ಲೋಕದರ್ಶನ ವರದಿ
ಕುಕನೂರ : ವೀರಶೈವ ಲಿಂಗಾಯತ ಸಮಾಜದ ಬಂಧುಗಳು ಲಿಂಗವನ್ನ ಧರಿಸಿ ಪ್ರತಿನಿತ್ಯ ಲಿಂಗಪೂಜೆ ಮಾಡುವ ಮೂಲಕ ಧರ್ಮದ ಜಾಗೃತಿ ಕಾರ್ಯಕ್ಕೆ ಮುಂದಾಗಬೇಕು ಎಂದು ಸಮಾಜದ ಮುಖಂಡ ವೀರಯ್ಯ ತೋಂಟದಾರ್ಯಮಠ ಹೇಳಿದರು.
ಅವರು ಕುಕನೂರ ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಿಂದ ಮಠದ ಪೂಜ್ಯರ ನೇತೃತ್ವದಲ್ಲಿ ಕುಕನೂರಿನ ಕೋಳಿಪೇಟೆಯಲ್ಲಿ ನಡೆಯುತ್ತೀರುವ ಮನೆ ಮನೆಗೆ ಲಿಂಗಾದಾರಣ, ರುದ್ರಾಕ್ಷೀದಾರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಧರ್ಮವನ್ನ ನಾವು ಪಾಲನೆ ಮಾಡಿದರೆ ಧರ್ಮ ನಮ್ಮನ್ನ ಕಾಪಾಡುತ್ತದೆ, ಕೇವಲ ನಾವು ಲಿಂಗಾಯತರು ಎಂದ ಮಾತ್ರಕ್ಕೆ ಲಿಂಗಾಯತರಾಗುವುದಿಲ್ಲ ಲಿಂಗವನ್ನ ಧರಿಸಿಕೊಂಡು ಆಚರಣೆಗೆ ತಂದಾಗ ಮಾತ್ರ ಲಿಂಗಾಯತರಾಗಲು ಸಾಧ್ಯ ಎಂದರು.
ನಂತರ ಮಾತನಾಡಿದ ಕಲ್ಮಠದ ವೇ ಮೂ ಸಂಗಮೇಶ ಕಲ್ಮಠ ಸಮಾಜದ ಯುವಕರಲ್ಲಿ ಜಾತಿಗಿಂತ ಧರ್ಮ ದೊಡ್ಡದು ಎಂಬ ಭಾವನೆ ಮೂಡಬೇಕು, ಧರ್ಮದಲ್ಲಿನ ಆಚರಣೆಗಳನ್ನ ಆಚರಿಸಿದಾಗ ಧರ್ಮ ಉಳಿಯಲು ಸಾಧ್ಯ, ಸಮಾಜದ ಮುಖಂಡರು, ಹಿರಿಯರು ಧರ್ಮದ ಉಳಿವಿಗೆ ಚಿಂತನೆ ಮಾಡಬೇಕು, ಪ್ರತಿಯೊಬ್ಬರಿಗೂ ಧರ್ಮಗುರುಗಳ ಸಂದೇಶವನ್ನ ಮುಟ್ಟಿಸುವ ಕಾರ್ಯ ನಡೆಯಬೇಕು, ಮಕ್ಕಳಲ್ಲಿ ಸಂಸ್ಕಾರ ತುಂಬಬೇಕು ಎಂದು ಕರೆ ನೀಡಿದರು.
ಸಮಾಜದ ಮುಖಂಡ ಶಿವುಕುಮಾರ ಸರಗಣಚಾರ ಮಾತನಾಡಿ ಧರ್ಮದ ಕಾರ್ಯಕ್ಕೆ ಎಲ್ಲಾರ ಸಹಕಾರ ಅವಶ್ಯ, ನಮ್ಮ ಕಾರ್ಯಕ್ಕೆ ಸಹಕಾರ ನೀಡುತ್ತೀರುವ ಡಾ ಜಂಬಣ್ಣ ಅಂಗಡಿ, ರವಿ ನಾಲ್ವಾಡ, ಸಿದ್ದಲಿಂಗಯ್ಯ ಬಂಡಿಮಠ, ಪ್ರಕಾಶ ಚಂಡೂರ, ಸಣ್ಣ ದೇವಪ್ಪ ಸೋಬಾನದ, ವಿರೇಶ ಸಬರದ ಮತ್ತು ಸಮಾಜದ ಯುವಕರ ಕಾರ್ಯ ಶ್ಲಾಘನೀಯವಾದದ್ದು, ಸಮಾಜದ ಉಳ್ಳವರು ಇಂತಹ ಕಾರ್ಯಕ್ಕೆ ತನು ಮನ ಧನದಿಂದ ಸೇವೆ ಸಲ್ಲಿಸಬೇಕು, ಸಮಾಜದಲ್ಲಿ ಹಣವಂತರಾಗಿ ಬದುಕಿ ಬಾಳುವುದಕ್ಕಿಂತ, ಧರ್ಮವಂತರಾಗಿ ಸಂಸ್ಕಾರವಂತರಾಗಿ ಬದುಕಿದಾಗ ಮಾತ್ರ ಪುಣ್ಯ ಲಭಿಸಲು ಸಾಧ್ಯ ಎಂದರು. ಕೋಳಿಪೇಟೆಯ ವೀರಶೈವ ಲಿಂಗಾಯತ ಸಮಾಜದ ಎಲ್ಲರಿಗೂ ಲಿಂಗಾದಾರಣ, ರುದ್ರಾಕ್ಷೀದಾರಣ ಜೋತೆಗೆ ಧರ್ಮಗುರುಗಳ ಭಾವಚಿತ್ರವನ್ನ ಪೂಜ್ಯರು ನೀಡಿದರು.
ಚಂದ್ರಶೇಖರಯ್ಯ ಹಿರೇಮಠ, ಶರಣಯ್ಯ ಕಂಬಳಿಮಠ, ಪ್ರಭು ಶಿವಸಿಂಪಿರ, ಅಶೋಕ ಕಟಿಬಿ, ನೀಲಕಂಠಯ್ಯ ಕಾಶೀಮಠ, ಶರಣಪ್ಪ ಚಂಡೂರ, ರುದ್ರಪ್ಪ ಚಂಡೂರ, ವಿರುಪಾಕ್ಷಯ್ಯ ಮಹಾಲಿಂಗಮಠ, ಮಹಾಂತೇಶ ನಾಡಗೌಡ್ರ ಯುವಕರು ಮತ್ತು ಇತರರು ಇದ್ದರು.