ಕಾಶಿ ಪೀಠದಿಂದ ವಿದ್ವಾಂಸರಿಗೆ ಪುರಸ್ಕಾರ ಪ್ರದಾನ ಮಾಡಿದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು
ಧಾರವಾಡ 12: ಪುಸ್ತಕ ಪ್ರೀತಿ ಬೆಳೆಸಿಕೊಂಡು ನಿರಂತರ ಹೊಸ ಓದಿನ ಆಳ ಅಧ್ಯಯನದ ಜ್ಞಾನಾರ್ಜನೆಗೆ ತೆರೆದುಕೊಂಡಾಗ ಮಾನವನು ಸಂಪಾದಿಸುವ ಶ್ರೇಷ್ಠ ಪಾಂಡಿತ್ಯ ಪ್ರಭೆಯಿಂದ ವ್ಯಕ್ತಿತ್ವದ ವಿಕಾಸ ಸಾಧ್ಯವಾಗುತ್ತದೆ ಎಂದು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ಬುಧವಾರ ಉತ್ತರ್ರದೇಶದ ವಾರಾಣಾಸಿಯ ತಮ್ಮ ಕಾಶಿ ಜ್ಞಾನಪೀಠದಿಂದ ಕೊಡಮಾಡುವ ಆರು ವಿಧದ ವಾರ್ಷಿಕ ಪುರಸ್ಕಾರಗಳನ್ನು ವಿದ್ವಾಂಸರಿಗೆ ಪ್ರದಾನ ಮಾಡಿ ಆಶೀರ್ವಚನ ನೀಡಿದರು. ಮನುಷ್ಯ ಬಹಳ ಸಂಕೀರ್ಣವಾದ ಇಹದ ಬದುಕನ್ನು ಜಯಿಸಬೇಕಾಗಿದೆ; ಜೊತೆಗೆ ಚೂರ್ಣತ್ವದಿಂದ ಪೂರ್ಣತ್ವವನ್ನು ಸಾಧಿಸಬೇಕಾಗಿದೆ. ಲೌಕಿಕದ ಜೀವನ ವಿಧಾನದಲ್ಲಿ ಯಶಸ್ಸು ಸಾಧಿಸಿ, ಅಲೌಕಿಕ ಕಕ್ಷೆಯ ಆಲೋಚನೆಗಳನ್ನು ಆಸ್ವಾಧಿಸಿದಾಗಲೇ ಸಾಕ್ಷಾತ್ಕಾರದಂತಹ ಮಹಾಬೆಳಗನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.
ಹುಟ್ಟು ಮತ್ತು ಸಾವು ಮನುಕುಲದ ಸಹಜ ಮತ್ತು ಶಾಶ್ವತ ಪ್ರಕ್ರಿಯೆಗಳು. ಹುಟ್ಟು ಮತ್ತು ಸಾವುಗಳ ಮಧ್ಯೆ ಪ್ರಾಪ್ತಿಯಾಗುವ ಅತ್ಯಮೂಲ್ಯ ಆಯುಷ್ಯದ ಕ್ಷಣಗಳನ್ನು ಧನಾತ್ಮಕವಾದ ಕ್ರಿಯಾಪ್ರೇರಕ ನೆಲೆಯಲ್ಲಿ ಸದುಪಯೋಗ ಮಾಡಿಕೊಂಡಾಗ ವ್ಯಕ್ತಿತ್ವಕ್ಕೆ ಮೇರು ಮೆರಗು ಪ್ರಾಪ್ತವಾಗುತ್ತದೆ. ವಿದ್ವಾಂಸರನ್ನು ಗೌರವಿಸುವುದರಿಂದ ಅವರ ಅಭ್ಯುದಯ ಇಮ್ಮಡಿಗೊಳ್ಳುತ್ತದೆ ಎಂದೂ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.
ಪುರಸ್ಕಾರ ಪ್ರದಾನ : ಕಾಶಿ ಜ್ಞಾನಪೀಠದಿಂದ ಕೊಡಮಾಡುವ ‘ಶ್ರೀಜಗದ್ಗುರು ವಿಶ್ವಾರಾಧ್ಯ ವಿಶ್ವಭಾರತಿ ಪುರಸ್ಕಾರ’ವು 51 ಸಾವಿರ ರೂ.ಗಳ ನಗದು ಪುರಸ್ಕಾರ ಒಳಗೊಂಡಿದ್ದು, ವಾರಾಣಾಸಿಯ ಸಂಪೂರ್ಣಾನಂದ ವಿ.ವಿ. ಪ್ರಾಧ್ಯಾಪಕ ಪ್ರೊ. ಕಮಲಾಕಾಂತ ತ್ರಿಪಾಠಿ ಅವರಿಗೆ ಪ್ರದಾನ ಮಾಡಿದರು. ತಲಾ 21 ಸಾವಿರ ರೂ.ಗಳ ನಗದು ಪುರಸ್ಕಾರ ಒಳಗೊಂಡಿರುವ ‘ಶೈವ ಭಾರತಿ ಪುರಸ್ಕಾರ’ವನ್ನು ನಿವೃತ್ತ ಪ್ರಾಧ್ಯಾಪಕ ಆಚಾರ್ಯ ಧರ್ಮದತ್ತ ಚತುರ್ವೇದಿ ಅವರಿಗೆ, ‘ಕೋಡಿಮಠದ ಸಂಸ್ಕೃತ ಸಾಹಿತ್ಯ ಪುರಸ್ಕಾರ’ವನ್ನು ವಿ.ವಿ. ಪ್ರಾಧ್ಯಾಪಕ ಆಚಾರ್ಯ ಮೃತ್ಯುಂಜಯ ತ್ರಿಪಾಠಿ ಅವರಿಗೆ, ‘ಜಯದೇವ ಶ್ರೀ ಹಿಂದಿ ಸಾಹಿತ್ಯ ಪುರಸ್ಕಾರ’ವನ್ನು ಪ್ರಾಧ್ಯಾಪಕ ಡಾ.ಪರಮೇಶ್ವರದತ್ತ ಶುಕ್ಲ ಅವರಿಗೆ, ‘ಸೌ.ಸಿಂಧೂ ಸುಭಾಸ ಮಮಾಣಿ ಮಾತೃಶಕ್ತಿ ಪುರಸ್ಕಾರ’ವನ್ನು ಮಾತಾ ಪದ್ಮಶ್ರೀ ಪಾಂಡುರಂಗ ಪುರಾಣಿಕ ಅವರಿಗೆ ಹಾಗೂ ‘ಶ್ರೀಸಿದ್ಧಾಂತ ಶಿಖಾಮಣಿ ಗೌರವ ಪುರಸ್ಕಾರ’ವನ್ನು ಪ್ರಾಧ್ಯಾಪಕ ಡಾ.ಬೃಹಸ್ಪತಿ ಭಟ್ಟಾಚಾರ್ಯ ಅವರಿಗೆ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪ್ರದಾನ ಮಾಡಿದರು.
ಚೆನ್ನಗಿರಿ ಹಾಲಸ್ವಾಮಿ ವಿರಕ್ತಮಠದ ಡಾ.ಬಸವ ಜಯಚಂದ್ರ ಸ್ವಾಮೀಜಿ, ಮಹಾರಾಷ್ಟ್ರದ ಅಂಬಾಜೋಗಾಯಿ ಶಂಭುಲಿಂಗ ಸಂಸ್ಥಾನಮಠದ ಶ್ರೀಶಂಭುಲಿಂಗ ಶಿವಾಚಾರ್ಯರು, ಹಂದೆಗುಂದಿ ವಿರಕ್ತಮಠದ ಶ್ರೀಗಳು, ಪಂಡಿತ ಮಲ್ಲಿಕಾರ್ಜುನಶಾಸ್ತ್ರೀ, ಕಾಶಿ ಪೀಠದ ಸಂಚಾಲಕ ಶಿವಾನಂದ ಹಿರೇಮಠ ಹಾಗೂ ಗುರುಕುಲದ ವಿದ್ಯಾರ್ಥಿಗಳು ಇದ್ದರು. ಕಾಶಿ ಪೀಠದ ವ್ಯವಸ್ಥಾಪಕ ಆರ್.ಕೆ.ಸ್ವಾಮಿ ಸ್ವಾಗತಿಸಿದರು. ಡಾ.ವಿನೋದರಾವ್ ಪಾಠಕ ವಂದಿಸಿದರು.