ಲೋಕದರ್ಶನ ವರದಿ
ಗೋಕಾಕ 31: ಮನುಷ್ಯ ಜನ್ಮ ಪವಿತ್ರವಾದದ್ದು. ಮನುಷ್ಯ ಜನ್ಮದ ಬದುಕಿನ ಸಾಕ್ಷಾರತೆಯನ್ನು ಕಂಡು ಸಂಸ್ಕಾರಯುತ ಜೀವನವನ್ನು ನಡೆಸಿ ಮುಕ್ತಿಯ ಕಡೆಗೆ ನಡೆಯಬೇಕಾದರೆ ದೈವಿ ಸ್ವರೂಪದ ಆತ್ಮ ಶಕ್ತಿಯನ್ನು ಶಕ್ತಿಯುತವಾಗಿ ಮಾಡುವ ಮೂಲಕ ನಮ್ಮಲ್ಲಿಯೇ ನಾವು ದೈವತ್ವವನ್ನು, ದೇವರ ಸ್ವರೂಪವನ್ನು ಕಾಣಬೇಕಾಗುತ್ತದೆ. ಆದರೆ ಕಾಮ, ಕ್ರೋಧ, ಲೋಭ, ಮಧ, ಮತ್ಸರಾಧಿಗಳಿಂದ ಕೂಡಿದ ಮನಸನ್ನು ನಿಯಂತ್ರಿಸಿದಾಗಲೇ ಮಾತ್ರ ಆತ್ಮ ಶಕ್ತಿಯನ್ನು ಜಾಗೃತಗೊಳಿಸಲು ಸಾಧ್ಯ.
ಬೇಕು ಎಂಬ ಭಯಕೆಗಳಿಂದ ಹೊರಬಂದಾಗ ಮಾತ್ರ ನಮ್ಮ ಬದುಕು ಸಂತೃಪ್ತಮಯವಾಗುತ್ತದೆ. ದೈವತ್ವದ ಸಾಕ್ಷಾರವಾಗುತ್ತದೆ ಎಂದು ಸ.ಸ. ಪ್ರಭುಜೀ ಬೆನ್ನಾಳಿ ಮಹಾರಾಜರು ಇಂಚಗೇರಿಮಠ ಅವರು ಪುಡಕಲಕಟ್ಟಿ ಗ್ರಾಮದ ಇಂಚಗೇರಿ ಮಠದ ಜ್ಞಾನಯೋಗಾಶ್ರಮದಲ್ಲಿ ಜರುಗಿದ ಸದ್ಗರು ಸಮರ್ಥ ಮಾಧವಾನಂದ ಪ್ರಭುಜೀ ಅವರ ಜಯಂತ್ರೋತ್ಸವದ ನಿಮಿತ್ಯ ಹಮ್ಮಿಕೊಂಡ ಸಪ್ತಾಹದ ಆಧ್ಯಾತ್ಮ ಚಿಂತನ ಪ್ರವಚನದ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು.
ವರ್ಷ ಪದ್ದತಿಯ ಸಂಪ್ರದಾಯದಂತೆ ಮಲ್ಲೂರ ಗ್ರಾಮದಿಂದ ಆಗಮಿಸಿದ ಪಾಲಕಿ ಸೇವೆಯೊಂದಿಗೆ ಪ್ರಾರಂಭವಾದ ಆಧ್ಯಾತ್ಮ ಚಿಂತನಗೋಷ್ಠಿಯ ಪ್ರಾರಂಭೋತ್ಸವದ ಈ ಸಮಾರಂಭದಲ್ಲಿ ಗೊರಗುದ್ದಿಯ ತುಕಾರಾಮ ಮಹಾರಾಜರು, ಇಂಚಗೇರಿ ಸಂಪ್ರದಾಯದ ಪ್ರಚಾರಕ ಚಿದಾನಂದ ಪಾಲಭಾಂವಿ, ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ, ಮಾಜಿ ತಾ.ಪಂ. ಅಧ್ಯಕ್ಷ ಗುರಪ್ಪ ಹಿಟ್ಟಣಗಿ, ಮುಖಂಡರುಗಳಾದ ಅಂಬಿರಾವ್ ಪಾಟೀಲ, ಜಿ.ಪಂ. ಸದಸ್ಯರುಗಳಾದ ತುಕಾರಾಮ ಕಾಗಲ್, ಮಡೆಪ್ಪ ತೋಳಿನವರ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗ್ರಾಮದ ಹಿರಿಯರಾದ ಗೋಪಾಲ ಗಿರಿಯಾಲ, ರಾಯಪ್ಪ ಕುಂಟಗೋಳ, ಶಿವಪುತ್ರ ಗೌಡರ, ಶಿವನಪ್ಪ ಜನಕಟ್ಟಿ ಮುಂತಾದ ಗಣ್ಯರು ಕಾರ್ಯಕ್ರಮವನ್ನು ಸಂಯೋಜಿಸಿದ್ದರು.