ಮೈಸೂರು, ಏ 21,ಲಾಕ್ ಡೌನ್ ಜಾರಿಯಲ್ಲಿರುವ ಸಂದರ್ಭದಲ್ಲಿನ ಸ್ಥಿತಿಗತಿ ಅರಿಯಲು ಸಚಿವರುಗಳ ಪ್ರವಾಸ ಸಂದರ್ಭದಲ್ಲಿ ಸಾರ್ವಜನಿಕರು, ರೈತರು ಮತ್ತು ಕಾರ್ಯಕರ್ತರು ಸಾಮಾಜಿಕ ಅಂತರ ಕಾಪಾಡವುಂತೆ ಸಹಕಾರ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಎಸ್ ಟಿ ಸೋಮಶೇಖರ್ ಮನವಿ ಮಾಡಿದ್ದಾರೆ.ಲಾಕ್‌ಡೌನ್ ಸಂದರ್ಭದಲ್ಲಿ ಸಾರ್ವಜನಿಕರು, ಕಾರ್ಯಕರ್ತರು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪುಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಕೊರೋನಾ ವೈರಾಣು ಹರಡುವುದನ್ನು ತಡೆಗಟ್ಟುವ ಸಲುವಾಗಿ ಈಗಾಗಲೇ ಮೈಸೂರು ಜಿಲ್ಲೆಯನ್ನು ಹಾಟ್ ಸ್ಪಾಟ್ ಸ್ಥಳವೆಂದು ಗುರುತಿಸಲ್ಪಟ್ಟಿರುವ ಕಾರಣ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.ಕೊರೊನಾ ವೈರಾಣು ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರು ಜಾಗರೂಕತೆಯಿಂದಿದ್ದು ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.