ವಿಜಯಪುರ: ಪುಣ್ಯಾರಾಧನೆ: ಕುಂಭಮೇಳದೊಂದಿಗೆ ಭವ್ಯ ಮೆರವಣಿಗೆ

ಲೋಕದರ್ಶನ ವರದಿ

ವಿಜಯಪುರ 20: ಇಂಡಿ ತಾಲ್ಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದಲ್ಲಿ ಶ್ರೀ ಸಿದ್ಧಲಿಂಗೇಶ್ವರರ 92ನೇ ಪುಣ್ಯಾರಾಧನೆಯ ಅಂಗವಾಗಿ, ಶುಕ್ರವಾರ 121 ಜನ ಮಹಿಳೆಯರಿಂದ ಪೂರ್ಣ ಕುಂಭ ಮೇಳ ಹಾಗೂ ಸದ್ಗುರು ಸಿದ್ಧಲಿಂಗ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆಯು, ಸಕಲ ವಾದ್ಯ ಮೇಳದೊಂದಿಗೆ ವಿಜ್ರಂಭಣೆಯಿಂದ ಜರುಗಿತು.

ಇಲ್ಲಿನಕಮರಿಮಠದಿಂದ ಆರಂಭವಾದ ಈ ಮೆರವಣಿಗೆಗೆ, ಹಳಿಂಗಳಿಯ ಕಮರಿಮಠದ ಶಿವಶರಣೆ ದ್ರಾಕ್ಷಾಯಿಣಿದೇವಿ ಚಾಲನೆ ನೀಡಿದರು. ಬಳಿಕ ಈ ಭವ್ಯ ಮೆರವಣಿಗೆಯು ಪುರ ಪ್ರವೇಶ ಮಾಡುತ್ತಿದ್ದಂತೆ ಭಕ್ತರ ಹಷೋದ್ಘಾರ ಮುಗಿಲು ಮುಟ್ಟಿತು. 

ಈ ಮೆರವಣಿಗೆಯಲ್ಲಿ ಬ್ಯಾಂಡಸೆಟ್ ಕಲಾವಿದರು ಭಕ್ತಿ ಸಂಗೀತ ಮೊಳಗಿಸಿದರೆ, ಭಜನಾ ಕಲಾವಿದರು ಭಜನಾ ಪದಗಳನ್ನು ಹಾಡಿ ಭಕ್ತಿ ಲೋಕವನ್ನೆ ಸೃಷ್ಟಿಸಿದ ನೋಟ ನೋಡುಗರಲ್ಲಿ ಭಕ್ತಿಭಾವ ಮೂಡಿಸಿತು.

ಇದಲ್ಲದೆ ಕುಂಭ ಮೇಳದಲ್ಲಿ ಪಾಲ್ಗೊಂಡ ಮಹಿಳೆಯರು ಹೊಸ ಬಟ್ಟೆತೊಟ್ಟು, ಕಮರಿಮಠದ ಸೇವಾ ಸಮೀತಿಯಿಂದ ಕೊಡಮಾಡಿದ ದಂಡಿ ಕಟ್ಟಿಕೊಂಡು, ಪೂರ್ಣಕುಂಭ ಕಳಶದೊಂದಿಗೆ ಭಾಗವಹಿಸಿದ್ದರು. ಈ ವೇಳೆ ಹಲವು ಮಹಿಳೆಯರು ಓಂ ನಮ: ಶಿವಾಯ ನಮ: ಎಂಬ ಮಂತ್ರ ಪಠಿಸಿದರೆ, ಮತ್ತೆ ಕೆಲವರು ಸಿದ್ಧಲಿಂಗ ಮಹಾರಾಜರ ಕುರಿತ ಭಕ್ತಿ ಗೀತೆಯನ್ನು ಹಾಡಿ ಮೆರವಣಿಗೆಗೆ ಮೆರಗು ತಂದರು.

ಯುಕರು ಪಟಾಕ್ಷಿ ಸಿಡಿಸಿ ಸಂಭ್ರಮಿಸಿ ಕುಣಿದು ಕುಪ್ಪಳಿಸಿದರು. ಬಳಿಕ ಸದ್ಗುರು ಸಿದ್ಧಲಿಂಗ ಮಹಾರಾಜರ ಶಿಲಾ ಮೂತಿಗೆ ಪ್ರಭುಲಿಂಗ ಶರಣರು ಕುಂಭಾಭಿಷೇಕ ನೆರವೇರಿಸಿ ಉತ್ತಮ ಮಳೆ, ಬೆಳೆಗಾಗಿ ಪ್ರಾಥಿಸಿದರು. 

ಮೆರವಣಿಗೆಯ ಮುನ್ನಾದಿನ ತುಂತುರು ಮಳೆ ಸುರಿದು ಭಕ್ತರಲ್ಲಿ ಸಂತಸ ಮೂಡಿಸಿತ್ತು. ತಂಪಿನ, ಇಂಪಿನ ವಾತಾವರಣದಲ್ಲಿ, ಬಂಥನಾಳದ ಪೂಜ್ಯ ವೃಷಭಲಿಂಗ ಮಹಾಶಿವಯೋಗಿಗಳು ಹಾಗೂ ಹಳಿಂಗಳಿಯ ಪೂಜ್ಯ ಶಿವಾನಂದ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಈ ಉತ್ಸವದ ಅಂಗವಾಗಿ, ಇಲ್ಲಿನ ಮಹಾ ದಾಸೋಹ ನಿಲಯದಲ್ಲಿ ಭಕ್ತರಿಗೆ ವಿಶೇಷ ಅನ್ನ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಉತ್ಸವದಲ್ಲಿ ನೆರೆಯ ಪಡನೂರ, ಬರಗೂಡಿ, ಲೋಣಿ ಕೆ.ಡಿ, ಆಳೂರ, ಅಹಿರಸಂಗ, ಸೋಲಾಪುರ, ವಿಜಯಪುರ, ರಾಯಚೂರು ಸೇರಿದಂತೆ ನಾನಾ ಭಾಗದ ಸರ್ವ ಧರ್ಮಯರು ಪಾಲ್ಗೊಂಡು ಭಾವೈಕ್ಯತೆ ಸಂದೇಶ ಸಾರಿದರು.