ಚೌಡೇಶ್ವರಿ ದೇವಿ ಜಾತ್ರೆಯ ಉತ್ಸವ

Festival of Chaudeshwari Devi Jatra

ಚೌಡೇಶ್ವರಿ ದೇವಿ ಜಾತ್ರೆಯ ಉತ್ಸವ 

ರಾಣಿಬೆನ್ನೂರ 13: ಇಲ್ಲಿನ ಮಾರುತಿ ನಗರದ ಗ್ರಾಮದೇವತೆ ತುಂಗಾಜಲ ಚೌಡೇಶ್ವರಿ ದೇವಿಯ ಜಾತ್ರೆಯ ಉತ್ಸವದ ಮೆರವಣೆಗೆಯು ಶೃಂಗರಿಸಿದ ರಥದಲ್ಲಿ ಸಕಲ ವಾಧ್ಯಗಳೊಂದಿಗೆ ಸೋಮವಾರ ಬಹುವಿಜೃಂಭಣೆಯಿಂದ ನೆರವೇರಿತು.  

  ಶಾಸಕ ಪ್ರಕಾಶ ಕೋಳಿವಾಡ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣೆಗೆಗೆ ಚಾಲನೆ ನೀಡಿದರು. ಮೆರವಣೆಗೆ ಸಾಗುವ ದಾರಿಯೂದ್ದಕ್ಕೂ ನಗರದಲ್ಲಿ ತಳಿರು ತೋರಣ ಕಟ್ಟಿ, ರಂಗೋಲಿ ಬಿಡಿಸಿ ದೇವಿಯನ್ನು ಸ್ವಾಗತಿಸಲು ಕಮಾನುಗಳನ್ನು ಕಟ್ಟಿ ಶೃಂಗರಿಸಲಾಗಿತ್ತು.  

ಸುಮಂಗಲೆಯರು ಆರತಿ ಬೆಳಗಿ ಚತ್ರ ಚಾಮರ ಬೀಸಿದರು. ಕರಡಿ ಮಜಲು, ಡೊಳ್ಳು, ವೀರಗಾಸೆ, ಚಂಡೆ, ಕಂಸಾಳೆ, ಕರಗ, ತಮಟೆ, ಜಾಂಜ್‌ಮೇಳ ಮತ್ತು ನೂರಾರು ಯುವಕರು ಮೆರವಣಿಗೆಯುದ್ದಕ್ಕೂ ನೃತ್ಯ ಪ್ರದರ್ಶಿಸಿದರು. ಯುವಕರು ಸಿಡಿ ಮದ್ದುಗಳನ್ನು ಸಿಡಿಸಿದರು.  ಮೆರವಣೆಗಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡಿತು.  

ಮೆರವಣಿಗೆಯಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ, ಪೂರ್ಣಿಮಾಕೋಳಿವಾಡ, ಸಂತೋಷಕುಮಾರ ಪಾಟೀಲ, ಬಸವರಾಜ ಹುಚ್ಚಗೊಂಡರ, ಕುಮಾರ ಮಡಿವಾಳರ, ಚೋಳಪ್ಪ ಕಸವಾಳ, ಪುಟ್ಟಪ್ಪ ಮರಿಯಮ್ಮನವರ, ಮಲ್ಲಣ್ಣ ಅಂಗಡಿ, ಬಸವರಾಜ ಲಕ್ಷ್ಮೇಶ್ವರ, ಸಿದ್ದಪ್ಪ ಬಾಗಿಲವರ, ಶಿವಾನಂದ ಸಾಲಗೇರಿ, ಪ್ರಕಾಶ ಪೂಜಾರ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.