ಬ್ರೆಸಿಲಿಯಾ 11: ಬ್ರೆಜಿಲ್‌ನ ಮಿನಾಸ್ ಗೆರೈಸ್‌ನಲ್ಲಿ ನಡೆದ ಹರಾಜಿನಲ್ಲಿ ಭಾರತೀಯ ಮೂಲದ ತಳಿಯ ವಿಯಾಟಿನಾ-19 ಎಂಬ ಹೆಸರಿನ ಆಕರ್ಷಕ ಹಸುವೊಂದು ಬರೋಬ್ಬರಿ 40 ಕೋಟಿ ರೂ.ಗೆ ಮಾರಾಟವಾಗುವ ಮೂಲಕ ಅತ್ಯಂತ ದುಬಾರಿ ಜಾನುವಾರು ಎಂಬ ಗಿನ್ನೆಸ್ ದಾಖಲೆಗೆ ಭಾಜನವಾಗಿದೆ.
ವರದಿಯ ಪ್ರಕಾರ 1,101 ಕೆಜಿಯಷ್ಟು ತೂಕವಿರುವ ನೆಲ್ಲೂರು ತಳಿಯ ಹಸು ಇದಾಗಿದೆ. ಈ ಹಸು ಇದೆ ತಳಿಯ ಇತರ ಹಸುಗಳ ಸರಾಸರಿ ತೂಕಕ್ಕಿಂತ ಎರಡು ಪಟ್ಟು ಹೆಚ್ಚು ತೂಗಿದೆ.
4 ವರ್ಷ 5 ತಿಂಗಳ ಪ್ರಾಯದ ಬಹುಕಾಂತೀಯ ಶ್ವೇತ ವರ್ಣದ ನಯವಾದ ಚರ್ಮ ಮತ್ತು ಆಕರ್ಷಕ ಭುಜ ಹೊಂದಿರುವ ಹಸು ಎದ್ದು ಕಾಣುವಂತಿದೆ.
ವಿಶ್ವ ದಾಖಲೆಯ ಜತೆಗೆ, ಟೆಕ್ಸಾಸ್‌ನ ಫೋರ್ಟ್ ವರ್ತ್‌ನಲ್ಲಿ ನಡೆದ “ಚಾಂಪಿಯನ್ ಆಫ್ ದಿ ವರ್ಲ್ಡ್” ಸ್ಪರ್ಧೆಯಲ್ಲಿ ವಿಯಾಟಿನಾ-19 ಮಿಸ್ ಸೌತ್ ಅಮೆರಿಕ ಪ್ರಶಸ್ತಿಯನ್ನೂ ಗೆದ್ದುಕೊಂಡಿದೆ. ಇದು ಮಿಸ್ ಯೂನಿವರ್ಸ್ ಶೈಲಿಯ ಜಾನುವಾರು ಸ್ಪರ್ಧೆಯಾಗಿದ್ದು, ವಿವಿಧ ರಾಷ್ಟ್ರಗಳ ಎತ್ತುಗಳು ಮತ್ತು ಹಸುಗಳ ಸ್ಪರ್ಧೆಯಾಗಿದೆ. ಅಸಾಧಾರಣ ರೂಪ ಅಪರೂಪದ ಆನುವಂಶಿಕ ವಂಶಾವಳಿಯು ಗೆಲುವಿಗೆ ಸಹಕಾರಿಯಾಗಿದೆ.
ನೆಲ್ಲೂರು ತಳಿಯು ಉಷ್ಣವಲಯದ ಹವಾಮಾನ ಮತ್ತು ರೋಗ ನಿರೋಧಕತೆಗೆ ಹೊಂದಿಕೊಳ್ಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಈ ಕಾರಣದಿಂದಾಗಿ, ವಿಯಾಟಿನಾ-19 ನ ಭ್ರೂಣಗಳು ಸಂತಾನೋತ್ಪತ್ತಿ ಕಾರ್ಯಕ್ರಮಗಳಿಗಾಗಿ ಜಾಗತಿಕವಾಗಿ ಹೆಚ್ಚಿನ ಬೇಡಿಕೆಯಲ್ಲಿವೆ.