‘ಹೆಣ್ಣು ಸಮಾಜದ ಶಕ್ತಿಯಾಗಿ ಬೆಳೆಯಲು ಯೋಜನೆಯ ಪಾತ್ರ ಅಪಾರ

The role of the project is immense for women to grow as a force in the society

‘ಹೆಣ್ಣು ಸಮಾಜದ ಶಕ್ತಿಯಾಗಿ ಬೆಳೆಯಲು ಯೋಜನೆಯ ಪಾತ್ರ ಅಪಾರ’ 

ಬೆಳಗಾವಿ 14: ಮಹಿಳೆಯರು ಸಮಾಜದಲ್ಲಿ ಉನ್ನತ ಜೀವನ ನಡೆಸಲು ಯೋಜನೆಯು ಸಹಕಾರಿಯಾಗಿದೆ. ಮಹಿಳೆಯರು ಯಾವುದೇ ಕಷ್ಟಕ್ಕೆ ಕುಗ್ಗದೇ ಮುನ್ನಡೆಯಬೇಕು. ಯೋಜನೆಯ ಬಗ್ಗೆ ಕೆಲವರು ಅಪಪ್ರಚಾರ ಮಾಡುವುದು ಮತ್ತು ಸದಸ್ಯರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.ನಾವು ಒಗ್ಗಟ್ಟಿನಿಂದ ಇದ್ದು ಅಂತಹ ಸಂಘಟನೆಗೆ ತಕ್ಕ ಉತ್ತರ ಕೊಡುವ ಕೆಲಸ ಮಾಡಬೇಕಾಗಿದೆ.ನಿಮ್ಮೆಲ್ಲರ ಜೊತೆ ನಾನಿದ್ದೇನೆ. ಹೆಣ್ಣು ಸಮಾಜದ ಕುಟುಂಬದ ಕಣ್ಣು. ಸಮಾಜದ ಶಕ್ತಿಯಾಗಿ ಬೆಳೆಯಲು ಯೋಜನೆಯ ಪಾತ್ರ ಅಪಾರವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಪ್ರಧಾನ ಕಾರ್ಯದರ್ಶಿ ರತ್ನಾ ಬ.ಕರವೀರನವರ ಗೋಧಿ ಅವರು ಹೇಳಿದರು. 

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ ಖಾಸಭಾಗ ಬೆಳಗಾವಿ ಜಿಲ್ಲೆ 1 ಮತ್ತು ಜ್ಞಾನವಿಕಾಸ ಕೇಂದ್ರಗಳು ಹಾಗೂ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಇವರ ಸಂಯುಕ್ತಾಶ್ರಯದಲ್ಲಿ ಬನಶಂಕರಿ ದೇವಸ್ಥಾನದ ಸಭಾಭವನದಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ಜ್ಞಾನವಿಕಾಸ ಕೇಂದ್ರಗಳ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಮುಖ್ಯ ಅತಿಥಿಗಳಾಗಿ ಧಾರವಾಡ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ದಯಾಶೀಲ ಅವರು ಭಾಗವಹಿಸಿ ಮಾತನಾಡಿದ ಅವರು ಶ್ರೀ ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಳೆದ 4 ದಶಕಗಳಿಂದ ಕರ್ನಾಟಕದ ಗ್ರಾಮೀಣ ಜನರ ಅಭಿವೃದ್ಧಿಗೆ ಶ್ರಮಿಸಿದೆ. ಮನೆಬಾಗಿಲಿನಲ್ಲಿ ಬ್ಯಾಂಕ ವ್ಯವಹಾರ ಒದಗಿಸುವ ಚಾರಿಟೇಬಲ್ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲು ಎಂಬ ಮಾತಿನಂತೆ ಪೂಜ್ಯರು ಮಾಶಾಸನ, ದೇವಸ್ಥಾನ ಜೀರ್ಣೋದ್ಧಾರ, ಶಿಷ್ಯವೇತನ, ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಮೂಲಕ ಸಮಾಜದಿಂದ ಬಂದ ಹಣವನ್ನು ಸಮಾಜಕ್ಕೆ ವಿನಿಯೋಗಿಸುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಇಟ್ಟಿಗೆ ಮಣ್ಣಿನಿಂದ ಕಟ್ಟದೇ ಧರ್ಮದಿಂದ ಕಟ್ಟಲಾಗಿದೆ. ಧರ್ಮದ ಯೋಜನೆಯನ್ನು ಯಾವುದೇ ಅಧರ್ಮದ ಚಟುವಟಿಕೆಗಳು ನಾಶಮಾಡಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದರು.  

ಕುಟುಂಬದಲ್ಲಿ ಮಹಿಳೆಯರ ಪಾತ್ರ ಹಾಗೂ ಸಂಸ್ಕೃತಿ ಸಂಸ್ಕಾರ ವಿಷಯಾಧಾರಿತ ವಿಚಾರ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದ ಎಮ್ ಎನ್ ಆರ್ ಎಮ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ರಾದ ಡಾ ನಿರ್ಮಲ ಬಟ್ಟಲ ಇವರು ಮಾತನಾಡಿ ಮಹಿಳೆ ಕುಟುಂಬದಲ್ಲಿ ನೂರಾರು ಪಾತ್ರಗಳನ್ನು ನಿರ್ವಹಿಸುತ್ತಾಳೆ. ಸಮಾಜದಲ್ಲಿ ಪ್ರಮುಖಳಾಗಿದ್ದರು ಕುಟುಂಬದಲ್ಲಿ ಎರಡನೇಯವಳಾಗಿದ್ದುಕೊಂಡು, ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ನೀಡುವವಳು ಮಹಿಳೆಯಾಗಿರುತ್ತಾಳೆ. ಮಹಿಳೆ ಹೆಣ್ಣುಮಕ್ಕಳ ಜಾತಿಗೆ ಸೇರಿರುವುದರಿಂದ ಸ್ವಸ್ಥ ಸುಂದರ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ಮಾಹಿತಿ ನೀಡಿದರು.  

ಬೆಳಗಾವಿ ಜಿಲ್ಲೆ ನಿರ್ದೇಶಕರಸತೀಶ ನಾಯ್ಕ, ಧಾರವಾಡ ಪ್ರಾದೇಶಿಕ ಕಚೇರಿಯ ಜ್ಞಾನವಿಕಾಸ ಯೋಜನಾಧಿಕಾರಿ ಮಲ್ಲಿಕಾರವರು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಬಸವರಾಜ ಸೊಪ್ಪಿಮಠ ರವರು ವಹಿಸಿದ್ದರು. 

ಯೋಜನಾಧಿಕಾರಿ ಸುಭಾಷ ಪಿ ಸಿ ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಮೀನಾರಾಣಿ ವಂದಿಸಿದರು. ಕೃಷಿಮೇಲ್ವಿಚಾರಕ ಮಂಜುನಾಥ ಗೌಡ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಮೇಲ್ವಿಚಾರಕ ಉಮೇಶ, ಸೋಮಲಿಂಗ, ಸೇವಾಪ್ರತಿನಿಧಿಗಳಾದ ಸುಲೇಖಾ, ರೇಖಾ, ವಿನೋದ ಮತ್ತು ಜ್ಞಾನವಿಕಾಸ ಕೇಂದ್ರದ ಸದಸ್ಯರು ಭಾಗವಹಿಸಿದ್ದರು. 

ಜ್ಞಾನವಿಕಾಸ ಕೇಂದ್ರದ ಸದಸ್ಯರಿಂದ ವಿವಿಧ ಮನರಂಜನೆ ಕಾರ್ಯಕ್ರಮಗಳು ಜರುಗಿದವು.