ಬೆಂಗಳೂರು, ಏ 19, ಮೈಸೂರಿನ ಕೊರೋನಾ ಹಾಟ್ ಸ್ಪಾಟ್ ಆಗಿರುವ ನಂಜನಗೂಡಿಗೆ ಭೇಟಿ ನೀಡಿದ್ದ 10 ವಿದೇಶಿಗರ ಪೈಕಿ 9 ಜನರನ್ನು ಪತ್ತೆಹಚ್ಚಲಾಗಿದೆ ಎಂದು ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ. ನಂಜನಗೂಡಿನಲ್ಲಿ ಇಲ್ಲಿಯವರೆಗೆ 66 ಜನರಿಗೆ ಕೊರೋನಾ ಸೋಂಕು ತಗುಲಿದೆ. ನಂಜನಗೂಡಿಗೆ ಕಾಡುತ್ತಿರುವ ವೈರಸ್ ಮೂಲ ತನಿಖೆ ಮಾಡುವ ವೇಳೆ 10 ವಿದೇಶಿಗರು ಭೇಟಿ ನೀಡಿರುವುದು ತಿಳಿದುಬಂದಿದೆ. ತಕ್ಷಣ ಅವರನ್ನು ಪತ್ತೆಹಚ್ಚಲು ವಿದೇಶಾಂಗ ಸಚಿವಾಲಯದ ನೆರವು ಪಡೆಯಲಾಗಿತ್ತು. ಸಚಿವಾಲಯ ತನ್ನ ರಾಯಭಾರಿಗಳ ಮೂಲಕ ಚೀನಾ, ಜರ್ಮನಿ, ಜಪಾನ್ನ ಮತ್ತು ಅಮೆರಿಕದಿಂದ ಈ ವ್ಯಕ್ತಿಗಳನ್ನು ಟ್ರ್ಯಾಕ್ ಮಾಡಲು ಯತ್ನಿಸಿತ್ತು ಎಂದಿದ್ದಾರೆ. 10 ಜನರ ಪೈಕಿ 9 ಜನರ ಮಾಹಿತಿ ದೊರಕಿದೆ. ಪ್ರತಿಯೊಬ್ಬರೂ ಆರೋಗ್ಯವಂತರಾಗಿದ್ದು ಯಾವುದೇ ಲಕ್ಷಣಗಳನ್ನು ಹೊಂದಿರಲಿಲ್ಲ. ಆದ್ದರಿಂದ ಅವರು ಕೋವಿಡ್-19 ತಪಾಸಣೆಗೊಳಪಟ್ಟಿಲ್ಲ ಎಂದರು .ಜರ್ಮನಿಯಿಂದ ಆಗಮಿಸಿದ್ದ ವಿದೇಶಿ ಪ್ರಜೆಯ ವಿಳಾಸ ಪತ್ತೆಯಾಗಿಲ್ಲ.