ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಿರಲಿ: ಐಹೊಳೆ

There should be no shortage of drinking water and fodder for livestock: Aihole

ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಿರಲಿ: ಐಹೊಳೆ  

ರಾಯಬಾಗ 01: ಬೇಸಿಗೆ ಕಾಲ ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಎಲ್ಲ ಮುಂಜಾಗೃತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಡಿ.ಎಮ್‌.ಐಹೊಳೆ ಸೂಚಿಸಿದರು.  

ಮಂಗಳವಾರ ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ನಡೆದ ಟಾಸ್ಕ್‌ಫೋರ್ಸ ಸಭೆಯಲ್ಲಿ ಮಾತನಾಡಿದ ಅವರು, ಬಹು ಕುಡಿಯುವ ನೀರಿನ ಯೋಜನೆ ವ್ಯಾಪ್ತಿಯಲ್ಲಿರುವ ಗ್ರಾಮಗಳಿಗೆ ಸರಿಯಾಗಿ ನೀರು ಸರಬರಾಜು ಆಗುವಂತೆ ನೋಡಿಕೊಳ್ಳಲು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಭಿಯಂತರರಿಗೆ ಸೂಚಿಸಿದರು. 

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲ ಜೀವನ ಮಿಷನ್ ಯೋಜನೆ ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸುವಂತೆ ಪಂಚಾಯತರಾಜ್ ಇಲಾಖೆ ಎಇಇ ಸುಭಾಷ ಭಜಂತ್ರಿಯವರಿಗೆ ಸೂಚಿಸಿದರು. ಈ ಬಾರಿ ತೀವ್ರ ಬೇಸಿಗೆ ತಾಪಮಾನ ಇರುವುದರಿಂದ ಪಟ್ಟಣದ ಜಲಮೂಲವಾದ ಹುಲ್ಯಾಳ ಕೆರೆಯಲ್ಲಿ ನೀರು ತುಂಬಿಸಿ, ರಾಯಬಾಗ ಪಟ್ಟಣದ ಜನರಿಗೆ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಪ.ಪಂ.ಮುಖ್ಯಾಧಿಕಾರಿಗಳಿಗೆ ಶಾಸಕರು ತಿಳಿಸಿದರು.  

ಕೆರೆಯಲ್ಲಿ ನೀರು ಇದ್ದರೂ ಪಟ್ಟಣದ ಜನರಿಗೆ 7 ದಿನಗಳಿಗೆ ಒಮ್ಮೆ ನೀರು ಬೀಡುತ್ತಿರುವುದಾಗಿ ಪ.ಪಂ.ಅಧ್ಯಕ್ಷ ಅಶೋಕ ಅಂಗಡಿ ಆರೋಪಿಸಿದರು. ಇದಕ್ಕೆ ಸಮಜಾಯಿಸಿ ಉತ್ತರಿಸಿದ ಮುಖ್ಯಾಧಿಕಾರಿಗಳು, ಈ ಮೊದಲು ಹೆಸ್ಕಾಂದವರು ಜಾಕವೇಲ್‌ಗೆ ಪ್ರತೇಕ್ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದ್ದರು, ಈಗ ಅದಕ್ಕೆ ಪ್ರತ್ಯೇಕ ವಿದ್ಯುತ್ ಸಂಪರ್ಕ ಇಲ್ಲದೇ ಇರುವುದರಿಂದ ತೊಂದರೆಯಾಗುತ್ತಿದೆ ಎಂದು ಸಭೆಯಲ್ಲಿ ತಿಳಿಸಿದರು.  

ಪ್ರತಿಯೊಂದಕ್ಕೂ ಹಾರಿಕೆ ಉತ್ತರ ನೀಡುವುದಾದರೆ ಸಭೆಗೆ ಬರಬೇಡಿಯೆಂದು ಶಾಸಕರು ಹೆಸ್ಕಾಂ ಎಇಇ ಕದಂ ಅವರನ್ನು ತರಾಟೆಗೆ ತೆಗೆದುಕೊಂಡರು. ಬೇಸಿಗೆ ಸಮಯದಲ್ಲಿ ಜಲಮೂಲಗಳಿಗೆ ಸಮರ​‍್ಕ ವಿದ್ಯುತ್ ನೀಡುವಂತೆ ಸೂಚಿಸಿದರು.     

 ಬೇಸಿಗೆಯಲ್ಲಿ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಬೇಕು ಮತ್ತು ನೀರಿನ ತೊಂದರೆ ಇರುವಲ್ಲಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಿಕೊಳ್ಳುವಂತೆ ಹಾಗೂ ಜಲಮೂಲಗಳ ಮಾಹಿತಿಯನ್ನು ಮುಂಚಿತವಾಗಿ ಸಂಗ್ರಹಿಸುವಂತೆ ತಹಶೀಲ್ದಾರ ಸುರೇಶ ಮುಂಜೆ ಅವರು ಪಿಡಿಒ ಗಳಿಗೆ ಸೂಚಿಸಿದರು.  

ಸಭೆ ಅಧ್ಯಕ್ಷತೆಯನ್ನು ತಹಶೀಲ್ದಾರ ಸುರೇಶ ಮುಂಜೆ ವಹಿಸಿದ್ದರು. ಸಭೆಯಲ್ಲಿ ತಾ.ಪಂ.ಇಒ ಡಾ.ಸುರೇಶ ಕದ್ದು, ಪ.ಪಂ.ಅಧ್ಯಕ್ಷ ಅಶೋಕ ಅಂಗಡಿ, ಮುಖ್ಯಾಧಿಕಾರಿ ಎಸ್‌.ಆರ್‌.ಮಾಂಗ, ಚಿಂಚಲಿ ಪ.ಪಂ.ಮುಖ್ಯಾಧಿಕಾರಿ ವಿ.ಬಿ.ಬಳ್ಳಾರಿ, ಎಇಇ ಸುಭಾಷ ಭಜಂತ್ರಿ, ಸೋಮಶೇಖರ ಜೋರೆ, ಎಮ್‌.ವಿ.ರಾಠೋಡ, ಲೋಹಿತ ಕಾಂಬಳೆ ಹಾಗೂ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.