75ನೇ ವರ್ಷದ ಸ್ವಾತಂತ್ರ್ಯ ಉತ್ಸವದಲ್ಲಿ ಹೋರಾಟದ ಮೆಲಕು

 ನನ್ನ ಭಾರತ ದೇಶದ ಸತ್ಪ್ರಜೆಗಳೆ ನಮಗೆ ಸಿಕ್ಕ ಸ್ವಾತಂತ್ರ್ಯ ಕೇವಲ ಬ್ರಿಟಿಷರಿಂದ ಅಷ್ಟೇ ಅಲ್ಲ, ಪೊರ್ಚಗೀಜರಿಂದ ಅಷ್ಟೇ ಅಲ್ಲ. ಸಿಂಧಪ್ರಾಂಥದಿಂದ ಬಂದ ಪರಿಷನ್‌ರಿಂದ, ಗ್ರೀಕರಿಂದ, ಅರಬಸ್ತಾನಿಗಳಿಂದ, ತುರ್ಕಸ್ತಾನದಿಂದ ಬಂದ ತುರ್ಕರಿಂದ, ಅನೇಕ ವಿದೇಶಿಯರಿಂದ ದೊರಕಿದೆ, ಈ ಪವಿತ್ರ ಸ್ವಾತ್ರಂತ್ರ್ಯ. ಇನ್ನು ನಮ್ಮವರೇ ಆದ 900 ಚಿಕ್ಕಪುಟ್ಟ ರಾಜರಿಂದ 600 ಸಂಸ್ಥಾನಿಕರಿಂದ ದೊರಕಿದೆ ನಮಗೆ ಸ್ವಾತಂತ್ರ್ಯ. ಮಹಾತ್ಮಾಗಾಂಧಿ, ವಲ್ಲಭಬಾಯಿ ಪಟೇಲ, ಮೊತಿಲಾಲ ನೆಹರು, ಜವಾಹರಲಾಲ ನೆಹರು, ಲಾಲಬಾಹದ್ದೂರ ಶಾಸ್ತ್ರಿ, ಧೀರ-ಶೂರ-ಕ್ರಾಂತಿಕಾರಿ ವೀರ ಸಾವರಕರ, ಅಜಾದ ಹಿಂದ ಸೇನಾನಿ ನೇತಾಜಿ ಸುಭಾಷಶ್ಚಂದ್ರ ಭೋಸ, ಚಿತ್ತರಂಜನದಾಸ, ‘ಸ್ವಾತಂತ್ರ್ಯ ನನ್ನ ಜನ್ಮಸಿದ್ದ ಹಕ್ಕು’ ಎಂದ ಲೋಕಮಾನ್ಯ ಬಾಲಗಂಗಾಧರ ತಿಲಕ, ಲಾಲಾ ಲಜಪತರಾಯ ಹಾಗೂ ಬಿ. ಪಿ. ಚಂದ್ರಪಾಲರಂತವರ ಹೋರಾಟದ ಫಲವೇ ಈ ನಮ್ಮ ಸ್ವಾತಂತ್ರ್ಯ!. ‘ಕೂಬಲಡಿ ಮೈದಾನ ಕೀ ಝಾಂಸಿವಾಲಿ ರಾಣಿ ತೀ’ ಎಂದು ಕರೆಯಿಸಿಕೊಳ್ಳುವ ಝಾಂಸಿ ಲಕ್ಷ್ಮೀಬಾಯಿ, ತಾತ್ಯಾಟೋಪಿ, ಸುನಿತಾ ಚೌಧರಿ, ಕ್ಯಾಪಟಲ್ ಲಕ್ಷ್ಮೀ, ಶಾಂತಾದೀದಿ, ಪ್ರವೀಣಾದೀದಿ, ಅರುಣಾ ಅಸಫಲಿಯಂತ ಧೀರ ಹೋರಾಟಗಾರ್ತಿಯರ ಫಲವೇ ನಮ್ಮ ಸ್ವಾತಂತ್ರ್ಯ. ‘ಮೈ ಅಜಾದ ಹೂಂ, ಅಜಾದಿ ಹೀ ರಹೂಂಗಾ’ ಎನ್ನುತ್ತ ತೀರ್ಥ ಕ್ಷೇತ್ರ ಕಾಶಿಯ ನ್ಯಾಯಾಲಯದಲ್ಲಿ ನ್ಯಾಯಧೀಶರ ಮುಂದೆ ಸ್ವಲ್ಪು ಕೂಡಾ ಅಂಜದೆ, ಎದೆ ಉಬ್ಬಿಸಿ, ತಲೆ ಎತ್ತಿ ಸೆಟೆದು ನಿಂತು ಉತ್ತರ ಕೊಟ್ಟ 14 ವರ್ಷದ ಬಾಲಕ, 14 ಚಡಿ ಎಟುಗಳನ್ನು ತಿನ್ನುತ್ತ ರಾಷ್ಟ್ರದ ಸ್ವಾಭಿಮಾನದ ಸಂಕೇತವಾದ ತಿರಂಗಿ ಧ್ವಜಾರೋಹನ ಮಾಡಿ, ‘ಹಿಂದೂಸ್ಥಾನ ಸೋಷಿಯಲಿಸ್ಟ್‌ ರಿಪಬ್ಲಿಕನ್ ಆರ್ಮಿ’ಯ ದಂಡನಾಯಕನಾಗಿ, ಲಾಲಾ ಲಜಪತರಾಯರ ಹಂತಕನಾದ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಸ್ಯಾಂಡರ್ಸ್‌ನನ್ನು ಹತ್ಯಗೈಯಲು ಕಾರಣೀಭೂತನಾಗಿ, ಬ್ರಿಟಿಷರಿಗೆ ಸಿಂಹದಂತೆ ಘರ್ಜಿಸಿ ನಲವತ್ತೆರಡು ನಿಮಿಷದಲ್ಲಿ 120 ಜನ ಶಸ್ತ್ರಸಜ್ಜಿತ ಪೊಲೀಸರ ವಿರುದ್ಧ ಏಕಾಂಗಿಯಾಗಿ ಹೆಬ್ಬುಲಿಯಂತೆ ಹೋರಾಡಿ, ಡೆಪ್ಯೂಟಿ ಸೂಪರಿಂಡೆಂಟ್ ವಿಶ್ವೇಶ್ವರಸಿಂಹನನ್ನು ಕೊಂದು, ಸಾಹಸದಿಂದ ಬ್ರಿಟಿಷರ ಗುಂಡಿಗೆ ಬಲಿಯಾಗದೆ ತನ್ನ ಪಿಸ್ತೂಲಿನಿಂದ ತಾನೆ ಹೊಡೆದುಕೊಂಡು ವೀರ ಮರಣ ಹೊಂದಿದ ಧೀರ ಚಂದ್ರಶೇಖರ ಅಝಾದ!, ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ, ತಮ್ಮ ಯೌವನವನ್ನೇ ಧಾರೆ ಎರೆದು ನಗುನಗುತ ನೇಣುಗಂಬ ಏರಿದ ಭಗತಸಿಂಗ್, ರಾಜಗುರು, ಸುಕದೇವರ ತ್ಯಾಗ ಬಲಿದಾನದ ಪ್ರತೀಕವೇ ನಮ್ಮ ಸ್ವಾತಂತ್ರ್ಯ.  

ಇನ್ನು ಕರ್ನಾಟಕದಲ್ಲಿ ಬ್ರಿಟಿಷರಿಗೆ ವಿರೋಧವಾಗಿ ಸ್ವಾತಂತ್ರ್ಯದ ಕಹಳೆಯನ್ನು 1799ರಲ್ಲಿ ಪ್ರಥಮವಾಗಿ ಊದಿದವರು ಶ್ರೀರಂಗಪಟ್ಟಣದ ಹೈದರಲಿ ಹಾಗೂ ಅವನ ಮಗ ಟಿಪ್ಪು ಸುಲ್ತಾನ ಎಂದು ಹೇಳಬಹುದು. ಆದರೆ ಇವರು ಹಿಂದು ವಿರೋಧಿಗಳಾಗಿದ್ದರು. ಆದರೂ ಬ್ರಿಟಿಷರ ಪ್ರಾಬಲ್ಯವನ್ನು ಮುರಿದು ಅವರನ್ನು ದೇಶದಿಂದಲೇ ಹೊರಹಾಕಲು ಅವಿರತ ಪ್ರಯತ್ನ ಮಾಡಿದರು. ನಂತರದಲ್ಲಿ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಂಡಿಯವಾಘ ವೀರ ಸೈನಿಕನಾಗಿ ಧೈರ್ಯ, ಸ್ಥೈರ್ಯ ಹೊಂದಿ ದೇಶದ ಉಳವಿಗಾಗಿ ತಮಿಳನಾಡಿನ ಗೋಪಾಲ ನಾಯಕ, ಮಲಬಾರಿನ ಕೇರಳವರ್ಮ ಮತ್ತು ಮಾಹೆಯಲ್ಲಿದ್ದ ಫ್ರೆಂಚರ ಬೆಂಬಲ ಪಡೆದು 1800ರಲ್ಲಿ ಬ್ರಿಟಿಷರನ್ನು ಎದುರಿಸಿ ಬಿದನೂರು ಮತ್ತು ಶಿಕಾರಿಪುರಗಳನ್ನು ಕೇಂದ್ರವಾಗಿಟ್ಟುಕೊಂಡು ರಾಜ್ಯ ಕಟ್ಟಿ, ದಕ್ಷಿಣ ಕನ್ನಡ, ಧಾರವಾಡ, ಹರಪನಹಳ್ಳಿ, ಚಿತ್ರದುರ್ಗ, ಸವಣೂರು, ಹಾನಗಲ್, ಬಳ್ಳಾರಿ ಮುಂತಾದ ಭಾಗಗಳನ್ನು ತನ್ನ ಆಧಿನಕ್ಕೆ ತೆಗೆದುಕೊಂಡು ಬ್ರಿಟಿಷರ ಪರವಾಗಿ ಯುದ್ಧಕ್ಕೆ ಬಂದ ಪೇಶ್ವೆಯ ದಂಡನಾಯಕ ದೊಂಡೊಪಂತ ಗೋಖಲೆಯನ್ನು ಕೊಂದನು. ನಂತರ ಬ್ರಿಟಿಷರ ಅರ್ಥರ್ ವೆಲ್ಲೆಸ್ಲಿ ತನ್ನ ಬೃಹತ್ ಸೈನೆದೊಂದಿಗೆ ಬಂದು ಈ ದೊಂಡಿಯ ವಾಘನನ್ನು ಕ್ರಿ.ಶ 1800 ಸೆಪ್ಟಂಬರ 10 ರಂದು (ಕೋಣಗಲ್ ಯುದ್ಧದಲ್ಲಿ) ಕೊಂದುಹಾಕಿದನು. ಇದೆ ಸಮಯದಲ್ಲಿ ಶಿವಮೊಗ್ಗ ಜಿಲ್ಲೆಯ ಐಗೂರಿನ ಪಾಳೆಗಾರರಾದ ವೇಂಕಟಾದ್ರಿ ಕೂಡಾ ಬ್ರಿಟೀಷರ ವಿರುದ್ಧ ಹೋರಾಡಿದನು. 

ಕೊಪ್ಪಳದ ಜಮಿನುದಾರ ವೀರ​ಪ್ಪ 1819ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದನು. ಬೀದರ ಜಿಲ್ಲೆಯ ದೇಶಮುಖಗಳಾದ ಶಿವಲಿಂಗಪ್ಪ ತಿರುಮಲರಾಯ, ಮೇಘಶ್ಯಾಮ್ ಮುಂತಾದವರು 1820ರಲ್ಲಿ ನೆರೆಹೋರೆಯ ಪಾಳೆಗಾರರನ್ನು ಸಂಘಟಿಸಿ ಇಂಗ್ಲಿಷರೊಂದಿಗೆ ಹೋರಾಡಿದರು. ಬಿಜಾಪೂರ ಜಿಲ್ಲೆಯ ಸಿಂದಗಿಯಲ್ಲಿ ದಿವಾಕರ ದಿಕ್ಷಿತ್ ಎಂಬ ಸರದಾರ್ ಹಾಗೂ ರಾವಾಜಿ ಬಾಲಾಜಿ ದೇಶಪಾಂಡೆ ಮತ್ತು ಸೆಟ್ಯಪ್ಪ ತುಕ್ಕಳಿ ಎಂಬುವರ ಸಹಾಯದಿಂದ ಬ್ರಿಟಿಷರ ವಿರುದ್ಧ ಬಂಡಾಯ ಎದ್ದರು.  

ಇನ್ನು ದೇಶದ ಸ್ವಾತಂತ್ರ್ಯಕ್ಕಾಗಿ 1824ರಲ್ಲಿ ಬೆಳ್ಳಿಚುಕ್ಕಿಯಾದ ವೀರರಾಣಿ ಕಿತ್ತೂರಿನ ಕೇಸರಿ, ಕನ್ನಡದ ಕಣ್ಮಣಿ, ಚನ್ನಮನ ಸ್ವಾತಂತ್ರ್ಯದ ಕೆಚ್ಚು, ದೇಶ ಪ್ರೇಮದ ಹುಚ್ಚು, ಮೈ ರೊಮಾಂಚನಗೊಳ್ಳುತ್ತದೆ. ಭರತ ವರ್ಷದ ವೀರ-ರಮಣಿಯಲ್ಲಿ ಚನ್ನಮ್ಮ ಉಜ್ವಲ ತಾರೆ, ಬ್ರಿಟಿಷರೊಂದಿಗೆ ಸಿಂಹಣಿಯಂತೆ ಗರ್ಜಸಿ, ಗಂಡೆದೆಯ ಗುಂಡಿಗೆಯುಳ್ಳ ರಾಣಿ, ಯುದ್ಧದಲ್ಲಿ ಕೆಚ್ಚೆದೆಯಿಂದ ಹೋರಾಡಿ ಥ್ಯಾಕರೆನ ರುಂಡವನ್ನು ಚಂಡಾಡಿ, ​ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ, ಅಚ್ಚಳಿಯದ ಉತ್ಸಾಹದ ಚಿಲುಮೆಯಾದಳು ಚನ್ನಮ್ಮ. ಸೂರ್ಯಮುಳುಗದ ಬ್ರಿಟಿಷ ಚಕ್ರಾಧಿಪತ್ಯ ಮಣ್ಣುಪಾಲಾಯಿತು. ಆದರೆ ಚನ್ನಮ್ಮಳ ಕೀರ್ತಿ ಶೂರ ಗಂಡುಗಲಿ, ಬಿಚ್ಚುಗತ್ತಿ ಸಂಗೊಳ್ಳಿ ರಾಯಣ್ಣನ ವೀರ ಬಲಿದಾನ, ನಾಡಿನ ರಕ್ಷಣೆಗಾಗಿ ಜೀವದ ಹಂಗುತೊರೆದು ಹೋರಾಡಿದ ವೀರರಾಣಿ ಬೆಳವಡಿಯ ಮಲ್ಲಮ್ಮನಂತ ವೀರ ಕಥೆ ಅಜರಾಮರವಾಗಿ ಉಳಿದಿದೆ. ಝಾನ್ಸಿರಾಣಿ ಲಕ್ಷ್ಮೀಬಾಯಿಗಿಂತ 33 ವರ್ಷಗಳ ಮುಂಚೆಯೇ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಪ್ರಥಮ ಮಹಿಳೆಯಾಗಿ, ಚರಿತ್ರೆಯಲ್ಲಿ ಉನ್ನತ ಸ್ಥಾನ ಹೊಂದಿದ ಚನ್ನಮ್ಮಾಜಿ ಬೈಲಹೊಂಗಲ ಜೈಲಿನಲ್ಲಿ ಐದು ವರ್ಷಗಳಕಾಲ ಜೀವಿಸಿ ಸ್ವರ್ಗಸ್ಥಳಾದಳು. ರಾಣಿ ಚನ್ನಮ್ಮನ ಬಲಗೈ ಬಂಟ ಸಂಗೋಳ್ಳಿ ರಾಯಣ್ಣನು 1829ರಲ್ಲಿ ಸೆರೆಮನೆಯಿಂದ ಹೋರಬಂದು ಕಿತ್ತೂರಿನ 2ನೇ ದಂಗೆಯನ್ನು ಪ್ರಾರಂಭಿಸಿದನು. ಸಿಂಹಾಸನಕ್ಕೆ ಶಿವಲಿಂಗಪ್ಪನನ್ನು ಪೂನಃ ತರಲು ಸುರಪೂರದ ನಾಯಕನ ಬೆಂಬಲ ಪಡೆದು ಗೆರಿಲ್ಲಾ ಯುದ್ಧತಂತ್ರ ಬಳಿಸಿ ಸರ್ಕಾರಿ ಕಛೇರಿಗಳಮೇಲೆ ದಾಳಿ ನಡೆಸಿದನು. ಮೊದಲು ಬೀಡಿಯ ತಹಶೀಲ್ದಾರ ಕಛೇರಿಯನ್ನು ಸುಟ್ಟು ಕ್ರಾಂತಿಯ ಧ್ವಜ ಹಾರಿಸಿದನು. ಬಾಳಗುಂದ, ಹಂಡಿಬಡಗನಾಥ ಗುಡ್ಡಗಾಡುಗಳಲ್ಲಿ ಅಡಗಿಕೊಂಡು ಬ್ರಿಟಿಷರ ಸೇನೆಯನ್ನು ಸೋಲಿಸಿದನು. ಆಂಗ್ಲರ ಶೌರ್ಯ, ಸಾಹಸಗಳೆಲ್ಲ ಮಣ್ಣುಗೂಡಿದವು. ರಾಯಣ್ಣನ ಸೈನ್ಯಬಲ ಹೆಚ್ಚಾಯಿತು. ಕಿತ್ತೂರಿನ ಸುತ್ತುಮುತ್ತಲಿನ ಹಳ್ಳಿಯ ಜನರೆಲ್ಲ ಇವನ ಸೈನ್ಯದಲ್ಲಿ ಸೇರತೊಡಗಿದರು. 1830ರ ವೇಳೆಗೆ ರಾಯಣ್ಣನ ಸೈನ್ಯ 2000ಕ್ಕೆ ಏರಿತ್ತು. ಬ್ರಿಟಿಷ ಖಜಾನೆಗಳನ್ನು ಲೂಟಿ ಮಾಡುವುದು, ಅವರ ಮನೆಗಳಿಗೆ ಬೆಂಕಿ ಹಚ್ಚುವುದು, ಅವರೊಡನೆ ಕೂಡಿದವರನ್ನು ಗುಂಡಿಟ್ಟು ಕೊಲ್ಲುವುದು ಇವನ ನಿತ್ಯ ಕೆಲಸವಾಯಿತು. ಹಲವಾರು ತಿಂಗಳಕಾಲ ಬ್ರಿಟಿಷರಿಗೆ ಸಿಂಹ ಸ್ವಪ್ನವಾದನು. ರಾಯಣ್ಣನನ್ನು ನೇರವಾಗಿ ಸೋಲಿಸುವುದು ಬ್ರಿಟಿಷರ ಸರ್ಕಾರಕ್ಕೆ ಸಾಧ್ಯವಿಲ್ಲವೆಂಬುದು ಗೊತ್ತಾಗಿ, ಮೋಸದಿಂದ ದೇಶಿ ವಂಚಕರ ಸಹಾಯದಿಂದ ಅವನನ್ನು ಬಂಧಿಸಿ ನಂದಗಡದಲ್ಲಿ ನೇಣುಗಂಬಕ್ಕೆ (ಆಲದ ಮರಕ್ಕೆ) ಏರಿಸಲಾಯಿತು. ಮುಂದೆ ಕಿತ್ತೂರಿನ ಸ್ವಾತಂತ್ರ್ಯ ಪ್ರೇಮಿಗಳಾದ ಸರದಾರ್ ಗುರಿಸಿದ್ದಪ್ಪಾ ಹಾಗೂ ಶಂಕರಣ್ಣ ಎಂಬ ಸರದಾರ್, ನಾಗಪ್ಪ ಗಜಪತಿ, ರುದ್ರ​‍್ಪ ಕೊಟಗಿ ಇವರೆಲ್ಲ ಬ್ರಿಟಿಷರೊಂದಿಗೆ ಹೋರಾಡಿದರು. ಆದರೆ ಜಯ ದೊರೆಯಲಿಲ್ಲ.    

ಕೊಡಗಿನಲ್ಲಿ (1835-1837) ಬ್ರಿಟಿಷರು ರಾಜನಾದ ಚಿಕ್ಕವೀರ ರಾಜೇಂದ್ರನನ್ನು ಪಟ್ಟದಿಂದ ಕೆಳಗಿಳಿಯಿಸಿ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದರು. ಆಗ ಕಾಜುಗೋಡ ಪಟೇಲ್ ಮಲ್ಲಪ್ಪಗೌಡ, ಸ್ವಾಮಿ ಅಪರಂಪರ ಕಲ್ಯಾಣಸ್ವಾಮಿ, ಪುಟ್ಟಬಸಪ್ಪ ಹೀಗೆ ಅನೇಕರು ಬಂಡಾಯ ಎದ್ದರು. ಅಪರಂಪರ ಜಂಗಮಸ್ವಾಮಿಯ ನೇತೃತ್ವದಲ್ಲಿ ಶಿರಸ್ತೇದಾರನನ್ನು ಬಂಧಿಸಿದರು ಹಾಗೂ ಬ್ರಿಟಿಷ ಅಧಿಕಾರಿ ಲೂವೆನ್ ಮೇಲೆ ದಾಳಿ ಮಾಡಿ, ಬಂಟ್ವಾಳ, ಕಾಸರಗೋಡ ಖಜಾನೆಗಳನ್ನು ಲೂಟಿ ಮಾಡಿದರು. 1837 ರ ಏಪ್ರೀಲನಲ್ಲಿ ಮಂಗಳೂರಿನ ಮೇಲೆ ದಾಳಿ ಮಾಡಿ ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಿದರು. ಕಲ್ಯಾಣಸ್ವಾಮಿಯ ನೇತೃತ್ವದಲ್ಲಿ ಸುಳ್ಳ, ಪುತ್ತೂರು, ಬಂಟ್ವಾಳ, ಮಂಗಳೂರು, ಕಾಸರಗೋಡಗಳಲ್ಲಿ ತಮ್ಮದೇ ಆದ ಸರ್ಕಾರವನ್ನು ಸ್ಥಾಪಿಸಿದರು. ಕಲ್ಯಾಣಸ್ವಾಮಿ ಜೊತೆಗೆ ಪುಟ್ಟಬಸಪ್ಪನಂತವರು ಬಂಡಾಯ ಎದ್ದರು. ಇವನನ್ನು ಬ್ರಿಟಿಷರು ಬಂಧಿಸಿ 1837 ಮೇ 13 ರಂದು ಮಂಗಳೂರಿನಲ್ಲಿ ಗಲ್ಲಿಗೇರಿಸಿದರು. ಶಿವಮೊಗ್ಗ ಜಿಲ್ಲೆಯ ಬಿದನೂರಿನ ಬೂದಿ ಬಸಪ್ಪನನ್ನು ಬ್ರಿಟಿಷರು ಸೆರೆ ಹಿಡಿದು ಗಲ್ಲಿಗೇರಿಸಿದರು. ಇನ್ನೂ ಬದಾಮಿಯಲ್ಲಿಯೂ ಕೂಡಾ 1841ರಲ್ಲಿ ಬ್ರಿಟಿಷರ ವಿರುದ್ಧ ದಂಗೆ ಎದ್ದ ನರಸಿಂಗ್  ದತ್ತಾತ್ರೇಯ ಪೇಟ್ಸರ್‌ನನ್ನು ಜೀವಾವಧಿಯ ಶಿಕ್ಷೆಗೆ ಗುರಿಪಡಿಸಿದರು. ಅನಂತರ ಹುಲಿ ಕಡಿದ ನಂಜಯ್ಯ, ರಾಮಯ್ಯಗೌಡ, ಜೇರಿಂಜಿ ಸುಬ್ಬಯ್ಯ, ವೀರಣ್ಣ ಬಂಟ, ಕುಕನೂರು ಚೆನ್ನಯ್ಯ, ಕಾರವಾರ ಸುಭೇದಾರ, ಕೃಷ್ಣ  ಕರುಣಿಕ ಸುಬ್ಬಯ್ಯ ಹೀಗೆ ಮುಂತಾದವರ ದಂಗೆಯನ್ನು ಬ್ರಿಟಷರು ವಿಫಲಗೊಳಿಸಿದರು. 

ಹಲಗಲಿ ಬೇಡರ ದಂಗೆ 1857ರಲ್ಲಿ ಬ್ರಿಟಿಷರು ತಂದ ಶಸ್ರಾಸ್ತ್ರ ನಿಶ್ಯಸ್ತ್ರೀಕರಣ ಕಾಯದೆಯನ್ನು ವಿರೋಧಿಸಿ ಹಲಗಲಿಯ 500 ಜನ ಬೇಡರ ಯೋಧರು ಬಾಲಾಜಿ ನಿಂಬಾಳರ ನೇತೃತ್ವದಲ್ಲಿ ಹಾಗೂ ಜಡಗಿಯ ಬಾಳ್ಯ ಎಂಬುವರ ಮಾರ್ಗದರ್ಶನದಲ್ಲಿ ದಂಗೆ ಎದ್ದರು, ಆಗ ಲೆಪ್ಟಿನೆಂಟ್ ಕರ್ನಲ್‌ನು ನವ್ಹೆಂಬರ 21 ರಂದು ಹಲಗಲಿ ಹಳ್ಳಿಗೆ ಮುತ್ತಿಗೆ ಹಾಕಿ, ಶಶ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗಿರೆಂದು ಆಂಗ್ಲರು ಆದೇಶ ಮಾಡಿದರು. ಆದರೆ ಅವನ ಆದೇಶವನ್ನು ಯಾರೂ ಪಾಲಿಸಲಿಲ್ಲ. ಆಗ ಕೂಡಲೆ ಇಡೀ ಹಳ್ಳಿಗೆ ಬೆಂಕಿ ಹಚ್ಚಿ, ಮನೆಗಳಲ್ಲಿದ್ದ ಎಷ್ಟೋ ಬೇಡರ ಜನರನ್ನು ಸುಟ್ಟ ಹಾಕಿದನು. 290 ಜನರನ್ನು ಸೆರೆ ಹಿಡಿದನು. 32 ಜನ ಮುಖಂಡರನ್ನು 1857 ಡಿಸೆಂಬರ್ 11 ರಂದು ಗಲ್ಲಿಗೆ ಹಾಕಿದರು. ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಇದೊಂದು ಮಹತ್ವದ ಘಟನೆಯಾಗಿದೆ. 

ಸುರಪುರದ ವೆಂಕಟಪ್ಪ ನಾಯಕನ ದಂಗೆ ಬ್ರಿಟಿಷರ ದಬ್ಬಾಳಿಕೆಗೆ ಅವರ ನ್ಯಾಯಬಾಹಿರ ಆಡಳಿತಕ್ಕೆ ಎದುರಾಗಿ 24 ವರ್ಷದ ವೆಂಕಟಪ್ಪ ನಾಯಕನು ಉತ್ತರ ಭಾರತದ ನಾನಾಸಾಹೇಬ ಫಡಕೆನೊಂದಿಗೆ ಸಂಪರ್ಕ ಬೆಳೆಸಿ, ನೆರೆಹೊರೆಯ ಪಾಳೆಗಾರರನ್ನು, ಜಮೀನದಾರರನ್ನು ಸಂಘಟಿಸಿ ಬ್ರಿಟಿಷರ ಜೊತೆ ದಂಗೆ ಎದ್ದನು. ಮೊದ ಮೊದಲು ಗೆದ್ದರು ಕೂಡಾ ಕೊನೆಗೆ ದೇಶ ದ್ರೋಹಿ ಭೀಮರಾಯನ ಪಿತೂರಿಯಿಂದ ಸೋಲನ್ನು ಅನುಭವಿಸಿ, ಆತ್ಮಾಭಿಮಾನಿಯಾದ ವೆಂಕಟಪ್ಪ ನಾಯಕನು ಆತ್ಮಹತ್ಯೆ ಮಾಡಿಕೊಂಡನು. 1858ರಲ್ಲಿ ನರಗುಂದದಲ್ಲಿಯೂ ಕೂಡಾ ನರಗುಂದ ಬಾಬಾಸಾಹೇಬನು(ಭಾಸ್ಕರಾವ್ ಬಾವೆ) ಶಸ್ತ್ರಾಸ್ತ್ರ ನಿಶ್ಯಸ್ತ್ರೀಕರಣ ಕಾಯ್ದೆ ವಿರುದ್ಧ ಹಾಗೂ ದತ್ತು ಮಕ್ಕಳಿಗೆ ಹಕ್ಕು ಇಲ್ಲವೆಂಬ ಕಾಯ್ದೆ ವಿರುದ್ಧ ದಂಗೆ ಎದ್ದನು. ದೊಗಲು ದೋಸಿ ಇನಾಂದಾರ, ಆನೆಗೊಂದಿಯ ಶ್ರೀರಂಗರಾಯ, ಧಾರವಾಡದ ನೆರೆಹೊರೆಯ ದೇಸಾಯಿಗಳ ಬೆಂಬಲ ಪಡೆದು ಬ್ರಿಟಿಷರೊಂದಿಗೆ 1858 ರ ಮೇ ನಲ್ಲಿ ಯುದ್ಧ ಸಾರಿದನು. ಆದರೆ ದೈವ ಅವನ ಬೆಂಬಲಕ್ಕೆ ನಿಲ್ಲಲಿಲ್ಲ. ಕೊನೆಗೆ ಬ್ರಿಟಿಷರ ಸೆರೆಯಾಗಿ ಜೂನ 12 ರಂದು ಬಾಬಾಸಾಹೇಬನನ್ನು ರಹಸ್ಯ ಸ್ಥಳದಲ್ಲಿ ಗಲ್ಲಿಗೇರಿಸಿದರು.  

ಮುಂಡರಗಿಯ ಭೀಮರಾಯನ ಬಂಡಾಯ; ಗದಗ ಜಿಲ್ಲೆಯ ಮುಂಡರಗಿಯ ನಾಡಗೌಡ ಮನೆತನದ ರಂಗರಾಯನ ಮಗನಾದ ಭೀಮರಾಯನು ಮಾಮಲೇದಾರ ಪದವಿಯನ್ನು ತ್ಯಜಿಸಿ ಬ್ರಿಟಿಷರ ದಬ್ಬಾಳಿಕೆಗೆ ಸೆಡ್ಡು ಹೊಡೆದು ಹಮ್ಮಿಗೆಯ ಕೆಂಚನಗೌಡರನ್ನು, ಡಂಬಳದ ದೇಶಮುಖರನ್ನು, ಗೋವಿನಕೊಪ್ಪದ ಹಾಗೂ ಸೊರಟೂರು ದೇಸಾಯಿಗಳನ್ನು ಸೇರಿಸಿಕೊಂಡು ಗದುಗಿನಲ್ಲಿಯ ಬ್ರಿಟಿಷ ಸರ್ಕಾರದ ಖಜಾನೆಯನ್ನು ಲೂಟಿಮಾಡಿ, ಕೊಪ್ಪಳದ ಕೋಟೆಯನ್ನು ವಶಪಡಿಸಿಕೊಂಡನು. 1858 ಜೂನ 1 ರಂದು ಮೇಜರ್ ಹ್ಯೂನು ಮತ್ತು ಪಿಂಡಾರನ ನಾಯಕತ್ವದಲ್ಲಿ ಟೇಲರ ಕೊಪ್ಪಳದ ಮೇಲೆ ದಾಳಿಮಾಡಿದಾಗ ಯುದ್ಧಭೂಮಿಯಲ್ಲೇ ಭೀಮರಾವ್‌ನು ಮರಣಹೊಂದಿದನು. ಹೀಗೆ ಅನೇಕ ಆಳರಸರು, ದೇಸಾಯಿಗಳು ಬ್ರಿಟಿಷರೊಂದಿಗೆ ಸ್ವಾತಂತ್ರ್ಯ ಹೋರಾಟ ಮಾಡಿದ್ದು ಅವಿಸ್ಮರಣೆ ಘಟನೆ ಎನ್ನಬಹುದು. 1857 ರ ಹೋರಾಟಗಳು ವ್ಯವಸ್ಥಿತವಾಗಿ ಆಗದೆ ಇದ್ದುದರಿಂದ ಝಾಂಸಿರಾಣಿ ಲಕ್ಷ್ಮೀಬಾಯಿ ಹಾಗೂ ಆಕೆಯ ಪುತ್ರ ಯುದ್ಧದಲ್ಲಿ ಮಡಿದರು. ನಾನಾಸಾಹೇಬ ಫಡಕೆ ಅರಣ್ಯದಲ್ಲಿ ಮಾಯವಾದನು. ತಾತ್ಯಾಟೋಪಿಯನ್ನು ಪಿತೂರಿಯಿಂದ ಹಿಡಿದು ಗಲ್ಲಿಗೇರಿಸಿದರು. ದೆಹಲಿಯ ಕೊನೆಯ ಅರಸನಾದ ಭಾದ್ಧೂರುಷಾ ಜಾಫರನ ಮಕ್ಕಳನ್ನು ಕೊಂದು, ಅವನನ್ನು ಭರ್ಮಾ ದೇಶದ ರಂಗೂನದ ಜೈಲಿನಲ್ಲಿಟ್ಟರು. ಹೀಗೆ ಆಳರಸರ ಹೋರಾಟ ಯಸ್ಸಶ್ವಿಯಾಗದೆ ಬ್ರಿಟಿಷರು ಜಯಶಾಲಿಯಾದರು. ಇದರಿಂದಾಗಿ ಅಖಂಡ ಹಿಂದೂಸ್ಥಾನವು ಆಂಗ್ಲರು ವಶವಾಯಿತು. ಇದು ಹಿಂಸಾತ್ಮಕ ಹೋರಾಟದ ಒಂದು ಹಂತವಾದರೆ, ಇನ್ನು ಮುಂದಿನ ಲೇಖನದಲ್ಲಿ “ಕರ್ನಾಟಕದಲ್ಲಿ ಅಹಿಂಸಾತ್ಮಕ ಸ್ವಾತಂತ್ರ್ಯ ಚಳುವಳಿಗಳು” ಎಂಬ ವಿಷಯ ಬಗ್ಗೆ ಗಮನ ಹರಿಸೋಣ. 

|| ಭವ್ಯ ಭಾರತದ ಸ್ವಾತಂತ್ರ್ಯ ಚಿರಾಯುವಾಗಲಿ|| 

ಜೈ ಹಿಂದ್, ಜೈ ಕರ್ನಾಟಕ