್ರದರ್ಶನ ಮಾರಾಟ ಮೇಳಕ್ಕೆ ಖಾಯಂ ಸ್ಥಳ ಒದಗಿಸಲು ಕ್ರಮವಹಿಸಲಾಗುವುದು ಎಂದರು.
ಗ್ರಾಮೀಣ ಭಾಗದ ಅಳ್ನಾವರ, ಅಣ್ಣಿಗೇರಿ, ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ ಮತ್ತು ನವಲಗುಂದ ಸೇರಿ ಏಳು ತಾಲೂಕುಗಳ ಗ್ರಾಮ ಪಂಚಾಯತ ಮಟ್ಟದ 34 ಸಂಜೀವಿನಿ ಮಹಿಳಾ ಒಕ್ಕೂಟಗಳ 59 ಉತ್ಪನ್ನಗಳನ್ನು ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಕೈಗಾರಿಕಾ ಇಲಾಖೆಯ 8 ಸಂಜೀವಿನಿ ಒಕ್ಕೂಟದ 8 ಉತ್ಪನ್ನಗಳನ್ನು ಮೇಳದಲ್ಲಿ ಪ್ರದರ್ಶಿಸಿ, ಮಾರಾಟಕ್ಕೆ ಇಡಲಾಗಿದೆ. ಸಾರ್ವಜನಿಕ ಗ್ರಾಹಕರು ಮೇಳಕ್ಕೆ ಭೇಟಿ ನೀಡಿ.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಜಿಲ್ಲಾ ಪಂಚಾಯತ ಅದೀನದಲ್ಲಿ ಬರುವ ಗ್ರಾಮೀಣ ಮಟ್ಟದ ಸ್ವ-ಸಹಾಯ ಸಂಘಗಳ ಉತ್ಪನ್ನಗಳನ್ನು ಮತ್ತು ಕೈಗಾರಿಕಾ ಇಲಾಖೆಯ ಉದ್ಯಮಿದಾರರ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಮೇಳದಲ್ಲಿ ಅವಕಾಶ ಮಾಡಲಾಗಿದೆ.
ಏಪ್ರಿಲ್ 5 ರಿಂದ 10 ರವರಿಗೆ ಪ್ರತಿದಿನ ಬೆಳಿಗ್ಗೆ 11 ಗಂಟೆಯಿಂದ ಸಂಜೆ 6 ವರೆಗೆ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತದೆ. ಸಂಜೆ 6 ರಿಂದ 8 ಗಂಟೆವರೆಗೆ ಎಸ್.ಎಚ್.ಜಿ ಗ್ರೂಪ್‌ಗಳು ಹಾಗೂ ಇತರರಿಂದ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದು ಅವರು ಹೇಳಿದರು.
ಸ್ವ-ಸಹಾಯ ಸಂಘ, ಮಹಿಳೆ ಉದ್ಯಮಿಗಳನ್ನು ಮತ್ತು ಗುಡಿಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನನವರು ಸ್ವಾಗತಿಸಿದರು. ಉಪ ಕಾರ್ಯದರ್ಶಿ ಬಿ.ಎಸ್.ಮೂಗನೂರಮಠ ವಂದಿಸಿದರು. ಎನ್.ಆರ್.ಎಲ್.ಎಂ. ಕಾರ್ಯಕ್ರಮ ಜಿಲ್ಲಾ ವ್ಯವಸ್ಥಾಪಕ ವಿನೋದ ಕಂಠಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ವ್ಯವಸ್ಥಾಪಕ ಮಹೇಶ ಪಾಟೀಲ, ವಿನೋದ ಗಾಮನಗಟ್ಟಿ, ಎಲ್ಲ ತಾಲೂಕು ಅಧಿಕಾರಗಳು, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.
ಮೇಳದ ವಿಶೇಷತೆ: ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಅರವಟಗಿ, ಮರೇವಾಡ, ಕುರುಬಗಟ್ಟಿ, ಉಪ್ಪಿನಬೇಟಗೇರಿ ಹಳ್ಯಾಳ, ಗಳಗಿ ದುಮ್ಮವಾಡ, ದಾಸ್ತಿಕೊಪ್ಪ, ಜಮ್ಮಿಹಾಳ, ನಲವಡಿ, ಮೊರಬ, ಬೇಗೂರ ಸೇರಿದಂತೆ ಸುಮಾರು 42 ಗ್ರಾಮಗಳ ಸಂಜೀವಿನಿ ಮಹಿಳಾ ಒಕ್ಕೂಟಗಳು ಭಾಗವಹಿಸಿವೆ.
ಮೇಳದಲ್ಲಿ ಖಾದಿ ಉತ್ಪನ್ನ, ಜೇನುತುಪ್ಪ, ಅಗರಬತಿ,್ತ ಮುತ್ತಿನ ಮಾಲೆ, ವಿವಿಧ ತಿಂಡಿ ತಿನಸು, ಸಿರಿಧಾನ್ಯ, ಕಸೂತಿ ವಸ್ತುಗಳು, ಎರೆಹುಳು ಗೊಬ್ಬರ ಸೇರಿದಂತೆ ಸುಮಾರು 100 ಹೆಚ್ಚು ಮನೆಯಲ್ಲಿ ತಯಾರಿಸಿದ್ದ ಉತ್ಪನ್ನಗಳನ್ನು ಮಾರಾಟಕ್ಕೆ ಇಡಲಾಗಿದೆ.