ಗುರುಗ್ರಾಮ 12: ಹರ್ಯಾಣ ಮಹಾನಗರ ಪಾಲಿಕೆಗಳ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. 10 ಮೇಯರ್ ಸ್ಥಾನಗಳ ಪೈಕಿ 9 ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ.
ಗುರುಗ್ರಾಮ್, ಹಿಸಾರ್, ಕರ್ನಾಲ್, ರೋಹ್ಟಕ್, ಫರಿದಾಬಾದ್, ಯಮುನಾನಗರ, ಪಾಣಿಪತ್, ಅಂಬಾಲ ಮತ್ತು ಸೋನಿಪತ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಮಾನೇಸರ್ ನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸ್ವತಂತ್ರ ಅಭ್ಯರ್ಥಿ ಡಾ. ಇಂದರ್ಜಿತ್ ಯಾದವ್ ಸೋಲಿಸಿದ್ದಾರೆ.
ಇನ್ನು ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭೂಪೇಂದ್ರ ಹೂಡಾ, ಹಿಂದೆಯೂ ಸಹ ಪುರಸಭೆಯ ನಿಗಮಗಳಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿತ್ತು. ನಾವು ಸ್ಥಾನ ಕಳೆದುಕೊಂಡರೆ ಅದು ಹಿನ್ನಡೆಯಾಗಬಹುದು ಎಂದು ಹೇಳಲಾಗಿತ್ತು. ಆದರೆ ಅದು ಈ ಹಿಂದೆಯೇ ನಮ್ಮೊಂದಿಗೆ ಇರಲಿಲ್ಲ. ಕಾಂಗ್ರೆಸ್ ಕೆಲವು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರಬೇಕು. ಆದರೆ ಚುನಾವಣೆಯ ಸಮಯದಲ್ಲಿ ನಾನು ಎಲ್ಲಿಯೂ ಪ್ರಚಾರಕ್ಕೆ ಹೋಗಲಿಲ್ಲ. ಈ ಫಲಿತಾಂಶಗಳು ಕಾಂಗ್ರೆಸ್ ಪಕ್ಷದ ಮೇಲೆ ಪರಿಣಾಮ ಬೀರುತ್ತವೆ ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿದ ಹರ್ಯಾಣ ಸಿಎಂ ನವಾಬ್ ಸಿಂಗ್ ಸೈನಿ, ಜನರು ತ್ರಿವಳಿ-ಎಂಜಿನ್ ಸರ್ಕಾರಕ್ಕೆ ತಮ್ಮ ಅನುಮೋದನೆಯ ಮುದ್ರೆ ಹಾಕಿದ್ದಾರೆ. ನಾನು ಜನರಿಗೆ ನನ್ನ ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ.