ಅಮೆರಿಕ ಅಧ್ಯಕ್ಷ ಭೇಟಿ ವಿಶೇಷವಾದುದು; ಮೋದಿ

ನವದೆಹಲಿ, ಫೆ 12 :   ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತಕ್ಕೆ ಭೇಟಿ ವಿಶೇಷವಾದುದು ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ಉಭಯ ರಾಷ್ಟ್ರಗಳ ನಡುವಿನ ಸ್ನೇಹವನ್ನು ಸದೃಢಗೊಳಿಸುತ್ತದೆ ಎಂದಿದ್ದಾರೆ. 

ಈ ಕುರಿತು ಸರಣಿ ಟ್ವೀಟ್  ಮಾಡಿರುವ ಮೋದಿ, 'ನಮ್ಮ ಪ್ರತಿಷ್ಠಿತ ಅತಿಥಿ'ಗೆ ಭಾರತ ಅತ್ಯುತ್ತಮ ಸ್ವಾಗತ ಕೋರಲಿದೆ ಎಂದಿದ್ದಾಋೆ. 

"ಫೆ. 24 ಹಾಗೂ 25ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸುತ್ತಿರುವುದು ಸಂತಸ ತಂದಿದೆ. ಅವರಿಗೆ ಭಾರತ ಅತ್ಯುತ್ತಮ ಸ್ವಾಗತ ನೀಡಲಿದೆ. ಇದು ವಿಶೇಷ ಭೇಟಿಯಾಗಿದ್ದು, ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಸದೃಢಗೊಳಿಸುತ್ತದೆ" ಎಂದಿದ್ದಾರೆ.  

 ಮತ್ತೊಂದು ಟ್ವೀಟ್ ನಲ್ಲಿ " ಅಮೆರಿಕ ಮತ್ತು ಭಾರತ ಪ್ರಜಾಪ್ರಭುತ್ವ ಹಾಗೂ ಬಹುತ್ವದ ಸಮಾನ ಬದ್ಧತೆಯನ್ನು ಹೊಂದಿವೆ. ನಮ್ಮ ರಾಷ್ಟ್ರಗಳು ಬೃಹತ್ ಸಮಸ್ಯೆಗಳ ಪರಿಹಾರಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿದೆ. ನಮ್ಮ ನಡುವಿನ ಸಂಬಂಧ ಕೇವಲ ಪ್ರಜೆಗಳಿಗೆ ಮಾತ್ರವಲ್ಲದೇ ವಿಶ್ವಕ್ಕೆ ನೆರವಾಗುತ್ತದೆ" ಎಂದು ಹೇಳಿದ್ದಾರೆ.