ರಸ್ತೆ ಸುರಕ್ಷತೆ ಜನಜಾಗೃತಿ

Road safety awareness

ರಸ್ತೆ ಸುರಕ್ಷತೆ ಜನಜಾಗೃತಿ 

ಕೊಪ್ಪಳ 13: ವಾಹನಗಳು ಮನೋರಂಜನೆಯ ಸಾಧನಗಳಲ್ಲ,ಪ್ರತಿಯೊಬ್ಬ ವಾಹನ ಚಾಲಕ ಮತ್ತು ಸವಾರರಲ್ಲಿ ರಸ್ತೆ ಸುರಕ್ಷತೆ ಅರಿವು ಮೂಡಿಸುವ ಜನಜಾಗೃತಿ ಕಾರ್ಯವನ್ನು ಪ್ರಾದೇಶಿಕ ಸಾರಿಗೆ ಕಚೇರಿ ಹಮ್ಮಿಕೊಂಡಿದೆ. 

ಜನವರಿ ತಿಂಗಳಲ್ಲಿ ಆಚರಿಸಲ್ಪಡುವ ರಸ್ತೆ ಸುರಕ್ಷತಾ ಮಾಸಿಕದ ಅಂಗವಾಗಿ ಇಲ್ಲಿನ ಹೊಸಪೇಟೆ ರಸ್ತೆಯ ಆರ್‌.ಟಿ.ಓ.ಚಾಲನಾ ಪರೀಕ್ಷೆ ಆವರಣದಲ್ಲಿ ಇಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀಕಾಂತ ನಾಲವಾರ ನೇತೃತ್ವದಲ್ಲಿ ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮ ಜರುಗಿತು. 

ಹಿರಿಯ ಮೋಟಾರು ವಾಹನ ನೀರೀಕ್ಷಕ ಪ್ರಭಾಕರ ಎನ್ ಮಾತನಾಡಿ, ಎಲ್ಲ ವಾಹನ ಚಾಲಕರು ರಸ್ತೆ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು.ವೇಗದ ಮಿತಿ ಹಾಗೂ ಚಾಲನೆಯ ಇತಿಮಿತಿಗಳನ್ನು ಅರ್ಥ ಮಾಡಿಕೊಳ್ಳಬೇಕು.ಕಾರು ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್‌ ಧರಿಸಿ,ನಿಧಾನಿಸಿದರೆ ಅನೇಕ ಅಪಘಾತಗಳನ್ನು ತಪ್ಪಿಸಲು ಸಾಧ್ಯ ಎಂದರು. 

ಹಿರಿಯ ಮೋಟಾರು ವಾಹನ ನೀರೀಕ್ಷಕ ಮಂಜುನಾಥ ಪ್ರಸಾದ ಮಾತನಾಡಿ, ನಾವು ತೆರಳಬೇಕಾದ ಸ್ಥಳಕ್ಕೆ ನಿಗದಿತ ಅವಧಿಯೊಳಗೆ ತಲುಪಲು ವೇಗವಾಗಿ ವಾಹನ ಚಾಲನೆ ಮಾಡಬಾರದು, ನಿಧಾನವಾಗಿ ಜಾಗರೂಕತೆಯಿಂದ ಚಾಲನೆ ಮಾಡಬೇಕು.ನಿರ್ದಿಷ್ಟ ಸಮಯಕ್ಕೆ ತಲುಪಲು ಸ್ವಲ್ಪ ಮುಂಚಿತವಾಗಿ ಹೊರಡುವ ಮನೋಭಾವ ರೂಢಿಸಿಕೊಳ್ಳಬೇಕು.ರಸ್ತೆ ಸುರಕ್ಷತೆ ಬಗ್ಗೆ ಯುವಜನರಲ್ಲಿ ಹೆಚ್ಚು ಜಾಗೃತಿ ಮೂಡಿಸುವುದು ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುವುದು ಎಂದರು. 

ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಡಿ.ಡೊಳ್ಳಿನ ಮಾತನಾಡಿ, ರಸ್ತೆ ಸುರಕ್ಷತೆ ಜಾಗೃತಿಗಾಗಿ ಪ್ರಾದೇಶಿಕ ಸಾರಿಗೆ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.ನೀವು ರಸ್ತೆಯ ಹಿರೋಗಳಾಗಿ ಎಂಬ ಘೋಷವಾಕ್ಯದಡಿ ಈ ಬಾರಿ ರಸ್ತೆ ಸುರಕ್ಷತೆ ಮಾಸಾಚರಣೆ ಮಾಡಲಾಗುತ್ತಿದೆ.ಪ್ರತಿಯೊಬ್ಬರು ಸಾರಿಗೆ,ಸಂಚಾರ ನಿಯಮಗಳನ್ನು ಅರಿತುಕೊಂಡು ,ಅಳವಡಿಸಿಕೊಂಡು,ಕಟ್ಟು ನಿಟ್ಟಾಗಿ ಪಾಲಿಸಿದರೆ ರಸ್ತೆ ಸುರಕ್ಷತೆಯನ್ನು ಪರಿಣಾಮಕಾರಿಗೊಳಿಸಲು ಸಾಧ್ಯ ಎಂದರು. 

ಪ್ರಾದೇಶಿಕ ಸಾರಿಗೆ ಕಚೇರಿ ಅಧೀಕ್ಷಕ ನರಸಪ್ಪ ಸೇರಿದಂತೆ ವಾಹನ ಚಾಲಕರು,ಸವಾರರು,ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.