ಮಹಾಕುಂಭ ಮೇಳದಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ತಲಾ ರೂ. 25 ಲಕ್ಷ ಪರಿಹಾರ ಬಿಡುಗಡೆ ಮಾಡಿದ ಉತ್ತರ ಪ್ರದೇಶ ಸರ್ಕಾರ

Uttar Pradesh government releases Rs. 25 lakh compensation each for those who died in the stampede a

ಬೆಳಗಾವಿ 12: ಪ್ರಯಾಗ್‌ರಾಜ್ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮರಣ ಹೊಂದಿದ ಬೆಳಗಾವಿ ನಾಲ್ವರ ಕುಟುಂಬಸ್ಥರಿಗೆ ಉತ್ತರ ಪ್ರದೇಶ ಸರ್ಕಾರವು ತಲಾ ರೂ. 25 ಲಕ್ಷ ಪರಿಹಾರ ಬಿಡುಗಡೆ ಮಾಡಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

ಪ್ರಯಾಗ್‌ರಾಜ್ ಜಿಲ್ಲಾಧಿಕಾರಿ ರವಿ ಮಂದರ್ ಅವರ ಜೊತೆಗೆ ಮಾತುಕತೆ ನಡೆಸಿದ್ದೇನೆ. ಕಾಲ್ತುಳಿತದಲ್ಲಿ ಮೃತರಾದ ಜ್ಯೋತಿ ಹತ್ತರವಾಟ, ಮೇಘಾ ಹತ್ತರವಾಟ, ಮಹಾದೇವಿ ಬಾವನೂರ, ಅರುಣ ಕೋಪರ್ಡೆ‌ ಅವರ ಕುಟುಂಬಸ್ಥರ ಖಾತೆಗಳಿಗೆ ನೇರವಾಗಿ ಪರಿಹಾರ ಧನ ಜಮೆ ಆಗಿದೆ. ನಾವು ಗ್ರಾಮ ಲೆಕ್ಕಾಧಿಕಾರಿ ಮೂಲಕ ಪರಿಶೀಲಿಸಿದ್ದೇವೆ’ ಎಂದು ಅವರು ನಗರದಲ್ಲಿ ಬುಧವಾರ ಮಾಧ್ಯಮದವರಿಗೆ ಮಾಹಿತಿ ನೀಡಿದರು.

ಜಿಲ್ಲೆಯಿಂದ ಮಹಾಕುಂಭ ಮೇಳಕ್ಕೆ ತೆರಳಿದವರಲ್ಲಿ ಒಟ್ಟು 16 ಮಂದಿ ಸಾವನ್ನಪ್ಪಿದ್ದಾರೆ. ನಾಲ್ವರು ಕಾಲ್ತುಳಿತದಲ್ಲಿ 10 ಮಂದಿ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಹಾಗೂ ಇಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆದರೆ, ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಮಾತ್ರ ಉತ್ತರ ಪ್ರದೇಶ ಸರ್ಕಾರ ಪರಿಹಾರ ಘೋಷಿಸಿದೆ.