ಬೆಂಗಳೂರು 06: ಚೀನಾದಲ್ಲಿ ಸದ್ದು ಮಾಡಿರುವ ಹ್ಯೂಮನ್ ಮೆಟಾನ್ಯುಮೊವೈರಸ್ (HMPV) ಭಾರತದಲ್ಲಿಯೂ ಕೋವಿಡ್ ರೀತಿ ಜನಸಾಮಾನ್ಯರ ಆತಂಕಕ್ಕೆ ಕಾರಣವಾದರೂ ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಕರ್ನಾಟಕದಲ್ಲಿ HMPV ನ ಎರಡು ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
ಮೊದಲ ಪ್ರಕರಣವು ಬೆಂಗಳೂರಿನಲ್ಲಿ 3 ತಿಂಗಳ ಹೆಣ್ಣುಮಗುವಿನಲ್ಲಿ ಪತ್ತೆಯಾಗಿತ್ತು. ಬ್ರಾಂಕೋಪ್ನ್ಯುಮೋನಿಯಾದೊಂದಿಗೆ ಆಸ್ಪತ್ರೆಗೆ ದಾಖಲಾದ ನಂತರ HMPV ರೋಗನಿರ್ಣಯ ಮಾಡಲಾಯಿತು. ಸಚಿವಾಲಯದ ಮಾಹಿತಿ ಪ್ರಕಾರ ಆಕೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಎರಡನೇ ಪ್ರಕರಣವು 8 ತಿಂಗಳ ಗಂಡು ಶಿಶುವಿನಲ್ಲಿ ಪತ್ತೆಯಾಗಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಎರಡು ಶಿಶುಗಳಿಗೂ ಯಾವುದೇ ಅಂತರರಾಷ್ಟ್ರೀಯ ಪ್ರಯಾಣದ ಇತಿಹಾಸವಿಲ್ಲ ಎಂದು ದೃಢಪಡಿಸಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಮಧ್ಯಾಹ್ನ ಆರೋಗ್ಯ ಆಯುಕ್ತ ಶಿವಕುಮಾರ್ ಕೆಬಿ ಮತ್ತು ಪ್ರಧಾನ ಆರೋಗ್ಯ ಕಾರ್ಯದರ್ಶಿ ಹರ್ಷಗುಪ್ತ ಸೇರಿದಂತೆ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯವು ಕರ್ನಾಟಕದಲ್ಲಿ ಎರಡು HMPV ಪ್ರಕರಣಗಳನ್ನು ದೃಢಪಡಿಸಿದ ಕೆಲವೇ ಗಂಟೆಗಳ ನಂತರ, ಗುಜರಾತ್‌ನಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ. ಇದು ಮೊದಲ ಎಚ್‌ಎಂಪಿವಿ ಪ್ರಕರಣವಾಗಿದೆ. ಸುಮಾರು 2 ವರ್ಷ ವಯಸ್ಸಿನ ಮಗುವಿನಲ್ಲಿ HMPV ವೈರಸ್ ಪತ್ತೆಯಾಗಿದೆ. ರೋಗಿಯನ್ನು ಅಹಮದಾಬಾದ್‌ನ ಚಂದ್‌ಖೇಡಾ ಪ್ರದೇಶದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಸಾರ್ವಜನಿಕರು ಪಾಲಿಸಬೇಕಾಗಿದೆ.
ಏನು ಮಾಡಬೇಕು?
*ಜನಸಂದಣಿ ಇರುವ ಸ್ಥಳಗಳನ್ನು ತಪ್ಪಿಸಿ
*ಕೈಗಳನ್ನು ಸಾಬೂನು ಮತ್ತು ನೀರು ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್‌ನಿಂದ ಹೆಚ್ಚಾಗಿ ತೊಳೆಯಿರಿ
*ಕೆಮ್ಮುವಾಗ ಅಥವಾ ಸೀನುವಾಗ, ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟಿಶ್ಯೂ ಪೇಪರ್‌ನಿಂದ ಮುಚ್ಚಿಕೊಳ್ಳಿ
*ಜ್ವರ, ಕೆಮ್ಮು ಮತ್ತು ಸೀನುವಿಕೆ ಇದ್ದಲ್ಲಿ ಸಾರ್ವಜನಿಕ ಸ್ಥಳಗಳಿಂದ ದೂರವಿರಿ
*ಮನೆಯಲ್ಲಿಯೇ ಇರಿ ಮತ್ತು ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಇತರರೊಂದಿಗೆ ಸಂಪರ್ಕವನ್ನು ಮಿತಿಗೊಳಿಸಿ
*ಸಾಕಷ್ಟು ನೀರು ಕುಡಿಯಿರಿ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ
ಏನು ಮಾಡಬಾರದು?
*ಕಣ್ಣು, ಮೂಗು ಮತ್ತು ಬಾಯಿಯನ್ನು ಆಗಾಗ್ಗೆ ಸ್ಪರ್ಶಿಸುವುದನ್ನು
*ಅನಾರೋಗ್ಯದ ಜನರೊಂದಿಗೆ ನಿಕಟ ಸಂಪರ್ಕ, ಟವೆಲ್, ಲಿನಿನ್ ಇತ್ಯಾದಿಗಳನ್ನು ಹಂಚಿಕೊಳ್ಳುವುದನ್ನು
*ಟಿಶ್ಯೂ ಪೇಪರ್ ಮತ್ತು ಕೈ ಕರ್ಚೀಫ್ ಮರುಬಳಕೆ
*ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು
*ವೈದ್ಯರನ್ನು ಸಂಪರ್ಕಿಸದೆ ಔಷಧಿ ಸೇವಿಸುವುದು