ಉನ್ನಾವೋ ಅತ್ಯಾಚಾರ ಪ್ರಕರಣ: ಕುಲ್ದೀಪ್ ಸಿಂಗ್ ಸೆಂಗಾರ್‌ಗೆ ಜೀವಾವಧಿ ಶಿಕ್ಷೆ

ನವದೆಹಲಿ, ಡಿ 20 ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಉನ್ನಾವೋ ಅಪಹರಣ ಹಾಗೂ ಅತ್ಯಾಚಾರ ಪ್ರಕರಣ ಸಂಬಂಧ ಅಪರಾಧಿ ಹಾಗೂ ಬಿಜೆಪಿ ಉಚ್ಚಾಟಿತ ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್ ಅವರಿಗೆ ದೆಹಲಿ ಜಿಲ್ಲಾ ನ್ಯಾಯಾಕಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಇಂದು ಅಂತಿಮ ತೀರ್ಪು ಓದಿದ ಜಿಲ್ಲಾ ನ್ಯಾಯಾಧೀಶ ಧರ್ಮೇಶ್ ಶರ್ಮಾ, ಅಪರಾಧಿ ಕುಲ್ದೀಪ್ ಸಿಂಗ್‌ ಅವರಿಗೆ ಜೀವಾವಧಿ ಶಿಕ್ಷೆ ಜತೆಗೆ 25 ಲಕ್ಷ ರೂ. ದಂಡ ವಿಧಿಸಿದ್ದಾರೆ. ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಸೆಂಗಾರ್ ತಪ್ಪಿತಸ್ಥ ಎಂದು ಕಳೆದ ಸೋಮವಾರ ದೆಹಲಿ ಕೋರ್ಟ್​ತೀರ್ಪು ನೀಡಿತ್ತು. ಡಿಸೆಂಬರ್​ 19ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಾಗುವುದು ಎಂದು ತಿಳಿಸಿತ್ತು. ಪ್ರಕರಣದ ಶಿಕ್ಷೆಯನ್ನು ಇಂದು ಪ್ರಕಟಿಸಲಾಯಿತು.ಉತ್ತರ ಪ್ರದೇಶದ ಉನ್ನಾವೋ ಯುವತಿ ಮೇಲೆ ಜೂನ್​,4 2017ರಲ್ಲಿ ಅತ್ಯಾಚಾರ ನಡೆದಿತ್ತು. ಈ ಪ್ರಕರಣದಲ್ಲಿ ಬಿಜೆಪಿ ಶಾಸಕನಾಗಿದ್ದ ಕುಲ್ದೀಪ್ ಸೆಂಗಾರ್ ಜೊತೆಗೆ ಇನ್ನೂ ನಾಲ್ವರ ಹೆಸರು ಕೇಳಿಬಂದಿತ್ತು. ಆ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದರು. ಕಳೆದ ವರ್ಷ ಯುವತಿ ಕೊಲೆಗೆ ಯತ್ನ ನಡೆದಿತ್ತು. ವಕೀಲರ ಜತೆ ಕೋರ್ಟ್‌ಗೆ ಹೋಗುತ್ತಿದ್ದಾಗ ಆಕೆಯ ಕಾರ್​ಗೆ ಅಪಘಾತ ಮಾಡಿಸಲಾಗಿತ್ತು. ಈ ಅಪಘಾತದಲ್ಲಿ ವಕೀಲ ಮತ್ತು ಆಕೆಯ ಚಿಕ್ಕಪ್ಪ ಮೃತಪಟ್ಟಿದ್ದರು.2018ರಿಂದಲೂ ಸಿಬಿಐ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಆದರೆ, ರೇಪ್ ಸಂತ್ರಸ್ತೆಯ ಕುಟುಂಬದವರನ್ನು ನಾಶ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿರುವ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿತ್ತು. ಸಂತ್ರಸ್ತೆ ಮತ್ತಾಕೆಯ ಕುಟುಂಬ ಸದಸ್ಯರನ್ನು ವಾಯುಮಾರ್ಗದ ಮೂಲಕ ಉತ್ತರ ಪ್ರದೇಶದಿಂದ ಹೊರಗೆ ಕರೆ ತರಬೇಕೆಂದು ಸುಪ್ರೀಂ ಕೋರ್ಟ್ ಹೇಳಿತ್ತು. ಹಾಗೆಯೇ, ಪ್ರಕರಣದ ತನಿಖೆಯನ್ನು ಇನ್ನೊಂದು ವಾರದೊಳಗೆ ಮುಗಿಸಬೇಕೆಂದು ಸಿಬಿಐಗೆ ತಾಕೀತು ಮಾಡಿತ್ತು.