ತುಮಕೂರು, ಮೇ 9,ಕೊರೋನಾದಿಂದ ದೇಶ ಸಂಕಷ್ಟದಲ್ಲಿದ್ದು, ರೈತರು ಬೆಳೆದರೆ ಮಾತ್ರ ದೇಶ ಉದ್ಧಾರ ಆಗಲು ಸಾಧ್ಯ ಎನ್ನುವುದನ್ನು ಅರಿತು ಕೃಷಿ ವಲಯಕ್ಕೆ ಲಾಕ್ ಡೌನ್ ನಡುವೆಯೂ ಸಡಿಲಿಕೆಯನ್ನು ನೀಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.ತಾಲ್ಲೂಕಿನ ಬುಗುಡನಹಳ್ಳಿ ಗ್ರಾಮದಲ್ಲಿ ಕೊರೋನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಪಡಿತರ ವಿತರಿಸಿ ಮಾತನಾಡಿದ ಅವರು, ಆಹಾರವನ್ನು ಸರಿಯಾಗಿ ಪೂರೈಕೆ ಮಾಡದ 150 ಅಂಗಡಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪಡಿತರವನ್ನು ಉಚಿತವಾಗಿ ನೀಡಲಾಗುತ್ತಿದೆ, ರಾಜ್ಯ ಸಂಕಷ್ಟದಲ್ಲಿರುವ ಪರಿಸ್ಥಿತಿಯಲ್ಲಿ ಹಣ ಪಡೆಯದಂತೆ ಮನವಿ ಮಾಡಿದರೂ, ಅಂಗಡಿ ಮಾಲೀಕರು ಮೋಸ ಮಾಡುತ್ತಿದ್ದರು. ಇಂತಹ ಅಂಗಡಿಗಳು ಹಾಗೂ ಕಾರ್ಯ ನಿರ್ವಹಿಸದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕೊರೋನಾ ಸಂಕಷ್ಟದಲ್ಲಿ ರಾಜ್ಯ ಸರ್ಕಾರ ನೀಡುವ ಪಡಿತರವನ್ನು 4.65 ಕೋಟಿ ಮಂದಿ ಪಡೆದಿದ್ದಾರೆ, ಕೇಂದ್ರ ಸರ್ಕಾರದಿಂದ ನೀಡುವ ಪಡಿತರವನ್ನು ಮೇ 1ರಿಂದ ವಿತರಿಸಲು ಕ್ರಮವಹಿಸಲಾಗಿದ್ದು, ಯಾವುದೇ ಕಾರಣಕ್ಕೂ ಕಳಪೆ ಪಡಿತರವನ್ನು ವಿತರಿಸದಿರಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ, ಪಡಿತರ ಚೀಟಿ ಹೊಂದಿರುವವರಿಗೆ ಉಚಿತವಾಗಿ ನೀಡುವಂತಾಗಬೇಕು ಎಂದರು.ವಲಸೆ ಕಾರ್ಮಿಕರು ಎಲ್ಲಿಯೇ ಇದ್ದರು ಪೋರ್ಟಬಲಿಟಿ ಆಧಾರದ ಮೇಲೆ ಪಡಿತರವನ್ನು ವಿತರಿಸುವಂತಹ ಕೆಲಸವಾಗಬೇಕು, ಈ ನಿಟ್ಟಿನಲ್ಲಿ ಅಂಗಡಿ ಮಾಲೀಕರಿಗೆ ಜಾಗೃತಿ ಮೂಡಿಸಲಾಗಿದ್ದು, ಬಡವರ ಪಡಿತರ ಬಡವರಿಗೆ ಸಿಗುವಂತಾಗಬೇಕು ಎನ್ನುವುದು ನಮ್ಮ ಸರ್ಕಾರದ ಉದ್ದೇಶ ಎಂದು ತಿಳಿಸಿದರು.ಮುಖ್ಯಮಂತ್ರಿ ಅನಿಲ ಭಾಗ್ಯ ಹಾಗೂ ಉಜ್ವಲ್ ಯೋಜನೆಯಡಿ ಸಂಪರ್ಕ ಪಡೆದಿರುವವರಿಗೆ ಮೂರು ತಿಂಗಳ ಸಹಾಯಧನವನ್ನು ನೀಡಲಾಗುತ್ತಿದೆ, ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದವರಿಗೂ ಪಡಿತರವನ್ನು ವಿತರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕ್ರಮವಹಿಸಿದ್ದು, ಆದ್ಯತೆ ಮೇಲೆ ಎಪಿಎಲ್ ಕಾರ್ಡ್ ದಾರರಿಗೂ ಪಡಿತರವನ್ನು ನೀಡಲಾಗುತ್ತಿದೆ ಎಂದರು.ತುಮಕೂರು ಜಿಲ್ಲೆಯಲ್ಲಿ ರಾಗಿಯನ್ನು ಬೆಳೆಯನ್ನು ಹೆಚ್ಚಾಗಿ ಬೆಳೆಯುವುದರಿಂದ 2ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ರೈತರಿಂದ ಖರೀದಿಸಲಾಗಿದ್ದು, 96 ಸಾವಿರ ರೈತರು ರಾಗಿ ಮಾರಲು ನೋಂದಣಿ ಮಾಡಿಕೊಂಡಿದ್ದು, ಹೆಚ್ಚುವರಿಯಾಗಿ ಒಂದು ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿ, ಕಳೆದ ತಿಂಗಳಿಂದ ದೇಶ ಸ್ತಬ್ಧವಾಗಿದೆ, ಕೊರೋನಾ ವಿರುದ್ಧ ಹೋರಾಡಲು ಯುದ್ಧ ಮಾಡುವಂತೆ ಪ್ರಧಾನಿ ಮೋದಿ ಅವರು ನೀಡಿದ ಕರೆಯಂತೆ ದೇಶದ ಜನ ಯುದ್ಧ ಮಾಡಿದ್ದಾರೆ, ಕೊನೆ ಹಂತದಲ್ಲಿ ಭಾರತ ಗೆಲ್ಲಲ್ಲು ಜೂನ್, ಜುಲೈವರೆಗೆ ಹೋರಾಡಬೇಕಿದೆ ಎಂದು ತಿಳಿಸಿದರು.ಲಾಕ್ ಡೌನ್ ನಿಂದ ಕಷ್ಟಕ್ಕೆ ಸಿಲುಕಿರುವ ಕೂಲಿ ಕಾರ್ಮಿಕರು, ಪಡಿತರ ಹೊಂದಿಲ್ಲದವರಿಗೆ ಪಡಿತರವನ್ನು ನೀಡುವಂತೆ ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿದ್ದ ಕರೆಯಂತೆ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಪಡಿತರವನ್ನು ವಿತರಿಸಲಾಗುತ್ತಿದೆ ಎಂದರು.
ಲಾಕ್ ಡೌನ್ ನಿಂದ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಪ್ರಾಮಾಣಿಕವಾಗಿ ತಲುಪಿಸುವಂತಹ ಕೆಲಸ ಮಾಡಬೇಕಿದೆ, ಬಡವರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದಾಗ ಮಾತ್ರ ಸೇವೆಯಾಗುತ್ತದೆ, ಸರಳತೆಯಿಂದ ಸೇವೆ ಮಾಡಿದಾಗ ಮಾತ್ರ ಉತ್ತಮ ಸೇವೆ ಸಿಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಜಿ.ಪಂ.ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ವೈ.ಎಚ್.ಹುಚ್ಚಯ್ಯ, ಗೂಳೂರು ಶಿವಕುಮಾರ್, ರಾಜೇಗೌಡ, ಸಿದ್ದೇಗೌಡ, ತಾ.ಪಂ.ಅಧ್ಯಕ್ಷ ಗಂಗಾಜನೇಯ, ಉಪಾಧ್ಯಕ್ಷ ಶಾಂತಣ್ಣ, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಶಂಕರಣ್ಣ, ಉಪಾಧ್ಯಕ್ಷ ರಘುನಾಥ್, ತಾ.ಪಂ.ಸದಸ್ಯೆ ಸುಜಾತ ರಮೇಶ್, ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ವೈದ್ಯಕೀಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ನರ್ಸ್, ಪೊಲೀಸರು, ಲೈನ್ ಮೆನ್ ಗಳಿಗೆ ಪುಷ್ಪವೃಷ್ಠಿಯನ್ನು ಮಾಡುವ ಮೂಲಕ ಗೌರವಿಸಲಾಯಿತು. ಸಾಮಾಜಿಕ ಅಂತರದಲ್ಲಿ ಪಡಿತರವನ್ನು ನೀಡಲಾಯಿತು.