ಲೋಕದರ್ಶನ ವರದಿ
ವಿಜಯ ನಗರ ಬಳ್ಳಾರಿ ಕೊಪ್ಪಳ ಜಿಲ್ಲಾ ಕಲಾವಿದರಿಂದ ಚಿಂತನಾ ಕಾರ್ಯಕ್ರಮ ಬಯಲಾಟ ಕಲೆ ಉಳಿವಿಗೆ ರಂಗಾಯಣ ಮಾದರಿ ತರಬೇತಿ ಅಗತ್ಯ: ಪರಶುರಾಮ್
ಕೊಪ್ಪಳ 29: ಅತ್ಯಂತ ಅಕರ್ಷಕ ಕಲೆ ಬಯಲಾಟ ಕಲೆಯು ರಾಜ್ಯದದ್ಯಂತ ಸುಮಾರು 28 ಜಿಲ್ಲೆಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದು ಬಯಲಾಟ ಉಳಿವಿನ ಜೊತೆಗೆ ಹೊಸ ಆಯಾಮ ದೊರಕಿಸಿಕೊಡಲು ರಂಗಾಯಣ ಮಾದರಿ ತರಬೇತಿ ಅತ್ಯಗತ್ಯ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಹಾಗು ಕರ್ನಾಟಕ ಬಯಲಾಟ ಕ್ರಿಯಾಶೀಲ ಅಕಾಡೆಮಿ ಸಂಸ್ಥಾಪಕ ಪ್ರಮುಖ ಬಿ.ಪರಶುರಾಮ್ ಅಭಿಪ್ರಾಯಪಟ್ಟರು.
ಅವರು ಕೊಪ್ಪಳದ ಅಂಬೇಡ್ಕರ್ ಭವನದಲ್ಲಿ ಬಳ್ಳಾರಿ, ಕೊಪ್ಪಳ ಹಾಗು ವಿಜಯನಗರ ಜಿಲ್ಲೆಗಳ ಬಯಲಾಟ ಕಲಾವಿದರ ಸಮಾಗಮದಲ್ಲಿ ಬಯಲಾಟ ಅಳಿವು ಉಳಿವು ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಯಲಾಟಕ್ಕೆ ಹೊಸ ಆಯಾಮ ದೊರೆಯಬೇಕಿದೆ, ಹಳೆ ಮಾದರಿ ಬಯಲಾಟಗಳ ರಕ್ಷಣೆಯ ಜೊತೆಗೆ ಯಕ್ಷಗಾನದಂತೆ ಹೊಸ ಅರಿವಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು, ಬಯಲಾಟ ಕಲೆಗೆ ಸಂಬಂಧಿಸಿದಂತೆ ವೇಷ ಭೂಷಣ, ರಂಗಪರಿಕರ ಇತ್ಯಾದಿ ಸರಳೀಕರಣಗೊಳ್ಳಬೇಕು, ಹೊಸತನಗಳನ್ನು ಅಳವಡಿಸಿಕೊಳ್ಳಬೇಕು, ಸಮಾಜದ ಜ್ವಲಂತ ಸಮಸ್ಯೆಗಳನ್ನು ಬಯಲಾಟಗಳ ಮೂಲಕ ಜನಜಾಗೃತಿ ಮೂಡಿಸಬೇಕು, ಶಾಲಾ ಕಾಲೇಜುಗಳ ಮಕ್ಕಳಿಗೆ ತರಬೇತಿ ನೀಡಿ ಬಯಲಾಟದೆಡೆಗೆ ಆಸಕ್ತಿ ಬೆಳೆಯುವಂತೆ ನೋಡಿಕೊಳ್ಳಬೇಕು, ಬಯಲಾಟ ಕಲಿಸುವ ಮೇಷ್ಟ್ರಗಳಿಗಾಗಿ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳುವುದು, ಕಲಾವಿದರಿಗೆ ಬಯಲಾಟ ತರಬೇತಿ ನೀಡಿ ಅವರಿಂದ ತರುಗಾಟ ಆರಂಭಿಸಬೇಕು, ಅವರಿಗೆ ಗೌರವಧನ ಬರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಶ್ರಮವಹಿಸಬೇಕಿದೆ, ಕರ್ನಾಟಕ ಬಯಲಾಟ ಕ್ರಿಯಾ ಶೀಲ ಅಕಾಡೆಮಿಯು ರಾಜ್ಯದಾದ್ಯಂತ ಸಂಚರಿಸಿ ಸಂಘಟನೆ ಮಾಡಲಿದ್ದು, ಮೂರು ಜಿಲ್ಲೆಗಳ ಪ್ರಮುಖರ ಸಭೆ ಸೇರಿಸಿ ಸಭೆಯಲ್ಲಿ ವಿಚಾರಗಳ ಚಿಂತನ ಮಂಥನ ನಡೆಸಲಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕು ಅಧ್ಯಕ್ಷ ಹಾಗು ಕಲಾವಿದ ನಾಗರಾಜ್ ಇಂಗಳಗಿ ಮಾತನಾಡಿ, ಹೊಸ ಬಯಲಾಟಗಳ ರಚನೆಯ ಜೊತೆಗೆ ಈಗಾಗಲೆ ಇರುವ ಬಯಲಾಟಗಳ ಪುಸ್ತಕಗಳು ಧೂಳು ತಿನ್ನುತ್ತಿದ್ದು, ಅನೇಕ ಪುಸ್ತಕಗಳು ನಿರ್ವಹಣೆಯ ಕೊರತೆಯಿಂದ ಹಾಳಾಗಿವೆ ಗಟ್ಟಿ ಸಾಹಿತ್ಯ ಉಳಿಯಬೇಕಾದರೆ ಅಕಾಡೆಮಿಗಳಿಂದ ಸಾಧ್ಯವಾಗದು, ಜನರಿಗೆ ದೇಣಿಗೆ ಸಂಗ್ರಹಿಸಿ ಪುಸ್ತಕಗಳನ್ನು ಮುದ್ರಿಸಿ ಕೈಗೆಟುಕುವ ಧರದಲ್ಲಿ ಪುಸ್ತಕ ದೊರೆಯುವಂತೆ ಮಾಡಬೇಕು, ಬಯಲಾಟ ನಿರ್ದೇಶಕರ ಕೊರೆತೆಯಿದ್ದು, ಈಗಾಗಲೆ ಶಾಸ್ತ್ರೀಯವಾಗಿ ಸಂಗೀತ ಅಭ್ಯಸ ಮಾಡಿದ ಕಡಿಮೆ ವಯಸ್ಸಿನ ಯುವರಿಗೆ ಗೌರವಧನದ ಜೊತೆಗೆ ತರಬೇತಿ ನೀಡಿ ಬಯಲಾಟ ಕಲೆಗಳ ಉಳಿವಿಗೆ ಪ್ರೋತ್ಸಾಹ ನೀಡಬೇಕಿದೆ ಎಂದು ಕಿವಿಮಾತು ಹೇಳಿದರು. ಉಪನ್ಯಾಸಕ ಬಯಲಾಟ ಅಕಾಡೆಮಿ ಸಂಪನ್ಮೂಲ ವ್ಯಕ್ತಿ ಸೋಮೇಶ್ ಉಪ್ಪಾರ್ ಮಾತನಾಡಿ, ಒಟ್ಟಾರೆ ಬಯಲಾಟ ಕಲೆಗಳ ಅಧ್ಯಾಯನದ ಜೊತೆಗೆ ಅವುಗಳ ಜನಪ್ರೀಯತೆ ಹೆಚ್ಚಿಸಿ ಪ್ರೇಕ್ಷಕರು ಮತ್ತೆ ಬಯಲಾಟಗಳಡೆಗೆ ಮರುಳುವಂತೆ ಮಾಡಬೇಕಾದಲ್ಲಿ ಅನುಸರಿಸಬೇಕಾದ ಅಗತ್ಯ ಕ್ರಮಗಳ ಚಿಂತನಮಂಥನ ನಡೆಯಬೇಕಿದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಯಲಾಟ ಕಲಾವಿದರಿಗೆ ಬಯಲಾಟದ ಪ್ರಗತಿಗೆ ಸಂಬಂಧಪಟ್ಟಂತೆ ಶ್ರಮವಹಿಸಲು ಜವಬ್ದಾರಿ ನೀಡಲಾಯಿತು.
ಸಭೆಯಲ್ಲಿ ಬಯಲಾಟ ಅಕಾಡೆಮಿ ಮಾಜಿ ಸದಸ್ಯ ಸತ್ಯನಾರಾಯಣ, ನಿರ್ದೇಶಕರಾದ ಪಂಪಯ್ಯಸ್ವಾಮಿಗಳು. ಪತ್ರಕರ್ತರು ಹಾಗು ಕಲಾವಿದರಾದ ಎಂ.ಎನ್.ದೊಡ್ಡಮನಿ, ಕಲಾವಿದರಾದ ರಾಜಶೇಖರ್ ದೊಡ್ಡಮನಿ, ಹನುಮಂತಪ್ಪ ಮ್ಯಾದನೇರಿ, ಗೋವಿಂದಪ್ಪ ಹ್ಯಾಟಿ, ಗವಿಸಿದ್ದಪ್ಪ, ರಮೇಶ್ ದೊಡ್ಡಮನಿ ಲೇಬಗೇರಿ, ಪ್ರಾಣೇಶ್ ಮೇಟಿ ಲೇಬಗೇರಿ, ಬರ್ಮಣ್ಣ ಹೆಬ್ಬಾಳ್, ಹನುಂತಪ್ಪ ಹೆಬ್ಬಾಳ್, ಶಿವಪುತ್ರ್ಪ ಹಿರೇಮನಿ ಇತರರಿದ್ದರು.