ಬೆಂಗಳೂರು, ಏ.20, ಪಾದರಾಯನಪುರದಲ್ಲಿ ಕಳೆದ ರಾತ್ರಿ ನಡೆದ ಘಟನೆ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಪೋಲಿಸ್ ಮತ್ತು ಆಶಾ ಕಾರ್ಯಕರ್ತೆಯರ ಮೇಲೆಯೇ ದುಷ್ಕರ್ಮಿಗಳು ಹಲ್ಲೆ ಯತ್ನ ನಡೆಸಿರುವುದು ಮತ್ತು ಧಾಂದಲೆ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿರುವುದಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾಹ್ ಖಾನ್ ಖಂಡಿಸಿದ್ದಾರೆ.ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಈ ಹಿಂದೆ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಸರ್ಕಾರ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಈ ರೀತಿಯ ಘಟನೆ ಮರುಕಳಿಸುತ್ತಿರಲಿಲ್ಲ ಎಂದು ಹೇಳಿರುವ ಅವರು, ಈಗಲಾದರೂ ಸರ್ಕಾರ ಎಚ್ಚೆತ್ತು ಗಲಭೆಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.