ಇಬ್ಬರು ಮಕ್ಕಳನ್ನು ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾದ ದಂಪತಿ

A couple committed suicide by killing two children

ಬೆಂಗಳೂರು 06: ಇಬ್ಬರು ಮಕ್ಕಳನ್ನು ಹತ್ಯೆ ಮಾಡಿ ಬಳಿಕ ದಂಪತಿ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಸದಾಶಿವ ನಗರದ ಆರ್.ಎಂ.ವಿ ಎರಡನೇ ಹಂತದ ಟೆಂಪಲ್ ರಸ್ತೆಯಲ್ಲಿ ನಡೆದಿದೆ.

ಪತಿ ಅನೂಪ್‌ (38), ರಾಖಿ(35), ಅನುಪ್ರಿಯಾ (5) ಮತ್ತು ಪ್ರಿಯಾಂಶ್ (2) ಮೃತಪಟ್ಟಿದ್ದಾರೆ. ಅನೂಪ್‌ ಉತ್ತರ ಪ್ರದೇಶ ಮೂಲದವರಾಗಿದ್ದು ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್‌ ಕನ್ಸಲ್ಟೆಂಟ್‌ ಆಗಿ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಮನೆಗೆ ಕೆಲಸವರು ಬಂದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ಅನೂಪ್ ಮನೆಯಲ್ಲಿ ಮೂರು ಜನ ಕೆಲಸ ಮಾಡುತ್ತಿದ್ದರು. ಮೂವರು ಕೆಲಸಗಾರರ ಪೈಕಿ ಇಬ್ಬರು ಅಡುಗೆಗೆ ನಿಯೋಜನೆಗೊಂಡಿದ್ದರೆ ಒಬ್ಬರು ಮಗು ನೋಡಿಕೊಳ್ಳಲು ಇದ್ದರು. ಮೂವರಿಗೂ ತಿಂಗಳಿಗೆ 15 ಸಾವಿರ ರೂ. ಸಂಬಳ ನೀಡುತ್ತಿದ್ದರು. ಟೆಕ್ಕಿ ಕುಟುಂಬ ಆರ್ಥಿಕವಾಗಿ ಸದೃಢವಾಗಿತ್ತು.

ಮೊದಲ ಮಗುವಿಗೆ ಮಾನಸಿಕ ತೊಂದರೆ ಇದ್ದ ಕಾರಣ ದಂಪತಿ ಬಹಳ ಕುಗ್ಗಿ ಹೋಗಿದ್ದರು. ನಿನ್ನೆ ರಾತ್ರಿ 10 ಗಂಟೆಯವರೆಗೂ ದಂಪತಿ ಖುಷಿಯಾಗಿಯೇ ಇದ್ದರು ಎಂದು ಕೆಲಸದವರು ತಿಳಿಸಿದ್ದಾರೆ.

ಘಟನೆಗೆ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಸದಾಶಿವ ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.