ಚಂಡೀಗಢ 27: ಸಾರ್ಕ್ ವೀಸಾ ಅಡಿ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ಪ್ರಜೆಗಳು ದೇಶ ಬಿಟ್ಟು ತೆರಳಲು ವಿಧಿಸಿದ್ದ ಗಡುವು ಅಂತ್ಯಗೊಂಡಿದ್ದು, ನೂರಾರು ಮಂದಿ ಪಂಜಾಬ್‌ನ ಅಟ್ಟಾರಿ ವಾಘಾ ಗಡಿ ಮೂಲಕ ತೆರಳಿದ್ದಾರೆ. ಈ ವೇಳೆ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಸಂಬಂಧಿಕರು ಕಣ್ಣೀರ ವಿದಾಯ ಹೇಳಿದ್ದಾರೆ.
ಸಾರ್ಕ್ ವೀಸಾದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾಗಿದ್ದ ನಿರ್ಗಮನದ ಗಡುವು ಏಪ್ರಿಲ್ 26ರಂದು ಕೊನೆಗೊಂಡಿದೆ. ಆದರೆ, ವೈದ್ಯಕೀಯ ವೀಸಾದಲ್ಲಿರುವವರನ್ನು ಹೊರತುಪಡಿಸಿ ಉಳಿದವರನ್ನು ದೇಶ ಬಿಟ್ಟು ತೆರಳಲು ಸೂಚಿಸಲಾಗಿದೆ. ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾಗಿರುವ ಮೆಡಿಕಲ್ ವೀಸಾ ಏಪ್ರಿಲ್ 29ರವರೆಗೆ ಮಾತ್ರ ಮಾನ್ಯವಾಗಿರುತ್ತದೆ.
26 ಜನರು ಸಾವಿಗೀಡಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಕೇಂದ್ರ ಸರ್ಕಾರ ಈ ಆದೇಶ ಮಾಡಿತ್ತು.
ತಮ್ಮ ಪಾಕಿಸ್ತಾನಿ ಸಂಬಂಧಿಕರನ್ನು ಬೀಳ್ಕೊಡಲು ಅತ್ತಾರಿ ಗಡಿಗೆ ಅನೇಕ ಭಾರತೀಯರು ಬಂದಿದ್ದರು.
ಭಾರತದಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಬಂದಿದ್ದೆವು ಎಂದು ಬಹುತೇಕರು ತಿಳಿಸಿದ್ದಾರೆ. ಕೆಲವರು ಮದುವೆಗಳಿಗೆ ಹಾಜರಾಗಲು ಬಂದಿದ್ದರು. ಆದರೆ, ಈಗ ಭಾಗವಹಿಸದೆ ಮನೆಗೆ ಹಿಂದಿರುಗಬೇಕಾಗಿದೆ.